ADVERTISEMENT

₹ 350 ಲಕ್ಷ ಕೋಟಿ ಆರ್ಥಿಕತೆ ಬ್ಯಾಂಕ್‌ಗಳಿಂದ ಸಲಹೆ ಸಂಗ್ರಹ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಹಣಕಾಸು ಸಚಿವಾಲಯ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 20:30 IST
Last Updated 16 ಆಗಸ್ಟ್ 2019, 20:30 IST
   

ನವದೆಹಲಿ (ಪಿಟಿಐ): ಮುಂದಿನ 5 ವರ್ಷಗಳಲ್ಲಿ ದೇಶಿ ಆರ್ಥಿಕತೆಯ ಗಾತ್ರವನ್ನು ₹ 350 ಲಕ್ಷ ಕೋಟಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಬ್ಯಾಂಕ್‌ ಶಾಖೆಗಳ ಮಟ್ಟದಲ್ಲಿ ಹೊಸ ಆಲೋಚನೆಗಳನ್ನು ಕ್ರೋಡೀಕರಣಗೊಳಿಸುವ ಪ್ರಕ್ರಿಯೆಗೆ ದೇಶದಾದ್ಯಂತ ಶನಿವಾರ ಚಾಲನೆ ದೊರೆಯಲಿದೆ.

ದೇಶಿ ಆರ್ಥಿಕತೆಯ ಹಲವಾರು ವಲಯಗಳಲ್ಲಿ ಕುಂಠಿತ ಪ್ರಗತಿ ಕಾಣುತ್ತಿರುವಾಗ ಮತ್ತು ಆರ್ಥಿಕ ವೃದ್ಧಿ ದರ ಐದು ವರ್ಷಗಳ ಹಿಂದಿನ ಮಟ್ಟವಾದ ಶೇ 6.8ಕ್ಕೆ ಇಳಿದಿರುವ ಸಂದರ್ಭದಲ್ಲಿ ಈ ವಿಶಿಷ್ಟ ಸ್ವರೂಪದ ಅಭಿಯಾನ ಕೈಗೊಳ್ಳಲಾಗುತ್ತಿದೆ. ಒಂದು ತಿಂಗಳ ಕಾಲ ನಡೆಯುವ ಈ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ವ್ಯಕ್ತವಾಗುವ ಸಲಹೆಗಳನ್ನು ಆಧರಿಸಿ ಬ್ಯಾಂಕಿಂಗ್‌ ವಲಯದ ಭವಿಷ್ಯದ ಮುನ್ನೋಟವನ್ನೂ ಸಿದ್ಧಪಡಿಸಲು ಉದ್ದೇಶಿಸಲಾಗಿದೆ.

ಸಲಹಾ ಪ್ರಕ್ರಿಯೆಯನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಬ್ಯಾಂಕ್‌ ಶಾಖೆಗಳಿಂದ ಆರಂಭಗೊಳ್ಳಲಿರುವ ಈ ಪ್ರಕ್ರಿಯೆಯು ಆನಂತರ ಪ್ರಾದೇಶಿಕ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ. ದೆಹಲಿಯಲ್ಲಿ ಎರಡು ದಿನಗಳ ಸಮಾವೇಶದಲ್ಲಿ ಚಿಂತನೆಗಳಿಗೆಲ್ಲ ಅಂತಿಮ ರೂಪ ನೀಡಲಾಗುವುದು.

ADVERTISEMENT

ಮುಂಬರುವ ಐದು ವರ್ಷಗಳಲ್ಲಿ ದೇಶಿ ಆರ್ಥಿಕತೆಯ ಬೆಳವಣಿಗೆಯ ಹಾದಿಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಕ್ರಿಯ ಪಾಲುದಾರಿಕೆ ಹೊಂದಿರಬೇಕು ಎನ್ನುವುದು ಈ ಅಭಿ‍ಪ್ರಾಯ ಸಂಗ್ರಹ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಗ್ರಾಹಕರ ಹಲವಾರು ಅಗತ್ಯಗಳಿಗೆ ಮತ್ತು ಬ್ಯಾಂಕಿಂಗ್‌ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳಿಗೆ ಬ್ಯಾಂಕ್‌ಗಳು ತ್ವರಿತವಾಗಿ ಸ್ಪಂದಿಸುವ ಕುರಿತೂ ಈ ಸಂದರ್ಭದಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು. ಸೈಬರ್‌ ಸುರಕ್ಷತೆ ಮತ್ತು ದತ್ತಾಂಶಗಳ ವಿಶ್ಲೇಷಣೆಯಲ್ಲಿ ಬ್ಯಾಂಕ್‌ಗಳು ಮಾಡಿಕೊಂಡಿರುವ ಸಿದ್ಧತೆಗಳಿಗೂ ಈ ಮೂಲಕ ಉತ್ತರ ಕಂಡುಕೊಳ್ಳಲು ಸಾಧ್ಯವಾಗಲಿದೆ.

ಮೂಲ ಸೌಕರ್ಯ ಯೋಜನೆಗಳಿಗೆ ಸಾಲ ನೀಡಿಕೆ ಪ್ರಮಾಣ ಹೆಚ್ಚಿಸುವ, ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಹಾಗೂ ನೀರಿನ ಸಂರಕ್ಷಣೆ ವಿಷಯದಲ್ಲಿ ಬ್ಯಾಂಕ್‌ಗಳು ಪ್ರಮುಖ ಪಾತ್ರ ನಿರ್ವಹಿಸುವುದಕ್ಕೆ ಒತ್ತು ನೀಡಲು ನಿರ್ಧರಿಸಲಾಗಿದೆ. ಶಿಕ್ಷಣ, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ಮತ್ತು ರಫ್ತು ಕ್ಷೇತ್ರಕ್ಕೆ ಸಾಲ ನೀಡಿಕೆಯಲ್ಲಿ ಸುಧಾರಣೆ ತರಲು ಉದ್ದೇಶಿಸಲಾಗಿದೆ.

ನಗದು ಚಲಾವಣೆ ಮೇಲಿನ ಅವಲಂಬನೆ ತಗ್ಗಿಸುವ ಡಿಜಿಟಲ್‌ ಆರ್ಥಿಕತೆ ಮತ್ತು ಎಲ್ಲರಿಗೂ ಬ್ಯಾಂಕಿಂಗ್‌ ಸೌಲಭ್ಯ ವಿಸ್ತರಿಸುವ ಹಣಕಾಸು ಸೇರ್ಪಡೆ ಕಾರ್ಯಕ್ರಮಗಳಿಗೂ ಆದ್ಯತೆ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.