ADVERTISEMENT

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಲಾಭ ಶೇ 65ರಷ್ಟು ಏರಿಕೆ

ಪಿಟಿಐ
Published 12 ಫೆಬ್ರುವರಿ 2023, 20:21 IST
Last Updated 12 ಫೆಬ್ರುವರಿ 2023, 20:21 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ : ಸರ್ಕಾರಿ ವಲಯದ 12 ಬ್ಯಾಂಕ್‌ಗಳು ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಒಟ್ಟು ₹29,175 ಕೋಟಿಯಷ್ಟು ಲಾಭ ಗಳಿಸಿವೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಲಾಭವು ₹17,729 ಕೋಟಿಯಷ್ಟು ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇ 65ರಷ್ಟು ಹೆಚ್ಚಾಗಿದೆ.

ಲಾಭದ ಪ್ರಮಾಣದಲ್ಲಿ ಆಗಿರುವ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ (ಬಿಒಎಂ) ಮೊದಲ ಸ್ಥಾನದಲ್ಲಿದೆ. ಡಿಸೆಂಬರ್‌ ತ್ರೈಮಾಸಿಕದಲ್ಲಿ ₹775 ಕೋಟಿ ನಿವ್ವಳ ಲಾಭ ಗಳಿಸಿದ್ದು, ಹಿಂದಿನ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ 139ರಷ್ಟು ಹೆಚ್ಚಳ ಆಗಿದೆ.

ADVERTISEMENT

ಯುಕೊ ಬ್ಯಾಂಕ್‌ ಲಾಭವು ಶೇ 110ರಷ್ಟು ಹೆಚ್ಚಾಗಿದ್ದು ₹653 ಕೋಟಿಗೆ ತಲುಪಿದೆ. ಯುನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಇಂಡಿಯನ್‌ ಬ್ಯಾಂಕ್‌ನ ಲಾಭ ಸಹ ಶೇ 100ಕ್ಕೂ ಹೆಚ್ಚು ಏರಿಕೆ ಕಂಡಿದೆ.

ಪ್ರಸಕ್ತ ಹಣಕಾಸು ವರ್ಷದ ಒಂಬತ್ತು ತಿಂಗಳಿನಲ್ಲಿ ಸರ್ಕಾರಿ ವಲಯದ ಬ್ಯಾಂಕ್‌ಗಳ ಲಾಭವು ₹ 70,166 ಕೋಟಿ ಆಗಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹48,983 ಕೋಟಿಯಷ್ಟು ಲಾಭ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇ 43ರಷ್ಟು ಹೆಚ್ಚಾಗಿದೆ.

ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು ಕ್ರಮವಾಗಿ ಶೇ 2.94 ಮತ್ತು ಶೇ 3.14ರಷ್ಟು ಇದೆ. ನಿವ್ವಳ ಎನ್‌ಪಿಎ ಕ್ರಮವಾಗಿ ಶೇ 0.47 ಮತ್ತು ಶೇ 0.77ರಷ್ಟು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.