ADVERTISEMENT

ತಿಂಡಿ, ಪಾನೀಯ ಬೆಲೆ ತಗ್ಗಿಸಿದ ಪಿವಿಆರ್ ಐನಾಕ್ಸ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 14:10 IST
Last Updated 13 ಜುಲೈ 2023, 14:10 IST
   

ನವದೆಹಲಿ: ಮಲ್ಟಿಪ್ಲೆಕ್ಸ್‌ ಕಂಪನಿ ಪಿವಿಆರ್‌ ಐನಾಕ್ಸ್‌ ತಿಂಡಿ–ತಿನಿಸು ಹಾಗೂ ಪಾನೀಯಗಳ ಬೆಲೆಯನ್ನು ಶೇಕಡ 40ರವರೆಗೆ ಇಳಿಕೆ ಮಾಡಿದೆ. ತಿಂಡಿ ಹಾಗೂ ಪಾನೀಯಗಳಿಗೆ ನಿಗದಿ ಮಾಡಿರುವ ಬೆಲೆ ದುಬಾರಿ ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಟೀಕಿಸಿದ ನಂತರದಲ್ಲಿ ಕಂಪನಿಯು ಈ ತೀರ್ಮಾನ ಕೈಗೊಂಡಿದೆ.

ಪಿವಿಆರ್‌ ಐನಾಕ್ಸ್‌ನಲ್ಲಿ ಸೋಮವಾರದಿಂದ ಗುರುವಾರದವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ನಡುವೆ ಕಾಂಬೊ ತಿನಿಸು, ಪಾನೀಯಗಳು ₹99 ಆರಂಭಿಕ ಬೆಲೆಗೆ ಲಭ್ಯವಾಗಲಿವೆ. ತಿಂಡಿ–ತಿನಿಸು ಹಾಗೂ ಪಾನೀಯಗಳ ಬೆಲೆಯನ್ನು ಶೇಕಡ 40ರವರೆಗೆ ಕಡಿಮೆ ಮಾಡಲಾಗಿದೆ ಎಂದು ಪಿವಿಆರ್‌ ಐನಾಕ್ಸ್‌ ಹೇಳಿಕೆ ತಿಳಿಸಿದೆ.

ಕಂಪನಿಯು ನಡೆಸುವ ಐಷಾರಾಮಿ ಸಿನಿಮಾ ಮಲ್ಟಿಪ್ಲೆಕ್ಸ್‌ಗಳಿಗೆ ಇದು ಅನ್ವಯವಾಗುವುದಿಲ್ಲ.

ADVERTISEMENT

ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಪಿವಿಆರ್‌ ಐನಾಕ್ಸ್‌ನಲ್ಲಿ ನಿಗದಿ ಮಾಡಿರುವ ಬೆಲೆಯು ಭಾರಿ ದುಬಾರಿ ಎಂದು ದೂರಿದ್ದರು. ‘55 ಗ್ರಾಂ ಚೀಸ್‌ ಪಾಪ್‌ಕಾರ್ನ್‌ಗೆ ₹460, 600 ಎಂ.ಎಲ್‌. ಪೆಪ್ಸಿಗೆ ₹360. ನೊಯಿಡಾದ ಪಿವಿಆರ್‌ ಸಿನಿಮಾಸ್‌ನಲ್ಲಿ ಇದರ ಮೊತ್ತ ₹820. ಅಂದರೆ ಇದು ಪ್ರೈಮ್‌ ವಿಡಿಯೊದ ವಾರ್ಷಿಕ ಚಂದಾ ಮೊತ್ತಕ್ಕೆ ಬಹುತೇಕ ಸರಿಹೊಂದುತ್ತದೆ. ಜನ ಸಿನಿಮಾ ವೀಕ್ಷಿಸಲು ಸಿನಿಮಾ ಮಂದಿರಗಳಿಗೆ ಹೋಗದೆ ಇರುವುದರಲ್ಲಿ ಆಶ್ಚರ್ಯ ಮೂಡಿಸುವಂಥದ್ದು ಏನೂ ಇಲ್ಲ. ಕುಟುಂಬದ ಜೊತೆ ಸಿನಿಮಾ ವೀಕ್ಷಿಸುವುದು ಕೈಗೆಟುಕದಂತೆ ಆಗಿದೆ’ ಎಂದು ಟ್ವಿಟರ್ ಬಳಕೆದಾರರೊಬ್ಬರು ದೂರಿದ್ದರು. ಈ ಟ್ವೀಟ್ ಹತ್ತು ದಿನಗಳ ಬಳಿಕ ವೈರಲ್ ಆಯಿತು.

‘ತಿಂಡಿ, ಪಾನೀಯಗಳಿಗೆ ನಿಗದಿ ಮಾಡುವ ಬೆಲೆಯ ವಿಚಾರದಲ್ಲಿ ಗ್ರಾಹಕರ ಆಲೋಚನೆಗಳಿಗೆ ನಾವು ಯಾವಾಗಲೂ ಕಿವಿಗೊಡುತ್ತಿದ್ದೇವೆ’ ಎಂದು ಪಿವಿಆರ್‌ ಐನಾಕ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಂಜೀವ್ ಕುಮಾರ್ ಬಿಜ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.