
ಬೆಂಗಳೂರು: ‘ಬೆಂಗಳೂರಿನ ಪ್ರಮುಖ ತಂತ್ರಜ್ಞಾನ ಪಾರ್ಕ್‌ಗಳಲ್ಲಿ ಡಿಜಿಟಲ್ ಶಾಖೆಗಳನ್ನು ತೆರೆಯಲು ಯೋಜಿಸಲಾಗಿದೆ’ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (ಪಿಎನ್‌ಬಿ) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಶೋಕ್ ಚಂದ್ರ ಹೇಳಿದ್ದಾರೆ.
ಇದರ ಜೊತೆಗೆ, ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನವೋದ್ಯಮಗಳಿಗೆ ಮೀಸಲಾದ ಶಾಖೆಯನ್ನು ಸ್ಥಾಪಿಸಲಾಗುವುದು. ಈ ಶಾಖೆಯು ಬ್ಯಾಂಕಿಂಗ್ ಸೇವೆಗಳು, ಸಾಲದ ನೆರವು ಮತ್ತು ಹಣಕಾಸಿಗೆ ಸಂಬಂಧಿಸಿದ ಸಲಹೆಗಳನ್ನು ನೀಡಲಿದೆ ಎಂದು ಅವರು ಹೇಳಿರುವುದಾಗಿ ಪ್ರಕಟಣೆ ತಿಳಿಸಿದೆ.
ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಹೊಸ ಶಾಖೆಗಳನ್ನು ಆರಂಭಿಸುವ ಮೂಲಕ ಬ್ಯಾಂಕ್‌ನ ವಹಿವಾಟನ್ನು ವಿಸ್ತರಿಸಲಾಗುವುದು ಎಂದಿದ್ದಾರೆ.
ಸೇವಾ ಗುಣಮಟ್ಟಕ್ಕೆ ಬ್ಯಾಂಕ್ ಆದ್ಯತೆ ನೀಡುತ್ತಿದ್ದು, ಕ್ಯೂಆರ್ ಕೋಡ್ ಆಧಾರಿತ ಗ್ರಾಹಕ ಪ್ರತಿಕ್ರಿಯೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಗ್ರಾಹಕರು ಶಾಖೆಗಳಲ್ಲಿ ಸಿಗುವ ಸೇವೆಗಳ ಕುರಿತು ನೀಡುವ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಪ್ರತಿಕ್ರಿಯೆಗಳನ್ನು ಬ್ಯಾಂಕ್‌ನ ನೌಕರರ ಕಾರ್ಯಕ್ಷಮತೆಯ ಮೌಲ್ಯಮಾಪನದ ಜೊತೆ ಬೆಸೆಯಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವ ಮಹಿಳೆಯರಿಗೆ ₹10 ಲಕ್ಷ ಮೌಲ್ಯದ ಕ್ಯಾನ್ಸರ್ ವಿಮಾ ರಕ್ಷಣೆ, ಸ್ವ-ಸಹಾಯ ಗುಂಪುಗಳು (ಎಸ್‌ಎಚ್‌ಜಿಗಳು) ಮತ್ತು ಮಹಿಳಾ ಉದ್ಯಮಿಗಳಿಗೆ ಆದ್ಯತೆಯ ಮೇರೆಗೆ ಸಾಲ ನೀಡುವುದು ಸೇರಿದಂತೆ ಮಹಿಳಾ ಗ್ರಾಹಕರಿಗೆ ಬ್ಯಾಂಕ್ ವಿವಿಧ ಯೋಜನೆಗಳನ್ನು ಆರಂಭಿಸಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.