ADVERTISEMENT

ತಯಾರಿಕಾ ವಲಯದಲ್ಲಿ ಕುಸಿತ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 15:58 IST
Last Updated 1 ಜೂನ್ 2021, 15:58 IST

ನವದೆಹಲಿ: ಕೋವಿಡ್–19 ಸಾಂಕ್ರಾಮಿಕದ ಎರಡನೆಯ ಅಲೆಯಿಂದಾಗಿ ದೇಶದ ಅರ್ಥ ವ್ಯವಸ್ಥೆಯ ಮೇಲೆ ಆಗಿರುವ ಪರಿಣಾಮಗಳು ಗೋಚರಿಸಲು ಆರಂಭವಾಗಿವೆ. ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ) ಸೂಚ್ಯಂಕದ ಪ್ರಕಾರ ತಯಾರಿಕಾ ವಲಯದ ಉತ್ಪಾದಕತೆಯು ಮೇ ತಿಂಗಳಲ್ಲಿ 10 ತಿಂಗಳುಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ಪಿಎಂಐ ಸೂಚ್ಯಂಕವು ಮೇ ತಿಂಗಳಿನಲ್ಲಿ 50.8ಕ್ಕೆ ಇಳಿಕೆ ಕಂಡಿದೆ. ಇದು ಏಪ್ರಿಲ್‌ನಲ್ಲಿ 55.5ರ ಮಟ್ಟದಲ್ಲಿ ಇತ್ತು. ಒಂದೇ ತಿಂಗಳ ಅವಧಿಯಲ್ಲಿ ಸೂಚ್ಯಂಕವು ಭಾರಿ ಇಳಿಕೆ ದಾಖಲಿಸಿದೆ.

‘ಕೋವಿಡ್–19 ಸಾಂಕ್ರಾಮಿಕ ತೀವ್ರಗೊಂಡಂತೆಲ್ಲ ದೇಶದ ತಯಾರಿಕಾ ವಲಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆ. ಮಾರಾಟ, ಉತ್ಪಾದನೆ ಹಾಗೂ ಕಚ್ಚಾ ವಸ್ತುಗಳ ಖರೀದಿ ಮೇ ತಿಂಗಳಲ್ಲಿ ಕಡಿಮೆ ಆಗಿವೆ’ ಎಂದು ಐಎಚ್‌ಎಸ್‌ ಮರ್ಕಿಟ್ ಸಂಸ್ಥೆಯ ಅರ್ಥಶಾಸ್ತ್ರಜ್ಞೆ ಪಾಲಿಯಾನಾ ಡಿ. ಲಿಮಾ ತಿಳಿಸಿದರು.

ADVERTISEMENT

ಹೊಸ ಬೇಡಿಕೆಗಳು ಬರದ ಕಾರಣ ತಯಾರಿಕಾ ವಲಯದ ಕಂಪನಿಗಳು ಕಾರ್ಮಿಕರ ಸಂಖ್ಯೆಯನ್ನು ಮತ್ತೆ ತಗ್ಗಿಸಿವೆ. ಉದ್ಯೋಗದ ಸಂಖ್ಯೆಯಲ್ಲಿ ಆಗಿರುವ ಇಳಿಕೆಯ ಪ್ರಮಾಣ ಚಿಕ್ಕದು. ಆದರೆ ಇದು ಏಪ್ರಿಲ್‌ ತಿಂಗಳಿನಲ್ಲಿನ ಇಳಿಕೆಗಿಂತ ಜಾಸ್ತಿ ಎಂದು ಅವರು ಹೇಳಿದರು. ಜನವರಿಯಿಂದ ಮಾರ್ಚ್‌ವರೆಗಿನ ತ್ರೈಮಾಸಿಕದಲ್ಲಿ ತಯಾರಿಕಾ ವಲಯದ ಬೆಳವಣಿಗೆಯು ಉತ್ತಮವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.