ADVERTISEMENT

ಪ್ರಶ್ನೋತ್ತರ: ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ ಇಲ್ಲಿದೆ

ಯು.ಪಿ.ಪುರಾಣಿಕ್
Published 5 ಅಕ್ಟೋಬರ್ 2021, 17:40 IST
Last Updated 5 ಅಕ್ಟೋಬರ್ 2021, 17:40 IST
ಪುರಾಣಿಕ್
ಪುರಾಣಿಕ್   

ಅಶೋಕ್,ಊರುಬೇಡ

ಪ್ರಶ್ನೆ: ನಾನು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದೇನೆ. ಬ್ಯಾಂಕ್‌ನಿಂದ ಸಾಲ ಪಡೆದು ವ್ಯಾಪಾರ ವಿಸ್ತರಿಸಬೇಕೆಂದಿದ್ದೇನೆ. ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಓ.ಡಿ. (ಓವರ್‌ ಡ್ರಾಫ್ಟ್‌) ತೆಗೆದುಕೊಳ್ಳಿ ಎಂದು ಹೇಳಿದರು. ಸಾಲ ಮತ್ತು ಓ.ಡಿ. ಇವುಗಳ ವ್ಯತ್ಯಾಸ, ಸಾಧಕ–ಬಾಧಕ ತಿಳಿಸಿ.

ಉತ್ತರ: ಬ್ಯಾಂಕ್‌ನಲ್ಲಿ ಸಾಲ ಪಡೆದಲ್ಲಿ ಸಾಲಕ್ಕೆ ಮಾಸಿಕ ಸಮಾನ ಕಂತು (ಇಎಂಐ) ಇರುತ್ತದೆ. ಹೀಗೆ ಕಂತುಗಳನ್ನು ತುಂಬುತ್ತಾ ಸಾಲ ತೀರಿಸಬೇಕು. ಆದರೆ ಓ.ಡಿ. ಹಾಗಲ್ಲ. ಇಲ್ಲಿ ಸಾಲದ ರೀತಿಯಲ್ಲಿ ಮರುಪಾವತಿ ಇರುವುದಿಲ್ಲ. ವರ್ಷದಲ್ಲಿ ಒಮ್ಮೆ ಓ.ಡಿ. ಮಿತಿಯನ್ನು ಸಂಪೂರ್ಣ ತುಂಬಿ ಕ್ರೆಡಿಟ್‌ ಬ್ಯಾಲೆನ್ಸ್‌ಗೆ ತಂದರೆ ಸಾಕು. ಬಡ್ಡಿ ಮಾತ್ರ ಪ್ರತೀ ತಿಂಗಳೂ ತುಂಬುತ್ತಾ ಬರಬೇಕು. ಓ.ಡಿ.ಯಲ್ಲಿ ಯಾವಾಗ ಬೇಕಾದರೂ ಹಣ ತುಂಬುವ ಹಾಗೂ ವಾಪಾಸ್‌ ಪಡೆಯುವ ಸವಲತ್ತು ಇರುತ್ತದೆ. ನೀವು ಪಡೆದಷ್ಟೂ ಹಣಕ್ಕೆ ಪಡೆದಷ್ಟು ದಿನಗಳವರೆಗೆ ಮಾತ್ರ ಬಡ್ಡಿ ವಿಧಿಸುತ್ತಾರೆ. ಸಾಲ ಆದರೆ ಒಮ್ಮೆ ತುಂಬಿದ ಹಣ ವಾಪಾಸ್‌ ಪಡೆಯುವಂತಿಲ್ಲ. ವ್ಯಾಪಾರಸ್ಥರಿಗೆ ಓ.ಡಿ. ತುಂಬಾ ಅನುಕೂಲ. ಇಲ್ಲಿ ಚೆಕ್‌ ಸೌಲಭ್ಯ ಕೂಡಾ ಇದೆ. ಪ್ರತೀ ದಿನ ಎಷ್ಟಾದರಷ್ಟು ಹಣ ಓ.ಡಿ.ಗೆ ತುಂಬಬಹುದಾದ್ದರಿಂದ ಬಡ್ಡಿ ಕಡಿಮೆ ಆಗುತ್ತದೆ. ಜೊತೆಗೆ ಕಟ್ಟಿದ ಹಣವನ್ನುಯಾವಾಗ ಬೇಕಾದರೂ ವಾಪಸ್‌ ಪಡೆಯಬಹುದು. ಈ ವಿಚಾರದಲ್ಲಿ ನಿಮಗೆ ಒಂದು ಸಲಹೆ. ಬ್ಯಾಂಕ್‌ನಿಂದ ಓ.ಡಿ. ಸೌಲಭ್ಯ ಪಡೆದಲ್ಲಿ ಸಾಲದ ರೀತಿಯಲ್ಲಿ ಕಂತು ತುಂಬುವ ಅವಶ್ಯಕತೆ ಇಲ್ಲದೇ ಇರುವುದರಿಂದ ಕಂತಿಗೆ ಸರಿಸಮನಾಗಿ ಒಂದು ಆರ್‌.ಡಿ. ಮಾಡಿ. ಇದರಿಂದ ಉಳಿತಾಯ ಆಗುವುದರ ಜೊತೆಗೆ ವರ್ಷಾಂತ್ಯಕ್ಕೆ ಓ.ಡಿ. ಕ್ರೆಡಿಟ್‌ ಬ್ಯಾಲೆನ್ಸ್‌ ತರಲೂ ಅನುಕೂಲವಾಗುತ್ತದೆ.

ADVERTISEMENT

***

ಹೆಸರು ಬೇಡ,ಧಾರವಾಡ

ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ನೌಕರ. ವಯಸ್ಸು 72 ವರ್ಷ. ಪಿಂಚಣಿ ₹ 32,000. ಈಗಿರುವ ಮನೆ ಮೇಲೆ ಮೊತ್ತೊಂದು ಮನೆ ಕಟ್ಟಬೇಕೆಂದಿದ್ದೇನೆ. ನನ್ನ ಮಗ ಬೆಂಗಳೂರಿನಲ್ಲಿ ಐ.ಟಿ. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾನೆ. ಅವನ ಸಂಬಳ ತಿಂಗಳಿಗೆ ₹ 63,500. ಅವನು ಬೇರೆ ಊರಿನಲ್ಲಿ ಇರುವುದರಿಂದ ಹಾಗೂ ನನಗೆ 72 ವರ್ಷ ವಯಸ್ಸು ಆಗಿರುವುದರಿಂದ ಬ್ಯಾಂಕ್‌ನಲ್ಲಿ ಸಾಲ ಕೊಡುವುದಿಲ್ಲ. ಸೂಕ್ತ ಸಲಹೆ ಕೊಡಿ.

ಉತ್ತರ: ಗೃಹ ಸಾಲ ದೀರ್ಘಾವಧಿಯದ್ದಾಗಿರುವುದರಿಂದ ಹಿರಿಯ ನಾಗರಿಕರಿಗೆ ಬ್ಯಾಂಕ್‌ಗಳಲ್ಲಿ ಸಾಲ ಸಿಗುವುದಿಲ್ಲ. ನಿಮ್ಮ ಮಗನಿಗೆ ಉತ್ತಮ ವರಮಾನ ಇರುವುದರಿಂದ ನೀವು ಪ್ರಥಮ ಸಾಲಗಾರರಾಗಿ ನಿಮ್ಮ ಮಗ ಸಹ ಸಾಲಗಾರರಾಗಿ ಬ್ಯಾಂಕ್‌ನಲ್ಲಿ ಸಾಲ ಪಡೆಯಬಹುದು. ನಿಮ್ಮ ಮಗ ಬೇರೆ ಊರಿನಲ್ಲಿ ಇರುವ ಒಂದೇ ಕಾರಣಕ್ಕೆ ಬ್ಯಾಂಕ್‌ನಲ್ಲಿ ಸಾಲ ಕೊಡುವುದಿಲ್ಲ ಎಂದು ಹೇಳುವಂತಿಲ್ಲ. ಆದರೆ ಈ ಸಾಲ ಮರುಪಾವತಿಸುವ ಸಂಪೂರ್ಣ ಜವಾಬ್ದಾರಿ ನಿಮ್ಮ ಮಗನ ಮೇಲೆ ಇರುತ್ತದೆ ಹಾಗೂ ಅದೇ ರೀತಿ ಬ್ಯಾಂಕ್‌ಗೆ ಕಾಗದ ಪತ್ರ ಮಾಡಿಕೊಡಬೇಕಾಗುತ್ತದೆ. ಇದರ ಬದಲಾಗಿ ನಿಮ್ಮ ಮಗ ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್‌ ಅಥವಾ ಮನೆಯನ್ನು 30 ವರ್ಷಗಳ ಅವಧಿಯ ಗೃಹ ಸಾಲದಿಂದ ಪಡೆದಲ್ಲಿ ಅದರಿಂದ ಅವರಿಗೂ ತಾವು ಸ್ವಂತ ಮನೆ ಮಾಡಿದ ಖುಷಿ ಇರುತ್ತದೆ ಹಾಗೂ ಸಾಲದ ಬಡ್ಡಿಯಲ್ಲಿ ಆದಾಯ ತೆರಿಗೆ ಉಳಿಸಬಹುದು. ಇಂತಹ ಯೋಜನೆ ಸಣ್ಣ ವಯಸ್ಸಿನಲ್ಲಿಯೇ ಮಾಡಿದರೆ ಬೇಡದ ಖರ್ಚುಗಳಿಗೆ ಕಡಿವಾಣ ಹಾಕಬಹುದು. ಜೀವನದ ಸಂಜೆಯಲ್ಲಿ ಸ್ವಂತ ಮನೆಯಲ್ಲಿ ವಾಸಿಸುವ ಸಂತಸವೂ ಇರುತ್ತದೆ.

ಹೆಸರು ಬೇಡ,ಶಿವಮೊಗ್ಗ

***

ಪ್ರಶ್ನೆ: ನನ್ನ ಮೊಮ್ಮಗಳ ಸಲುವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಪ್ರಾರಂಭಿಸಲು ಸಲಹೆ ನೀಡಿ. ಯೋಜನೆ ಪ್ರಾರಂಭಿಸಿದ ಮೊದಲು ಕಟ್ಟಿದಷ್ಟೇ ಹಣವನ್ನು ಪ್ರತಿ ತಿಂಗಳೂ ಕಟ್ಟಬೇಕೇ? ಹೆಚ್ಚಿಗೆ ಹಣ ತುಂಬಲು ಅವಕಾಶ ಇದೆಯೇ? ಪ್ರತಿ ತಿಂಗಳೂ ₹ 1,000 ಪಾವತಿಸುವುದಾದರೆ ಎಷ್ಟು ವರ್ಷ ತುಂಬಬೇಕು? ಈ ಖಾತೆಯನ್ನು ಬ್ಯಾಂಕ್‌ಗಳಲ್ಲಿಯೂ ತೆರೆಯಬಹುದೇ?

ಉತ್ತರ: ಸುಕನ್ಯಾ ಸಮೃದ್ಧಿ ಯೋಜನೆಯ ಅಡಿ, 10 ವರ್ಷಗಳ ಒಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಪೋಷಕರು ಖಾತೆ ತೆರೆಯಬಹುದು. ಖಾತೆ ತೆರೆಯುವಾಗ ಮಗುವಿನ ಆಧಾರ್ ಸಂಖ್ಯೆ ಮತ್ತು ಜನನ ಪತ್ರ ಕೊಡಬೇಕಾಗುತ್ತದೆ. ವಾರ್ಷಿಕ ಕನಿಷ್ಠ ₹ 100 ಗರಿಷ್ಠ ₹ 1.50 ಲಕ್ಷ ಈ ಖಾತೆಗೆ ಜಮಾ ಮಾಡಬಹುದು. ಖಾತೆ ಪ್ರಾರಂಭವಾದ 14 ವರ್ಷಗಳವರೆಗೆ ಮಾತ್ರ ಹಣ ಜಮಾ ಮಾಡಬಹುದು. ಈ ಠೇವಣಿ ತೆರಿಗೆಯಿಂದ ಮುಕ್ತವಾಗಿದೆ. ಠೇವಣಿ ಮೊತ್ತದ ಶೇಕಡ 50ರಷ್ಟನ್ನು ಮಗುವಿಗೆ 18 ವರ್ಷ ತುಂಬಿದಾಗ ಮದುವೆ ಅಥವಾ ವಿದ್ಯಾಭ್ಯಾಸದ ಕಾರಣಕ್ಕೆ ಹಿಂದಕ್ಕೆ ಪಡೆಯಬಹುದು. ಖಾತೆಯ ಪೂರ್ಣ ಅವಧಿ 21 ವರ್ಷ. ಈ ಖಾತೆಯನ್ನು ಅಂಚೆ ಕಚೇರಿ ಹಾಗೂ ಬ್ಯಾಂಕ್‌ಗಳಲ್ಲಿ ತೆರೆಯಬಹುದು. ಆರ್‌.ಡಿ. ಖಾತೆಯಂತೆ ಪ್ರಥಮ ವರ್ಷ ಕಟ್ಟಿದ ಮೊತ್ತವನ್ನು ಪ್ರತೀ ತಿಂಗಳೂ ಕಟ್ಟುವ ಅವಶ್ಯಕತೆ ಇಲ್ಲ. ₹ 100ರಿಂದ ₹ 1.50 ಲಕ್ಷ ಮೊತ್ತವನ್ನು ವರ್ಷದಲ್ಲಿ ಯಾವಾಗ ಬೇಕಾದರೂ ಪಾವತಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಕ್ಕದೆ ಎಂದು ಭಾವಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.