ADVERTISEMENT

ತೆಂಗಿನ ಚಿಪ್ಪು ಧಾರಣೆ ಜಿಗಿತ; ಟನ್‌ಗೆ ₹30 ಸಾವಿರ

ಚಿಪ್ಪು ಸಿಗದೆ ಉದ್ಯಮಗಳಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 2 ಮೇ 2025, 23:23 IST
Last Updated 2 ಮೇ 2025, 23:23 IST
ಹಾಸನ ಜಿಲ್ಲೆಯ ಅರಸೀಕೆರೆ ಹೊರವಲಯದಲ್ಲಿ ತೆಂಗಿನ ಚಿಪ್ಪು ಬಳಸಿ ಇದ್ದಿಲು ತಯಾರಿಸಲಾಗುತ್ತಿದೆ ಪ್ರಜಾವಾಣಿ ಚಿತ್ರ
ಹಾಸನ ಜಿಲ್ಲೆಯ ಅರಸೀಕೆರೆ ಹೊರವಲಯದಲ್ಲಿ ತೆಂಗಿನ ಚಿಪ್ಪು ಬಳಸಿ ಇದ್ದಿಲು ತಯಾರಿಸಲಾಗುತ್ತಿದೆ ಪ್ರಜಾವಾಣಿ ಚಿತ್ರ   

ಅರಸೀಕೆರೆ (ಹಾಸನ ಜಿಲ್ಲೆ): ಮಾರುಕಟ್ಟೆಯಲ್ಲಿ ಕೊಬ್ಬರಿ, ತೆಂಗಿನಕಾಯಿ ಮತ್ತು ಎಳ ನೀರಿಗೆ ಉತ್ತಮ ಬೆಲೆ ಸಿಗುತ್ತಿದೆ. ಈ ನಡುವೆಯೇ ತೆಂಗಿನಕಾಯಿ ಚಿಪ್ಪಿಗೂ ಶುಕ್ರದೆಸೆ ಬಂದಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

ತಿಂಗಳ ಹಿಂದೆ ಪ್ರತಿ ಟನ್‌ ಚಿಪ್ಪಿಗೆ ₹26 ಸಾವಿರ ಇದ್ದ ಬೆಲೆಯು, ಈಗ ₹30 ಸಾವಿರಕ್ಕೆ ಮುಟ್ಟಿದೆ. ಮಾರುಕಟ್ಟೆಯಲ್ಲಿ ಚಿಪ್ಪುಗಳ ಕೊರತೆಯಾಗಿದೆ. ಹಾಗಾಗಿ, ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರ್ತಕರು ಹೇಳುತ್ತಾರೆ.

ಅಧಿಕ ಲಾಭ ಆಸೆಯಿಂದಾಗಿ ಬೆಳೆಗಾರರು ಎಳನೀರು ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಉಂಡೆ ಕೊಬ್ಬರಿ ತಯಾರಿಕೆಗೆ ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ಚಿಪ್ಪಿನ ಕೊರತೆ ಎದುರಾಗಿದೆ. ಬೇಡಿಕೆ ಇರುವಷ್ಟು ಪ್ರಮಾಣದಲ್ಲಿ ಚಿಪ್ಪು ದೊರೆಯುತ್ತಿಲ್ಲ. ಇದರಿಂದ ಕಾರ್ಖಾನೆಗಳ ಮಾಲೀಕರು ಹಳ್ಳಿಗಳಿಗೆ ವಾಹನಗಳಲ್ಲಿ ಬಂದು ರೈತರ ಬಳಿಕ ‘ಚಿಪ್ಪು ಇದೆಯಾ’ ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಪ್ರಮುಖವಾಗಿ ತೆಂಗಿನಕಾಯಿ ಚಿಪ್ಪನ್ನು ಇದ್ದಿಲು ತಯಾರಿಸಲು ಬಳಸಲಾಗುತ್ತದೆ. ಅತಿಹೆಚ್ಚು ತೆಂಗು ಬೆಳೆಯುವ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲೂ ಚಿಪ್ಪಿಗೆ ಕೊರತೆ ಎದುರಾಗಿದೆ.

ಹೊರ ರಾಜ್ಯಗಳಲ್ಲಿ ಸಿಗುವ ಚಿಪ್ಪಿನಿಂದ ತಯಾರಿಸುವ ಇದ್ದಿಲಿನಲ್ಲಿ ಇಂಗಾಲದ ಪ್ರಮಾಣ ಶೇ 80ಕ್ಕಿಂತ ಕಡಿಮೆ ಇರುತ್ತದೆ. ರಾಜ್ಯದ ತೆಂಗಿನಕಾಯಿ ಚಿಪ್ಪು ಬಳಸಿ ಇದ್ದಿಲು ತಯಾರಿಸಿದರೆ ಶೇ 95ರಷ್ಟು ಪ್ರಮಾಣದ ಇಂಗಾಲದ ಅಂಶ ದೊರೆಯುತ್ತದೆ. ಹಾಗಾಗಿ, ರಾಜ್ಯದ ಚಿಪ್ಪುಗೆ ಹೊರರಾಜ್ಯಗಳಲ್ಲಿ ಬೇಡಿಕೆ ಹೆಚ್ಚಳವಾಗಿದೆ.

ಸ್ಥಳೀಯ ತೆಂಗಿನ ಚಿಪ್ಪು ಬಳಸಿ ತಯಾರಿಸುವ ಇದ್ದಿಲಿಗೆ ತಮಿಳುನಾಡು, ಕೇರಳ, ಗುಜರಾತ್, ರಾಜಸ್ಥಾನದ ಕಾರ್ಖಾನೆಗಳಲ್ಲಿ ಅಧಿಕ ಬೇಡಿಕೆ ಇದೆ. ಹೀಗಾಗಿ, ಇಲ್ಲಿನ ತೆಂಗಿನಕಾಯಿ ಚಿಪ್ಪಿಗೆ ಅಧಿಕ ಬೆಲೆಯೂ ಸಿಗುತ್ತಿದೆ.

ಮುಂದಿನ ದಿನಗಳಲ್ಲಿ ಮುಂಗಾರು ಮಳೆ ನಂತರ ತೆಂಗಿನ ಮರಗಳಲ್ಲಿ ಉತ್ತಮ ಫಸಲು ಬಂದು ಬೆಳೆಗಾರರು ಕೊಬ್ಬರಿ ತಯಾರಿಕೆಗೆ ಒತ್ತು ನೀಡಿದರಷ್ಟೇ ತೆಂಗಿನಕಾಯಿ ಚಿಪ್ಪಿನ ಬೆಲೆ ಕಡಿಮೆಯಾಬಹುದು. ಇಲ್ಲವಾದರೆ ಮತ್ತಷ್ಟು ದರ ಹೆಚ್ಚಳವಾಗಲಿದೆ ಎಂಬುದು ವರ್ತಕರ ಅಭಿಪ್ರಾಯ.

ವಿವಿಧ ಉತ್ಪನ್ನಕ್ಕೆ ಬಳಕೆ

ಗಾತ್ರಕ್ಕೆ ಅನುಗುಣವಾಗಿ ಇದ್ದಿಲ್ಲನ್ನು ಚೆನ್ನಾಗಿ ತೊಳೆದು ಒಣಗಿಸಿ ಪ್ಯಾಕಿಂಗ್ ಮಾಡಿ ಹೊರ ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ವಾಟರ್ ಪೇಂಟ್‌ ಮುಖಕ್ಕೆ ಹಚ್ಚುವ ಕ್ರೀಂ ಸೌಂದರ್ಯ ವರ್ಧಕಗಳ ತಯಾರಿಕೆಗೆ ತೆಂಗಿನಕಾಯಿ ಚಿಪ್ಪಿನ ಪೌಡರ್‌ ಬಳಸುತ್ತಾರೆ. ಈ ಇದ್ದಿಲನ್ನು ನೀರು ಫಿಲ್ಟರ್‌ಗಳ ತಯಾರಿಕೆಗೂ ಬಳಸಲಾಗುತ್ತಿದೆ ಎನ್ನುತ್ತಾರೆ ಉದ್ಯಮಿಗಳು.

ತೆಂಗಿನ ಮರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಪ್ಪುಹುಳು ಬಾಧೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ಇದರಿಂದ ತೆಂಗಿನ ಉತ್ಪನ್ನಗಳಿಗೆ ಬೆಲೆ ಹೆಚ್ಚಳವಾಗುತ್ತಿದೆ.
ಮಲ್ಲಿಕಾರ್ಜುನ ಎಂ.ಸಿ., ಮೇಲೇನಹಳ್ಳಿತೆಂಗು ಚಿಪ್ಪಿನ ಘಟಕದ ಮಾಲೀಕ
ನಿತ್ಯ ಕೇವಲ 2–3 ಟನ್‌ ಚಿಪ್ಪು ಸಿಗುತ್ತಿದೆ. ಅರಸೀಕೆರೆ ತಾಲ್ಲೂಕಿನಲ್ಲಿರುವ ಮೂರು ಕಾರ್ಖಾನೆಗಳು ಸ್ಥಗಿತಗೊಳ್ಳುವ ಹಂತದಲ್ಲಿವೆ. ಕೇರಳ ತಮಿಳುನಾಡಿನಲ್ಲೂ ಕೆಲವು ಕಾರ್ಖಾನೆಗಳು ನಿಂತು ಹೋಗಿವೆ
ನಟರಾಜು ಪೊನ್ನಸಮುದ್ರ, ಬೊಮ್ಮಲಿಂಗೇಶ್ವರ ಫ್ಯಾಕ್ಟರಿ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.