ADVERTISEMENT

ಮಹಾರಾಷ್ಟ್ರದ ಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್‌ನ ಪರವಾನಗಿ ರದ್ದು ಮಾಡಿದ ಆರ್‌ಬಿಐ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2022, 13:52 IST
Last Updated 22 ಸೆಪ್ಟೆಂಬರ್ 2022, 13:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ದುರ್ಬಲ ಆರ್ಥಿಕತೆಯ ಕಾರಣಕ್ಕೆ ಮಹಾರಾಷ್ಟ್ರ ಮೂಲದ ‘ದಿ ಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌’ನ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗುರುವಾರ ರದ್ದುಗೊಳಿಸಿದೆ.

ಪರಿಣಾಮವಾಗಿ, ಸೆಪ್ಟೆಂಬರ್ 22ರಿಂದ ಜಾರಿಗೆ ಬರುವಂತೆ ಬ್ಯಾಂಕ್‌ನ ಬ್ಯಾಂಕಿಂಗ್ ವ್ಯವಹಾರಗಳನ್ನು ನಿಷೇಧಗೊಳ್ಳಲಿವೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ಯಾಂಕ್ ಅನ್ನು ಮುಚ್ಚಲು ಆದೇಶಿಸಬೇಕು ಮತ್ತು ಬ್ಯಾಂಕ್‌ಗೆ ಬರಖಾಸ್ತುದಾರರನ್ನು (ಲಿಕ್ವಿಡೇಟರ್– ಸಂಸ್ಥೆಯೊಂದರ ಮುಕ್ತಾಯ ಪ್ರಕ್ರಿಯೆ ನಡೆಸುವವರು) ನೇಮಿಸುವಂತೆ ಮಹಾರಾಷ್ಟ್ರ ಸಹಕಾರ ಇಲಾಖೆ ಆಯುಕ್ತ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್ ಮನವಿ ಮಾಡಿದ್ದಾರೆ ಎಂದು ಆರ್‌ಬಿಐ ತಿಳಿಸಿದೆ.

ADVERTISEMENT

ಬ್ಯಾಂಕ್‌ ಬಳಿ ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ನಿರೀಕ್ಷೆಗಳಿಲ್ಲದ ಕಾರಣ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಬ್ಯಾಂಕನ್ನು ಮುಂದುವರಿಸಿದರೆ ಅದರ ಠೇವಣಿದಾರರ ಹಿತಾಸಕ್ತಿಗಳಿಗೆ ಹಾನಿಯಾಗಲಿದೆ ಎಂದು ಆರ್‌ಬಿಐ ಹೇಳಿದೆ.

ಕೆಟ್ಟ ಆರ್ಥಿಕ ಸ್ಥಿತಿ ಹೊಂದಿರುವ ಬ್ಯಾಂಕ್ ತನ್ನ ಠೇವಣಿದಾರರಿಗೆ ಪೂರ್ಣವಾಗಿ ಪಾವತಿಸಲು ಸಾಧ್ಯವಿಲ್ಲ. ಬ್ಯಾಂಕ್ ತನ್ನ ಬ್ಯಾಂಕಿಂಗ್ ವ್ಯವಹಾರವನ್ನು ಮುಂದುವರಿಸಲು ಅನುಮತಿಸಿದರೆ ಸಾರ್ವಜನಿಕ ಹಿತಾಸಕ್ತಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಆರ್‌ಬಿಐ ಹೇಳಿದೆ.

ಪರವಾನಗಿಯನ್ನು ರದ್ದುಗೊಳಿಸಿದ ಪರಿಣಾಮವಾಗಿ, ಬ್ಯಾಂಕ್‌ನ ಬ್ಯಾಂಕಿಂಗ್ ವ್ಯವಹಾರಗಳು ತಕ್ಷಣದಿಂದಲೇ ನಿಷೇಧಗೊಳ್ಳುತ್ತವೆ.

ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮದ ನಿಯಮದಂತೆ ಠೇವಣಿದಾರರು ₹5 ಲಕ್ಷಗಳ ವರೆಗೆ ಹಣ ಪಡೆಯಬಹುದಾಗಿದೆ. ಬ್ಯಾಂಕ್ ಸಲ್ಲಿಸಿರುವ ಮಾಹಿತಿಯ ಪ್ರಕಾರ, ಸುಮಾರು ಶೇ 99 ಠೇವಣಿದಾರರು ತಮ್ಮ ಠೇವಣಿಗಳ ಸಂಪೂರ್ಣ ಮೊತ್ತವನ್ನು ಡಿಐಸಿಜಿಸಿಯಿಂದ ಪಡೆಯಲು ಅರ್ಹರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.