ADVERTISEMENT

ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:45 IST
Last Updated 24 ಸೆಪ್ಟೆಂಬರ್ 2019, 19:45 IST
ಪುರಾಣಿಕ್
ಪುರಾಣಿಕ್   

ಮೈನುದ್ದಿನ್, ಬಿಜಾಪುರ

ನನ್ನ ತಂದೆ 1970ರಲ್ಲಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯಲ್ಲಿ ಹಣವಿಟ್ಟಿದ್ದರು. 2007ರಲ್ಲಿ ತೀರಿಕೊಂಡರು. ಈಗ ನಾನು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿ ಕೇಳಿದರೆ, ಮಾಹಿತಿ ಇಲ್ಲವೆನ್ನುತ್ತಾರೆ. ಹಣ ವಾಪಾಸ್ ಪಡೆಯುವ ಬಗೆ ತಿಳಿಸಿ.

ಉತ್ತರ: ನಿಮ್ಮೊಡನೆ ಏನೂ ದಾಖಲೆಗಳಿಲ್ಲದೇ, ಮಾಹಿತಿ ಕೇಳಿದರೆ, ಯಾವ ಇಲಾಖೆಯಲ್ಲಿಯೂ ಇದೇ ಉತ್ತರ ಸಿಗುತ್ತದೆ. 2007 ರಿಂದ 2019ರ ತನಕ ನೀವು ಸುಮ್ಮನಿದ್ದು ಈಗ ಏಕೆ ಕೇಳುತ್ತೀರಿ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಜೊತೆಗೆ 10 ವರ್ಷ ದಾಟಿದ ಠೇವಣಿ ಅಮಾನತ್ ಖಾತೆಗೆ ವರ್ಗಾಯಿಸುತ್ತಾರೆ ಹಾಗೂ ಅದರ ಮುಖ್ಯ ಕಚೇರಿಗೆ ವರ್ಗಾಯಿಸುತ್ತಾರೆ. ನಿಮ್ಮೊಡನೆ ಪುರಾವೆಗಳಿದ್ದರೆ ನನಗೆ 9448015300 ಕರೆ ಮಾಡಿ.

ADVERTISEMENT


ರಾಮಣ್ಣ, ಮೈಸೂರು

NHAI - REC ಬಾಂಡುಗಳ ಅವಧಿ ಮುಗಿದ ನಂತರ Capital Gain Tax ಅಥವಾ Income Tax ಬರುತ್ತಿದೆಯೇ

ಉತ್ತರ:NHAI - REC ಬಾಂಡುಗಳು 5 ವರ್ಷ ಮುಗಿದು ಪಡೆಯುವಾಗCapital Gain Tax ಬರುವುದಿಲ್ಲ. ಈ ಹಣ ಯಾವ ಬಗೆಯಿಂದಲೂ ವಿನಿಯೋಗಿಸಬಹುದು. ಈ ಬಾಂಡುಗಳಿಂದ ಬರುವ ಬಡ್ಡಿಗೆ ಆದಾಯ ತೆರಿಗೆ ಇದ್ದರೂ, ಓರ್ವ ವ್ಯಕ್ತಿಯ ಒಟ್ಟು ವಾರ್ಷಿಕ ಆದಾಯ₹ 5 ಲಕ್ಷದೊಳಗಿರುವಲ್ಲಿ (ಬಡ್ಡಿ+ಇತರೆ ಆದಾಯ – ಗರಿಷ್ಠ₹ 5 ಲಕ್ಷ) ಆದಾಯ ತೆರಿಗೆ ಬರುವುದಿಲ್ಲ. ತೆರಿಗೆ ಲಾಭ ಜನರಿಗೆ ಸಿಗಲೆಂದೇ ಈ ಬಾಂಡುಗಳನ್ನು (Sec 54EC) ಪರಿಚಯಿಸಲಾಗಿದೆ.

ಉಮೇಶ, ಬೆಂಗಳೂರು

ನಾನು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ. ನನ್ನೊಡನೆ₹ 4 ಲಕ್ಷವಿದೆ. ನಾನು ಪ್ರತಿ ತಿಂಗಳೂ ಬಡ್ಡಿ ಪಡೆಯಲು ಯಾವ ಬ್ಯಾಂಕಿನಲ್ಲಿ ಹಣ ಇರಿಸಲಿ. ಬಡ್ಡಿ ದರ ಎಷ್ಟು, ತಿಂಗಳು ಎಷ್ಟು ಬಡ್ಡಿ ಪಡೆಯಬಹುದು. ಮಧ್ಯದಲ್ಲಿ ಬೇಕಾದರೆ ವಾಪಸು ಪಡೆಯಬಹುದೇ ತಿಳಿಸಿರಿ.

ಉತ್ತರ: ನೀವು ಪ್ರತೀ ತಿಂಗಳೂ ಬಡ್ಡಿ ಪಡೆಯುವಲ್ಲಿ ಹೆಚ್ಚಿನ ಬ್ಯಾಂಕುಗಳು ನಿಗಡಿಪಡಿಸಿದ ಬಡ್ಡಿದರದಲ್ಲಿ ಸ್ವಲ್ಪ ಕಡಿತ ಮಾಡಿ (Discounted Rate) ಕೊಡುತ್ತಾರೆ. ಈ ಕಾರಣದಿಂದ 3 ತಿಂಗಳಿಗೊಮ್ಮೆ ಬಡ್ಡಿ ಪಡೆಯಿರಿ. ಕೆಲವು ಉತ್ತಮ ಸಹಕಾರಿ ಬ್ಯಾಂಕುಗಳು, ಸ್ವಲ್ಪ ಹೆಚ್ಚಿನ ಬಡ್ಡಿ ಹಾಗೂ ಪ್ರತಿ ತಿಂಗಳು ಬಡ್ಡಿಯನ್ನು ಬಡ್ಡಿ ದರದಲ್ಲಿ ಕಡಿತವಿಲ್ಲದೇ ಕೊಡುತ್ತಾರೆ. ಬಡ್ಡಿ ದರ ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸವಾಗುತ್ತದೆ. ಮಧ್ಯದಲ್ಲಿ ಬೇಕಾದರೆ ಅಸಲು ಪಡೆಯುವ ಸೌಲತ್ತು ಇರುತ್ತದೆ, ಆದರೆ ಪಡೆದಿರುವ ಬಡ್ಡಿಯಲ್ಲಿ ಸ್ವಲ್ಪ ಹಿಂತಿರುಗಿಸಬೇಕಾಗುತ್ತದೆ. ಅಸಲು ಸಂಪೂರ್ಣ ಯಾವಾಗ ಬೇಕಾದರೂ ಪಡೆಯಬಹುದು.

ಪ್ರಹ್ಲಾದರಾವ್, ಬೆಂಗಳೂರು

ನಾನು ಒಂದು ಮನೆ ಮಾರಾಟ ಮಾಡಬೇಕೆಂದಿರುವೆ. ಅದರಿಂದ₹ 40 ಲಕ್ಷ ಬರಬಹುದು. ಮನೆ ಮಾರಾಟ ಮಾಡಿ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ವಾಸವಾಗಲು ಇಚ್ಛಿಸಿದ್ದೇನೆ.₹ 40 ಲಕ್ಷ ಬ್ಯಾಂಕ್ ಠೇವಣಿ ಇರಿಸಿ ತಿಂಗಳು ತಿಂಗಳು ಬಡ್ಡಿ ಪಡೆಯಲು ನಿಮ್ಮ ಸಲಹೆ ಬೇಕಾಗಿದೆ.

ಉತ್ತರ: ನೀವು ಮನೆ ಮಾರಾಟ ಮಾಡಿ ಬರುವ ಹಣದಲ್ಲಿ, ಸದರಿ ಮನೆ ಕೊಳ್ಳುವಾಗ ಕೊಟ್ಟ ಹಣ Cost Of Inflation Index ಕಳೆದು ಉಳಿದ ಹಣಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ತುಂಬ ಬೇಕಾಗುತ್ತದೆ. ತೆರಿಗೆ ಉಳಿಸಲು 5 ವರ್ಷಗಳ NHIA- REC ಬಾಂಡುಗಳಲ್ಲಿ ತೊಡಗಿಸಬಹುದು. ಬಡ್ಡಿ ದರ ಶೇ 5.75 ಆದರೆ ಇಲ್ಲಿ ವಾರ್ಷಿಕ ಬಡ್ಡಿ ಕೊಡುತ್ತಾರೆ. ತೆರಿಗೆ ಶೇ 20 ಇದ್ದು, ಈ ಬಾಂಡುಗಳಲ್ಲಿ ತೊಡಗಿಸುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.