ADVERTISEMENT

ಪ್ರಶ್ನೋತ್ತರ: ಆರ್ಥಿಕ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ

ಯು.ಪಿ.ಪುರಾಣಿಕ್
Published 1 ಡಿಸೆಂಬರ್ 2020, 19:30 IST
Last Updated 1 ಡಿಸೆಂಬರ್ 2020, 19:30 IST
ಪುರಾಣಿಕ್
ಪುರಾಣಿಕ್   

ಹೆಸರು, ಊರು ಬೇಡ

ಪ್ರಶ್ನೆ: ನಾನು ನಿವೃತ್ತ ಶಿಕ್ಷಕ. ಮಾಸಿಕ ಪಿಂಚಣಿ ₹ 3,400. ವಯಸ್ಸು 80 ವರ್ಷ. ನನ್ನ ಕುಟುಂಬದಲ್ಲಿ 49, 40, 38, 36, 34, 30 ಹಾಗೂ 3 ವರ್ಷ ವಯಸ್ಸಿನವರು ಇದ್ದಾರೆ. ಇವರೆಲ್ಲರ ಹೆಸರಿನಲ್ಲಿ ತಲಾ ₹ 15 ಸಾವಿರ ಅವಧಿ ಠೇವಣಿ ಮಾಡಬೇಕೆಂದಿದ್ದೇನೆ. ತುರ್ತು ಪರಿಸ್ಥಿತಿಯಲ್ಲಿ ಅಥವಾ ಇನ್ನಿತರ ಸಮಯಗಳಲ್ಲಿ ಹಣ ಪಡೆಯಲು ತೊಂದರೆಯಾಗಬಾರದು. ದಯಮಾಡಿ ವಿವರವಾಗಿ ತಿಳಿಸಿ.

ಉತ್ತರ: ನಿಮ್ಮ ಮನೆಗೆ ಸಮೀಪದ ಬ್ಯಾಂಕ್‌ನಲ್ಲಿ ನೀವು ಬಯಸಿದಂತೆ ಕುಟುಂಬದವರ ಹೆಸರಿನಲ್ಲಿ ತಲಾ ₹ 15 ಸಾವಿರ ಅವಧಿ ಠೇವಣಿ ಮಾಡಿ. ಹೀಗೆ ಠೇವಣಿ ಇರಿಸುವಾಗ ಬ್ಯಾಂಕ್‌ಗೆ ಪ್ರತಿಯೊಬ್ಬರ ಪ್ಯಾನ್‌ ಕಾರ್ಡ್‌ ನಕಲು, ಆಧಾರ್ ಕಾರ್ಡ್‌ ನಕಲು ಕೊಡಬೇಕಾಗುತ್ತದೆ. ಬ್ಯಾಂಕ್‌ಗಳಲ್ಲಿ ಕಾಲ ಕಾಲಕ್ಕೆ ಬಡ್ಡಿ ಕೊಡುವ (ಉದಾ: ತಿಂಗಳು, ಮೂರು ತಿಂಗಳು, ಆರು ತಿಂಗಳು, ವಾರ್ಷಿಕ ಹೀಗೆ...) ಯೋಜನೆ ಇದೆ ಹಾಗೂ ಒಮ್ಮೆಲೇ ಬಡ್ಡಿ ಸಮೇತ ಅಸಲು ಪಡೆಯುವ ಯೋಜನೆಯೂ ಇದೆ. ನೀವು ಒಮ್ಮೆಗೇ ಬಡ್ಡಿ–ಅಸಲು ಪಡೆಯುವ ಯೋಜನೆ ಆರಿಸಿಕೊಳ್ಳಿ.

ADVERTISEMENT

ಈ ಯೋಜನೆಯ ಅಡಿ ಬ್ಯಾಂಕ್‌ಗಳಲ್ಲಿ ಅಸಲಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಜಮಾ ಮಾಡಿ, ಬಡ್ಡಿ ಮೇಲೆ ಬಡ್ಡಿ (ಚಕ್ರಬಡ್ಡಿ) ಕೊಡುತ್ತಾರೆ. ಇದರಿಂದ ನೀವು ಹೂಡಿದ ಬಂಡವಾಳ ಬಹುಬೇಗ ಬೆಳೆಯುತ್ತದೆ. ಅವಧಿ ಠೇವಣಿ ಒಂದರಿಂದ ಹತ್ತು ವರ್ಷಗಳ ಅವಧಿಗೆ ಇರಿಸಬಹುದು. ತುರ್ತು ಅಥವಾ ಇನ್ನಿತರ ಸಂದರ್ಭಗಳಲ್ಲಿ ಅವಧಿ ಠೇವಣಿಯನ್ನು ಅವಧಿಗೆ ಮುನ್ನ ಅಸಲಿನಲ್ಲಿ ಯಾವ ಕಡಿತವಿಲ್ಲದೇ ಪಡೆಯಬಹುದು. ಬಡ್ಡಿಯ ಮೊತ್ತದಲ್ಲಿ ತುಸು ಕಡಿತ ಆಗಬಹುದು. ಎಲ್ಲಾ ಠೇವಣಿಗಳಿಗೂ ನಾಮ ನಿರ್ದೇಶನ ತಪ್ಪದೇ ಮಾಡಿ. ಇನ್ನೂ ಹೆಚ್ಚಿನ ಮಾಹಿತಿಗೆ ನನ್ನ ಮೊಬೈಲ್‌ ಸಂಖ್ಯೆ 94480 15300ಗೆ ಕರೆ ಮಾಡಿ.

ಮಹಮದ್‌ ಸಮೀಉಲ್ಲಾ, ಕೆರೆಬಿಳಚಿ ಗ್ರಾಮ, ಚನ್ನಗಿರಿ

ಪ್ರಶ್ನೆ: ನಾನು ನಿವೃತ್ತ ಶಿಕ್ಷಕ. ವಯಸ್ಸು 77 ವರ್ಷ. ನನಗೆ 2018ನೇ ಸಾಲಿನ ಮಾರ್ಚ್‌ನಿಂದ 2019ರ ಫೆಬ್ರುವರಿಗೆ ₹ 3,24,363 ನಿವೃತ್ತಿ ವೇತನ ಬಂದಿದೆ. ಇದರಲ್ಲಿ ₹ 7,893 ಟಿಡಿಎಸ್‌ ಮಾಡಿದ್ದಾರೆ. ಅದೇ ರೀತಿ 2019–20ರಲ್ಲಿ ₹ 3,58,382ಕ್ಕೆ ₹ 13,343 ಟಿಡಿಎಸ್‌ ಮಾಡಿರುತ್ತಾರೆ. 2020–21ನೇ ಸಾಲಿನಲ್ಲಿ ₹ 23,073 ಟಿಡಿಎಸ್‌ ಮಾಡಿದ್ದಾರೆ. ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಮ್ಯಾನೇಜರ್‌ ಸರಿಯಾಗಿ ಸ್ಪಂದಿಸುತ್ತಿಲ್ಲ. ಹಣ ಹಿಂದಕ್ಕೆ ಪಡೆಯುವ ಬಗೆ ತಿಳಿಸಿ.

ಉತ್ತರ: ನೀವು ಬ್ಯಾಂಕ್‌ಗೆ ಪ್ಯಾನ್‌ ಹಾಗೂ ಆಧಾರ್‌ ಕಾರ್ಡ್‌ಗಳ ಪುರಾವೆ ಒದಗಿಸಿದ್ದೀರಿ ಎಂದು ಭಾವಿಸುವೆ. ಪ್ರತಿ ವರ್ಷ ಏಪ್ರಿಲ್‌ ಒಂದನೇ ವಾರದಲ್ಲಿ ಬ್ಯಾಂಕ್‌ಗೆ 15 ಎಚ್‌ ಸಲ್ಲಿಸಿ ಅವರಿಂದ ಅಕ್‌ನಾಲೇಡ್ಜ್‌ಮೆಂಟ್‌ ಪಡೆಯಿರಿ. ನಿಮ್ಮ ಒಟ್ಟು ಆದಾಯ (Gross Income) ₹ 5 ಲಕ್ಷ ದಾಟುವ ತನಕ ನಿಮಗೆ ಆದಾಯ ತೆರಿಗೆ ಅನ್ವಯವಾಗದು. ಜೊತೆಗೆ ಸೆಕ್ಷನ್ 16 (1ಎ) ಆಧಾರದ ಮೇಲೆ ₹ 50 ಸಾವಿರ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಕೂಡಾ ಇದೆ. ಹೀಗೆ ಮಾಡಿದಲ್ಲಿ ಟಿಡಿಎಸ್‌ ಇರುವುದಿಲ್ಲ. ಈಗಾಗಲೇ ಮುರಿದ ಟಿಡಿಎಸ್‌ ಅನ್ನು ಐ.ಟಿ. ರಿಟರ್ನ್ಸ್‌ ತುಂಬಿ ವಾಪಸ್‌ ಪಡೆಯಬಹುದು. ನೀವು ಆದಾಯ ತೆರಿಗೆಗೆ ಒಳಗಾಗದಿದ್ದರೂ ನಿಮ್ಮ ವಾರ್ಷಿಕ ಒಟ್ಟು ಆದಾಯ ₹ 3 ಲಕ್ಷ ದಾಟಿರುವುದರಿಂದ ಕಡ್ಡಾಯವಾಗಿ ಐ.ಟಿ. ರಿಟರ್ನ್ಸ್‌ ತುಂಬಲೇಬೇಕು. ಈ ಸಾರಿ ಡಿಸೆಂಬರ್‌ 31ರತನಕ ಅವಕಾಶವಿದೆ. ಮುಂದಿನ ವರ್ಷದಿಂದ ಜುಲೈ 31ರ ಒಳಗಾಗಿ ರಿಟರ್ನ್ಸ್‌ ತುಂಬಬೇಕು. ಟಿಡಿಎಸ್‌ ಮಾಡಿದ ಹಣ ವಾಪಸ್‌ ಪಡೆಯಲು ಚಾರ್ಟರ್ಡ್‌ ಅಕೌಂಟೆಂಟ್‌ ಅಥವಾ ಆಡಿಟರ್‌ ಮುಖಾಂತರ ಐ.ಟಿ. ರಿಟರ್ನ್ಸ್‌ ತುಂಬಿರಿ.

ಹೆಸರು ಬೇಡ, ಕಡೂರು

ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ನೌಕರ. ವಯಸ್ಸು 70 ವರ್ಷ. ನಾನು ವಾರ್ಷಿಕ ₹ 3,28,452 ಪಿಂಚಣಿ ಪಡೆಯುತ್ತಿದ್ದೇನೆ. ಇದರಲ್ಲಿ ₹ 56,724 ಕಮ್ಯುಟೇಷನ್‌ ಕಡಿತವಾಗಿ ₹ 2,71,728 ಜಮಾ ಆಗಿದೆ. ಬ್ಯಾಂಕ್‌ ಠೇವಣಿಯಿಂದ ₹ 90 ಸಾವಿರ ಬಡ್ಡಿ ಬಂದಿದೆ. ನಾನು ತೆರಿಗೆ ರಿಟರ್ನ್ಸ್‌ ಸಲ್ಲಿಸಬೇಕಾ? ಕಮ್ಯುಟೇಷನ್‌ ಹಣ ಆದಾಯದಿಂದ ಕಳೆಯುವುದಿಲ್ಲವೇ?

ಉತ್ತರ: ನಿವೃತ್ತಿ ಸಮಯದಲ್ಲಿ ಪಿಂಚಣಿಯ ಮೂರನೇ ಒಂದು ಭಾಗವನ್ನು ಕಮ್ಯುಟೇಷನ್‌ ರೀತಿಯಲ್ಲಿ ಮುಂಗಡವಾಗಿ ಪಡೆಯಬಹುದು. ಹೀಗೆ ಪಡೆದ ಹಣ ಆದಾಯ ತೆರಿಗೆ ಸೆಕ್ಷನ್‌ 10 (10 ಎ) (ಐ) ಆಧಾರದ ಮೇಲೆ ಸಂಪೂರ್ಣ ವಿನಾಯಿತಿ ಹೊಂದಿದೆ. ನೀವು ತಿಳಿಸಿದಂತೆ ನಿಮ್ಮ ವಾರ್ಷಿಕ ಪಿಂಚಣಿ, ಕಮ್ಯುಟೇಷನ್‌ ಕಡಿತದ ನಂತರ ₹ 2,71,728. ಇದೇ ವೇಳೆ ನೀವು ವಾರ್ಷಿಕ ಬ್ಯಾಂಕ್‌ ಠೇವಣಿ ಮೇಲಿನ ಬಡ್ಡಿ ₹ 90 ಸಾವಿರ ಪಡೆಯುತ್ತಿದ್ದು ಈ ಬಡ್ಡಿ ಆದಾಯ ಸೇರಿಸಿದಾಗ ನಿಮ್ಮ ವಾರ್ಷಿಕ ಒಟ್ಟು ಆದಾಯ ₹ 3,61,728 ಆಗಲಿದೆ. ನಿಮಗೆ ಬಡ್ಡಿ ಆದಾಯದಲ್ಲಿ ಸೆಕ್ಷನ್‌ 80ಟಿಟಿಬಿ ಆಧಾರದ ಮೇಲೆ ₹ 50 ಸಾವಿರ ಸ್ಟ್ಯಾಂಡರ್ಡ್‌ ಡಿಡಕ್ಷನ್‌, ಸೆಕ್ಷನ್‌ 16(1ಎ) ಆಧಾರದ ಮೇಲೆ ₹ 50 ಸಾವಿರ ವಿನಾಯಿತಿ ಇರುವುದರಿಂದ ಈ ಎರಡೂ ವಿನಾಯಿತಿ ಕಳೆದಾಗ ನಿಮ್ಮ ಆದಾಯ ₹ 2,61,278 ಆಗುತ್ತದೆ. ಹೀಗಾಗಿ ನೀವು ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ಆದರೆ, ವಿನಾಯಿತಿ ಪಡೆಯುವ ಮುನ್ನ ನಿಮ್ಮ ಒಟ್ಟು ಆದಾಯ ₹ 3 ಲಕ್ಷ ದಾಟುವುದರಿಂದ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಬೇಕು. ಆಡಿಟರ್‌ ಮುಖಾಂತರ ಡಿಸೆಂಬರ್‌ 31ರೊಳಗೆ ಸಲ್ಲಿಸಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.