ADVERTISEMENT

ವಿದ್ಯುತ್‌ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ನಿಯಮಗಳು ಸಡಿಲ

ಪರಿಸರ ಸ್ನೇಹಿ ವಾಹನ ಬಳಕೆ ಉತ್ತೇಜಿಸಲು ಕ್ರಮ

ಪಿಟಿಐ
Published 16 ಜನವರಿ 2022, 3:52 IST
Last Updated 16 ಜನವರಿ 2022, 3:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ (ಇ.ವಿ.) ಚಾರ್ಜಿಂಗ್‌ ಮೂಲಸೌಕರ್ಯ ಕಲ್ಪಿಸಲು ಅನುಕೂಲ ಆಗುವಂತೆ ಇಂಧನ ಸಚಿವಾಲಯವು ನಿಯಮಗಳಲ್ಲಿ ಬದಲಾವಣೆ ತಂದಿದೆ.

ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ, ಇ.ವಿ. ಹೊಂದಿರುವವರು ತಮ್ಮ ಮನೆ ಅಥವಾ ಕಚೇರಿಯಲ್ಲಿ ಹಾಲಿ ಇರುವ ವಿದ್ಯುತ್ ಸಂಪರ್ಕವನ್ನೇ ಬಳಸಿಕೊಂಡು ವಾಹನವನ್ನು ಚಾರ್ಜ್‌ ಮಾಡಬಹುದು. ಪರವಾನಗಿ ಇಲ್ಲದಿದ್ದರೂ ಚಾರ್ಜಿಂಗ್ ಮೂಲಸೌಕರ್ಯ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ.

ಯಾವುದೇ ವ್ಯಕ್ತಿ/ಸಂಸ್ಥೆಯು ಪರವಾನಗಿ ಇಲ್ಲದೇ ಸಾರ್ವಜನಿಕ ಬಳಕೆಗೆ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಬಹುದು. ಆದರೆ ಅಂತಹ ಕೇಂದ್ರಗಳು ತಾಂತ್ರಿಕ, ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಗುಣಮಟ್ಟ ಮತ್ತು ನಿಯಮಗಳನ್ನು ಅನುಸರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಮನೆ ಬಳಕೆಗೆ ಪಾವತಿಸುವ ವಿದ್ಯುತ್‌ ಶುಲ್ಕವೇ ವಾಹನವನ್ನು ಚಾರ್ಜ್‌ ಮಾಡುವುದಕ್ಕೂ ಅನ್ವಯವಾಗಲಿದೆ.

ADVERTISEMENT

ಸರ್ಕಾರ/ಸಾರ್ವಜನಿಕ ಸಂಸ್ಥೆಗಳ ಬಳಿ ಲಭ್ಯವಿರುವ ಜಾಗವನ್ನು ಚಾರ್ಜಿಂಗ್‌ ಕೇಂದ್ರ ಸ್ಥಾಪನೆಗೆ ಆದಾಯ ಹಂಚಿಕೆಯ ಆಧಾರದ ಮೇಲೆ ನೀಡಬಹುದು. ಚಾರ್ಜಿಂಗ್‌ ಕೇಂದ್ರ ಸ್ಥಾಪಿಸುವ ಕಂಪನಿಯು ಜಾಗದ ಮಾಲೀಕರಿಗೆ ಪ್ರತಿ ಕಿಲೋವಾಟ್‌ಗೆ ₹ 1 ರಂತೆ ಮೂರು ತಿಂಗಳಿಗೊಮ್ಮೆ ಹಣವನ್ನು ಪಾವತಿಸಬೇಕು. ಆದಾಯ ಹಂಚಿಕೆ ಒಪ್ಪಂದವನ್ನು ಆರಂಭಿಕ ಹಂತದಲ್ಲಿ 10 ವರ್ಷಗಳ ಅವಧಿಗೆ ಮಾಡಿಕೊಳ್ಳಬಹುದು.

ಇಂತಹ ಚಾರ್ಜಿಂಗ್‌ ಕೇಂದ್ರಗಳಿಗೆ ಮಹಾ ನಗರಗಳಲ್ಲಿ ಏಳು ದಿನಗಳಲ್ಲಿ, ಇತರ ನಗರ ಸ್ಥಳೀಯಾಡಳಿತ ಸಂಸ್ಥೆ ವ್ಯಾಪ್ತಿಯಲ್ಲಿ ಹದಿನೈದು ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮೂವತ್ತು ದಿನಗಳಲ್ಲಿ ವಿದ್ಯುತ್‌ ಸಂಪರ್ಕವನ್ನು ಒದಗಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.