ADVERTISEMENT

ಹಣಕಾಸು ಬಿಕ್ಕಟ್ಟಿಗೆ ಸಿಲುಕಿದ ಯೆಸ್‌ ಬ್ಯಾಂಕ್‌| ಗ್ರಾಹಕರಲ್ಲಿ ತೀವ್ರ ಆತಂಕ

ಪಿಟಿಐ
Published 6 ಮಾರ್ಚ್ 2020, 3:39 IST
Last Updated 6 ಮಾರ್ಚ್ 2020, 3:39 IST
ಯೆಸ್‌ ಬ್ಯಾಂಕ್‌
ಯೆಸ್‌ ಬ್ಯಾಂಕ್‌   

ನವದೆಹಲಿ / ಮುಂಬೈ:ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವ ಖಾಸಗಿ ವಲಯದ ಯೆಸ್‌ ಬ್ಯಾಂಕ್‌ನ ನಿರ್ದೇಶಕ ಮಂಡಳಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌, ಹೊಸ ಆಡಳಿತಾಧಿಕಾರಿಯನ್ನು ನೇಮಿಸಿದೆ.

ಬ್ಯಾಂಕ್‌ ಗ್ರಾಹಕರು ಪ್ರತಿ ಖಾತೆಯಿಂದ ₹ 50 ಸಾವಿರದವರೆಗೆ ಮಾತ್ರ ಹಣ ಹಿಂದೆ ಪಡೆಯಲು ಗರಿಷ್ಠ ಮಿತಿ ವಿಧಿಸಿದೆ. ಮುಂದಿನ ಆದೇಶ ನೀಡುವವರೆಗೆ ಇದು ಜಾರಿಯಲ್ಲಿ ಇರಲಿದೆ. ಎಸ್‌ಬಿಐನ ಮಾಜಿ ಸಿಎಫ್‌ಒ ಪ್ರಶಾಂತ್‌ ಕುಮಾರ್‌ ಅವರನ್ನು ಆಡಳಿತಗಾರರನ್ನಾಗಿ ನೇಮಕ ಮಾಡಲಾಗಿದೆ. ವಸೂಲಾಗದ ಸಾಲದ ಪ್ರಮಾಣದಲ್ಲಿನ ಭಾರಿ ಹೆಚ್ಚಳದಿಂದಾಗಿ ಬ್ಯಾಂಕ್‌ ಹಣಕಾಸು ಬಿಕ್ಕಟ್ಟಿಗೆ ಗುರಿಯಾಗಿದೆ.

ಷೇರು ಖರೀದಿಗೆ ಅನುಮತಿ: ಇದಕ್ಕೂ ಮುನ್ನ ನಡೆದಿದ್ದ ಬೆಳವಣಿಗೆಯಲ್ಲಿ, ಬ್ಯಾಂಕ್‌ನ ಷೇರುಗಳನ್ನು ಖರೀದಿಸಿ ಅದನ್ನು ಸಂಕಷ್ಟದಿಂದ ಪಾರು ಮಾಡಲು ಕೇಂದ್ರ ಸರ್ಕಾರವು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಅನುಮತಿ ನೀಡಿದೆ ಎಂದು ವರದಿಯಾಗಿತ್ತು.

ADVERTISEMENT

ಎಸ್‌ಬಿಐ ನೇತೃತ್ವದ ಹಣಕಾಸು ಸಂಸ್ಥೆಗಳ ಒಕ್ಕೂಟವು ಬ್ಯಾಂಕ್‌ನ ಮೇಲೆ ನಿಯಂತ್ರಣ ಹೊಂದುವಷ್ಟು ಪಾಲು ಬಂಡವಾಳ ಖರೀದಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿದೆ ಎಂದು ಮೂಲಗಳು ತಿಳಿಸಿದ್ದವು. ಎಲ್‌ಐಸಿಯು, ಐಡಿಬಿಐ ಬ್ಯಾಂಕ್‌ನ ಸಂಕಷ್ಟದ ಸಂದರ್ಭದಲ್ಲಿ ಇದೇ ಬಗೆಯಲ್ಲಿ ನೆರವಿಗೆ ಧಾವಿಸಿತ್ತು.

ಯೆಸ್‌ ಬ್ಯಾಂಕ್‌ನ ನಿರ್ದೇಶಕ ಮಂಡಳಿಯನ್ನು ಸೂಪರ್‌ಸೀಡ್‌ ಮಾಡುವುದಕ್ಕೂ ಮುಂಚೆ ನಡೆದ ಕ್ಷಿಪ್ರ ಬೆಳವಣಿಗೆಗಳಲ್ಲಿ ಎಸ್‌ಬಿಐನ ನಿರ್ದೇಶಕ ಮಂಡಳಿಯು ಸಭೆ ಸೇರಿ ಪಾಲು ಬಂಡವಾಳ ಖರೀದಿಸುವ ಬಗ್ಗೆ ಚರ್ಚೆ ನಡೆಸಿತ್ತು. ಯೆಸ್ ಬ್ಯಾಂಕ್‌ನಲ್ಲಿನ ಷೇರುಗಳನ್ನು ಖರೀದಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಒಟ್ಟುಗೂಡಿಸಲು ಭಾರತೀಯ ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ) ಸೂಚಿಸಲಾಗಿತ್ತು ಎಂದು ವರದಿಯಾಗಿದೆ. ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಬ್ಯಾಂಕ್‌ನಲ್ಲಿ ಎಲ್‌ಐಸಿಯು ಈಗಾಗಲೇ ಶೇ 8ರಷ್ಟು ಪಾಲು ಬಂಡವಾಳ ಹೊಂದಿದೆ.

ಒಂದು ವೇಳೆ ಈ ಒಪ್ಪಂದ ಜಾರಿಗೆ ಬಂದರೆ, ಹಲವಾರು ವರ್ಷಗಳ ನಂತರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌, ಖಾಸಗಿ ವಲಯದ ಬ್ಯಾಂಕ್‌ ರಕ್ಷಣೆಗೆ ಧಾವಿಸಿದ ಮೊದಲ ಪ್ರಯತ್ನ ಇದಾಗಿರಲಿದೆ. 2008ರಲ್ಲಿ ಸಂಭವಿಸಿದ್ದ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ನಷ್ಟಕ್ಕೆ ಗುರಿಯಾದ ಖಾಸಗಿ ಹಣಕಾಸು ಸಂಸ್ಥೆಗಳ ಪುನಶ್ಚೇತನಕ್ಕೆ ಸಾರ್ವಜನಿಕರ ಹಣ ಬಳಸುವುದರ ವಿರುದ್ಧ ಅಭಿವೃದ್ಧಿಹೊಂದಿದ ದೇಶಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

‘ತೊಂದರೆಗೆ ಸಿಲುಕಿರುವ ಬ್ಯಾಂಕ್‌ ವಿಫಲಗೊಳ್ಳಲು ಅವಕಾಶ ನೀಡುವುದಿಲ್ಲ’ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಅವರು ಕೆಲ ದಿನಗಳ ಹಿಂದೆಯಷ್ಟೇ ಹೇಳಿದ್ದರು.

ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಯೆಸ್‌ ಬ್ಯಾಂಕ್‌ ಹಿಂದೊಮ್ಮೆ ಹೂಡಿಕೆದಾರರ ಮೆಚ್ಚುಗೆಗೆ ಪಾತ್ರವಾಗಿತ್ತು. ಇತ್ತೀಚಿನ ದಿನಗಳಲ್ಲಿ ದೊಡ್ಡ ಮೊತ್ತದ ಸಾಲ ಮರುಪಾವತಿಯಾಗದೇ ಹಣಕಾಸಿನ ಮುಗ್ಗಟ್ಟಿಗೆ ಗುರಿಯಾಗಿದೆ. ಹೊಸ ಸಾಲ ನೀಡಿಕೆ ಪ್ರಮಾಣವೂ ಕಡಿಮೆಯಾಗಿದೆ.

ಬ್ಯಾಂಕ್‌ ತನ್ನ ವಹಿವಾಟು ಮುಂದುವರೆಸಲು ₹ 14 ಸಾವಿರ ಕೋಟಿ ಸಂಗ್ರಹಿಸಲು ಕಳೆದ ಕೆಲ ತಿಂಗಳುಗಳಿಂದ ಪ್ರಯತ್ನಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.