ADVERTISEMENT

ಸೆಕ್ಷನ್ 80D ಆಧಾರದ ಮೇಲೆ ವಿನಾಯಿತಿ ಪಡೆಯಲು ಸಾಧ್ಯವೇ?

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 19:30 IST
Last Updated 10 ಡಿಸೆಂಬರ್ 2019, 19:30 IST
ಪುರಾಣಿಕ್
ಪುರಾಣಿಕ್   

ಹೆಸರು ಬೇಡ, ಹೊಸಕೋಟೆ

  • ಸರ್ಕಾರಿ ನಿವೃತ್ತ ಅಧಿಕಾರಿ. ತಿಂಗಳ ಪಿಂಚಣಿ ₹ 27,000. ಹಿರಿಯ ನಾಗರಿಕರ ಠೇವಣಿಯಲ್ಲಿ ₹ 15 ಲಕ್ಷ ಇರಿಸಿದ್ದೇನೆ. ತಿಂಗಳಿಗೆ ₹ 30,000 ಬಾಡಿಗೆ ಬರುತ್ತದೆ. ₹ 10 ಲಕ್ಷ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದೇನೆ. ಆದಾಯ ತೆರಿಗೆ ವಿಚಾರದಲ್ಲಿ ತಿಳಿಸಿ.

ಉತ್ತರ: 1–4–2019 ರಿಂದ ನಿಮ್ಮ ಒಟ್ಟು ವಾರ್ಷಿಕ ಆದಾಯ₹ 5 ಲಕ್ಷ ದಾಟುವ ತನಕ ನಿಮಗೆ ಆದಾಯ ತೆರಿಗೆ ಬರುವುದಿಲ್ಲ. ನಿಮ್ಮ ವಾರ್ಷಿಕ ಪಿಂಚಣಿ ಮೊತ್ತ, ಠೇವಣಿ ಮೇಲಿನ ಬಡ್ಡಿ ಹಾಗೂ ಬಾಡಿಗೆಯಲ್ಲಿ ಸೆಕ್ಷನ್ 24 (a) ಆಧಾರದ ಮೇಲೆ ಶೇ 30 ಕಳೆದು ಬರುವ ಮೊತ್ತ, ಎಲ್ಲಾ ಸೇರಿಸಿದಾಗ, ಅಂತಹ ಮೊತ್ತ₹ 5 ಲಕ್ಷ ದೊಳಗಿರುವಲ್ಲಿ ನೀವು ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ಇದೇ ವೇಳೆ ಇಂತಹ ಮೊತ್ತ ₹ 5 ಲಕ್ಷ ದಾಟಿದಲ್ಲಿ, ನಿಮಗೆ ಆದಾಯದ₹ 5 ಲಕ್ಷ ಮಿತಿ ಅನ್ವಯಿಸುವುದಿಲ್ಲ. ಹಿಂದಿನಂತೆ₹ 3 ಲಕ್ಷದಿಂದ₹ 5 ಲಕ್ಷಗಳ ತನಕ ಶೇ 5, 5 ಲಕ್ಷ ದಾಟಿದ ಮೊತ್ತಕ್ಕೆ ಶೇ 20 ರಂತೆ ಆದಾಯ ತೆರಿಗೆ ಕೊಡಬೇಕಾಗುತ್ತದೆ.

***

ADVERTISEMENT

ಹೆಸರು ಬೇಡ, ಚಿಂತಾಮಣಿ

  • ಆದಾಯ ತೆರಿಗೆ ಸೆಕ್ಷನ್ 80D ವಿಚಾರದಲ್ಲಿ ಸಲಹೆ ಬೇಕಾಗಿದೆ. ಅತ್ತೆಗೆ 84 ವರ್ಷ. ಅವರ ಹೆಸರಿನಲ್ಲಿ ಆರೋಗ್ಯ ವಿಮೆ ಇರುವುದಿಲ್ಲ. ಆದರೆ ನಮಗೆ ಅವರ ಶುಶ್ರೂಷೆ, ಔಷಧ ಹಾಗೂ ಆಸ್ಪತ್ರೆ ಖರ್ಚು ಹೀಗೆ ಬಹಳ ಹಣ ವ್ಯಯಿಸಬೇಕಾಗುತ್ತದೆ. ಈ ಖರ್ಚು ನನ್ನ ಆದಾಯದಿಂದ ಸೆಕ್ಷನ್ 80D ಆಧಾರದ ಮೇಲೆ ವಿನಾಯಿತಿ ಪಡೆಯಲು ನಮ್ಮ ಮೇಲಧಿಕಾರಿಗಳು ಒಪ್ಪುತ್ತಿಲ್ಲ. ಇದು ಸರಿಯೇ, ತಿಳಿಸಿರಿ.

ಉತ್ತರ: ನಿಮ್ಮ ಮೇಲಧಿಕಾರಿಗಳು ಹೇಳುವುದು ಸರಿ ಇರುತ್ತದೆ. ಸೆಕ್ಷನ್80D ಆಧಾರದ ಮೇಲೆ, ಮಕ್ಕಳು ಹೆತ್ತವರ ಹೆಸರಿನಲ್ಲಿ ಆರೋಗ್ಯ ವಿಮೆ ಇಳಿಸಿ, ಪ್ರೀಮಿಯಂ ಹಣ ತುಂಬುತ್ತಿರುವಲ್ಲಿ ಮಾತ್ರ, ಹಾಗೆ ತುಂಬಿದ ಹಣ, ಮಕ್ಕಳು ತಮ್ಮ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಇದೇ ವೇಳೆ ಮಕ್ಕಳು ಹೆತ್ತವರ ಆರೋಗ್ಯ ವಿಮೆ ಮಾಡಿಸದೆ ತಂದೆತಾಯಿಗಳಿಗೆ ಔಷಧೋಪಚಾರ ಅಥವಾ ಆಸ್ಪತ್ರೆ ಖರ್ಚು ಬರಿಸಿದಲ್ಲಿ, ಆ ಮೊತ್ತವನ್ನು ಮಕ್ಕಳು ಸೆಕ್ಷನ್ 80D ಆಧಾರದ ಮೇಲೆ ತಮ್ಮ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸುವ ಅಥವಾ ವಿನಾಯಿತಿ ಪಡೆಯುವ ಅವಕಾಶವಿಲ್ಲ. ನಿಮ್ಮ ಅತ್ತೆಗೆ 80 ವರ್ಷ ಮೀರಿದೆ. ಹೀಗಾಗಿ ಅವರು ಆರೋಗ್ಯ ಪಾಲಿಸಿ ಪಡೆಯಲು ಅರ್ಹರಾಗಿರುವುದಿಲ್ಲ.

***

ಹಾಲೇಶ, ಶಿವಮೊಗ್ಗ

  • ವಯಸ್ಸು 70. ನಿವೃತ್ತ ಸರ್ಕಾರಿ ನೌಕರ. ವಾರ್ಷಿಕ ಪಿಂಚಣಿ₹ 8 ಲಕ್ಷ. 1996ರಲ್ಲಿ PPF ಪ್ರಾರಂಭಿಸಿ ಪ್ರತೀ ವರ್ಷ ₹ 1.50 ಲಕ್ಷ ತುಂಬುತ್ತಿದ್ದೇನೆ. ಪತ್ನಿಗೆ 65 ವರ್ಷ. ಪತ್ನಿಗೆ ಹಿರಿಯರಿಂದ ಬಂದ ಕೃಷಿ ಜಮೀನಿನಿಂದವಾರ್ಷಿಕ ₹ 5 ಲಕ್ಷ ಆದಾಯವಿದೆ. PPF ಬಡ್ಡಿಗೆ ಹೋಲಿಸಿದರೆ SBI Sr. Citizen Deposit ಮೇಲು ಎಂದು ನನ್ನ ಅಭಿಪ್ರಾಯ. ನಾನು PPF ಖಾತೆ ಮುಚ್ಚಿSBI Sr. Citizen Deposit ಖಾತೆ ತೆರೆಯಲೇ.

ಉತ್ತರ: ಓರ್ವ ವ್ಯಕ್ತಿ ಅಂಚೆ ಕಚೇರಿಯಲ್ಲಾಗಲೀ, ಸ್ಟೇಟ್ ಬ್ಯಾಂಕಿನ ಲ್ಲಾಗಲಿ ಅಥವಾ ಆಯ್ದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಾಗಲಿ ’SBI Sr. Citizen Deposit’ ಪ್ರಾರಂಭಿಸಬಹುದು. ಗರಿಷ್ಠ ಮಿತಿ₹ 15 ಲಕ್ಷ. ಗಂಡ ಹೆಂಡತಿ ಇಬ್ಬರೂ ಹಿರಿಯ ನಾಗರಿಕರಾದಲ್ಲಿ ಇಬ್ಬರೂ ಪ್ರತ್ಯೇಕವಾಗಿ₹ 15 ಲಕ್ಷ ಠೇವಣಿ ಮಾಡಬಹುದು. PPF ಖಾತೆ ವಾರ್ಷಿಕ ಗರಿಷ್ಠ ಮಿತಿ₹ 1.50 ಲಕ್ಷ. ಬಡ್ಡಿಗೆ ಸೆಕ್ಷನ್ 10 (11) ಆಧಾರದ ಮೇಲೆ ಸಂಪೂರ್ಣ ವಿನಾಯಿತಿ ಇದೆ. ಆದರೆ ಹಿರಿಯ ನಾಗರಿಕರ ಠೇವಣಿಯಿಂದ ಬರುವ ಬಡ್ಡಿಗೆ ಆದಾಯ ತೆರಿಗೆ ಇರುತ್ತದೆ. ನೀವು ಹೆಚ್ಚಿನ ಆದಾಯದವರ ವ್ಯಾಪ್ತಿಗೆ ಬರುವುದರಿಂದ, ವಾರ್ಷಿಕ₹ 1.50 ಲಕ್ಷ PPFಗೆ ಕಟ್ಟುವುದರ ಜೊತೆಗೆ ಉಳಿದ ಹಣ ಹಿರಿಯ ನಾಗರಿಕರ ಠೇವಣಿಯಲ್ಲಿ ಇರಿಸಿರಿ. ಹೆಂಡತಿಗೆ ಕೃಷಿ ಜಮೀನಿನಿಂದ ಬರುವ
₹ 5 ಲಕ್ಷಕ್ಕೆ ಸೆಕ್ಷನ್ 10 (1) ಆಧಾರದ ಮೇಲೆ ಸಂಪೂರ್ಣ ವಿನಾಯಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.