ADVERTISEMENT

ಐಒಸಿ, ಬಿಪಿಸಿಎಲ್‌ಗೆ ₹3 ಕೋಟಿ ದಂಡ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2023, 14:15 IST
Last Updated 22 ಅಕ್ಟೋಬರ್ 2023, 14:15 IST
ಸಾಂದರ್ಭಿಕ
ಸಾಂದರ್ಭಿಕ   

ನವದೆಹಲಿ(ಪಿಟಿಐ): ಪೆಟ್ರೋಲ್‌ ಬಂಕ್‌ಗಳಲ್ಲಿ ಮಾಲಿನ್ಯ ನಿಯಂತ್ರಣ ಸಾಧನಗಳನ್ನು ಅಳವಡಿಸದ್ದಕ್ಕಾಗಿ ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮ (ಐಒಸಿ) ಮತ್ತು ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ಗೆ (ಬಿಪಿಸಿಎಲ್‌) ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ದಂಡ ವಿಧಿಸಿದೆ.

ಮಂಡಳಿಯು ಐಒಸಿಗೆ ₹1 ಕೋಟಿ ಮತ್ತು ಬಿಪಿಸಿಎಲ್‌ಗೆ ₹2 ಕೋಟಿ ದಂಡ ವಿಧಿಸಿದೆ ಎಂದು ಈ ಸಂಸ್ಥೆಗಳು ಪ್ರತ್ಯೇಕವಾಗಿ ಷೇರು ಮಾರುಕಟ್ಟೆಗೆ ತಿಳಿಸಿವೆ.

ಇಂಧನ ಕೇಂದ್ರದಲ್ಲಿ ವಾಹನಕ್ಕೆ ಇಂಧನ ತುಂಬಿಸಿದಾಗ, ಪೆಟ್ರೋಲ್ ಆವಿಯು ವಾತಾವರಣಕ್ಕೆ ಹರಡುತ್ತದೆ. ಈ ಆವಿಯು ಬೆಂಜೀನ್, ಟೊಲ್ಯೂನ್ ಮತ್ತು ಕ್ಸೈಲೀನ್‌ನಂತಹ ಕ್ಯಾನ್ಸರ್-ಉಂಟುಮಾಡುವ ಮಾಲಿನ್ಯ ಕಾರಕಗಳನ್ನು ಹೊಂದಿರುತ್ತದೆ. ಪೆಟ್ರೋಲ್ ಆವಿ ಹೊರಹೋಗುವುದನ್ನು ತಡೆಯಲು ಪೆಟ್ರೋಲ್ ಪಂಪ್‌ಗಳಲ್ಲಿ ವಿಆರ್‌ಎಸ್‌ ಅನ್ನು ಕಾಲಮಿತಿಯೊಳಗೆ ಅಳವಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ 2016ರಲ್ಲಿ ಸೂಚಿಸಿತ್ತು. 

ADVERTISEMENT

ಆದರೆ ರಾಷ್ಟ್ರ ರಾಜಧಾನಿ ಪ್ರದೇಶದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಆವಿ ತಡೆ ವ್ಯವಸ್ಥೆಯನ್ನು (ವೇಪರ್‌ ರಿಕವರಿ ಸಿಸ್ಟಮ್‌–ವಿಆರ್‌ಎಸ್‌) ಸುಪ್ರೀಂ ಕೋರ್ಟ್‌ ನೀಡಿದ ಅವಧಿಯೊಳಗೆ ಸ್ಥಾಪಿಸದಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಕಂಪನಿಯ ಕಾರ್ಯಾಚರಣೆ ಮತ್ತು ಇತರ ಚಟುವಟಿಕೆಗಳ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಐಒಸಿ ಹೇಳಿದೆ.

₹2 ಕೋಟಿ ದಂಡ ಪಾವತಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯು ನೋಟಿಸ್‌ ನೀಡಿದೆ. ಈ ನೋಟಿಸ್‌ ಅನ್ನು  ಪರಿಶೀಲಿಸುತ್ತಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಕ್ತ ಉತ್ತರ ನೀಡಲಾಗುವುದು ಎಂದು ಬಿಪಿಸಿಎಲ್‌ ತಿಳಿಸಿದೆ. 

ಎರಡೂ ಕಂಪನಿಗಳು ಇದೇ ಅಕ್ಟೋಬರ್ 19ರಂದು ನೋಟಿಸ್‌ಗಳನ್ನು ಪಡೆದಿದ್ದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.