ADVERTISEMENT

ಎನ್‌ಪಿಎ: ಆರ್‌ಬಿಐ ನಡೆಗೆ ಹಿನ್ನಡೆ

‘ಫೆಬ್ರುವರಿ 12ರ ಸುತ್ತೋಲೆ’ ರದ್ದುಪಡಿಸಿದ ಕೋರ್ಟ್‌ ತೀರ್ಪು

ಪಿಟಿಐ
Published 3 ಏಪ್ರಿಲ್ 2019, 19:00 IST
Last Updated 3 ಏಪ್ರಿಲ್ 2019, 19:00 IST
ಸಾಲ
ಸಾಲ   

ನವದೆಹಲಿ: ದಿವಾಳಿ ಸಂಹಿತೆ (ಐಬಿಸಿ) ಪ್ರಕ್ರಿಯೆ ಮೂಲಕ ಸುಸ್ತಿದಾರ ಕಂಪನಿಗಳಿಂದ ದೊಡ್ಡ ಮೊತ್ತದ ಸಾಲ ವಸೂಲಿ ಮಾಡುವ ಆರ್‌ಬಿಐನ ಕಠಿನ ಸ್ವರೂಪದ ಸುತ್ತೋಲೆಯನ್ನು ಸುಪ್ರೀಂಕೋರ್ಟ್‌ ರದ್ದು ಮಾಡಿರುವುದು ಬ್ಯಾಂಕ್‌ಗಳು ಮತ್ತು ಸಾಲಗಾರರ ಮೇಲೆ ಪರಿಣಾಮ ಬೀರಲಿದೆ.

ದೊಡ್ಡ ಕಂಪನಿಗಳು ಸಾಲ ಮರುಪಾವತಿಗೆ ಒಂದು ದಿನ ತಡ ಮಾಡಿದರೂ ಅಂತಹ ಸಾಲ ಖಾತೆಗಳನ್ನು ಸುಸ್ತಿ ಸಾಲ ಎಂದು ವರ್ಗೀಕರಿಸಿ, ಸಾಲ ವಸೂಲಾತಿಗೆ ದಿವಾಳಿ ಸಂಹಿತೆಯಡಿ ಕ್ರಮ ಕೈಗೊಳ್ಳಲು ಆರ್‌ಬಿಐ ಸುತ್ತೋಲೆ ಅವಕಾಶ ಕಲ್ಪಿಸಿತ್ತು. ಇದು ‘ಫೆಬ್ರುವರಿ 12ರ ಸುತ್ತೋಲೆ’ ಎಂದೇ ಜನಪ್ರಿಯವಾಗಿತ್ತು.

₹ 2 ಸಾವಿರ ಕೋಟಿಗಿಂತ ಹೆಚ್ಚಿನ ಸುಸ್ತಿಸಾಲದ ಪ್ರಕರಣಗಳಲ್ಲಿ 180 ದಿನಗಳಲ್ಲಿ ಪರಿಹಾರ ಕಂಡುಕೊಳ್ಳದಿದ್ದರೆ, ಅಂತಹ ಸಾಲದ ಖಾತೆಗಳನ್ನು ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಗೆ ಇಲ್ಲವೆ ದಿವಾಳಿ ಕೋರ್ಟ್‌ಗೆ ಕಡ್ಡಾಯವಾಗಿ ಶಿಫಾರಸು ಮಾಡಬೇಕಾಗಿತ್ತು.

ADVERTISEMENT

ದಿವಾಳಿ ಸಂಹಿತೆಯಡಿ ಬ್ಯಾಂಕ್‌ ಮತ್ತು ಹೂಡಿಕೆದಾರರು ಕೈಗೊಂಡ ನಿರ್ಧಾರಗಳು ಅಸಿಂಧುಗೊಳ್ಳಲಿವೆ. ಸುಸ್ತಿ ಸಾಲದ ಪ್ರಕರಣಗಳನ್ನು ಕೋರ್ಟ್‌ ಹೊರಗೆ ಇತ್ಯರ್ಥಪಡಿಸಿಕೊಳ್ಳುವ ಬ್ಯಾಂಕ್‌ಗಳ ಪ್ರಯತ್ನಕ್ಕೆ ಇದರಿಂದ ಹಿನ್ನಡೆಯಾಗಲಿದೆ.

ಕೆಲ ಸಾಲಗಾರರ ವಿಷಯದಲ್ಲಿ ಬ್ಯಾಂಕ್‌ಗಳು ‘ಎನ್‌ಪಿಎ’ ನಮೂದಿಸದೆ ಕೈಬಿಡುವುದರಿಂದ ಭವಿಷ್ಯದ ವೆಚ್ಚಗಳಿಗಾಗಿ ತೆಗೆದು ಇರಿಸುವ ಮೊತ್ತವೂ ಕಡಿಮೆಯಾಗಲಿದೆ. ಔಪಚಾರಿಕವಾದ ದಿವಾಳಿ ಸಂಹಿತೆ ಪ್ರಕ್ರಿಯೆ ಮೂಲಕ ಸಾಲ ವಸೂಲಾತಿ ಬದಲಿಗೆ ಹಳೆಯ ಪದ್ಧತಿಯಾಗಿರುವ ಸಾಲ ಮರು ಹೊಂದಾಣಿಕೆಗೆ ಮತ್ತೆ ಅವಕಾಶ ದೊರೆಯಲಿದೆ.

ಬ್ಯಾಂಕ್‌ಗಳ ಪಾಲಿಗೆ ಇದರಿಂದ ಭಾರಿ ಹಿನ್ನಡೆ ಉಂಟಾಗಲಿದೆ. ಆದರೆ, ಸಾಲದ ಸುಳಿಗೆ ಸಿಲುಕಿರುವ ವಿದ್ಯುತ್‌, ಉಕ್ಕು, ಜವಳಿ, ಸಕ್ಕರೆ ವಲಯಗಳ ಕಂಪನಿಗಳಿಗೆ ಪರಿಹಾರ ಸಿಗಲಿದೆ.

ಸರ್ಕಾರದ ಅಧಿಕಾರ: ಸುಸ್ತಿದಾರ ಕಂಪನಿಗಳಿಂದ ಸಾಲ ವಸೂಲಿ ಮಾಡಲು ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಗೆ (ಎನ್‌ಸಿಎಲ್‌ಅ) ಶಿಫಾರಸು ಮಾಡಲು ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ನಿರ್ದೇಶನ ನೀಡಬಹುದಾಗಿದೆ ಎಂದೂ ಕೋರ್ಟ್‌ ಸ್ಪಷ್ಟಪಡಿಸಿದೆ.

ಸುಸ್ತಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಆರ್‌ಬಿಐಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಿರ್ದೇಶನ ನೀಡುವ ಕೇಂದ್ರ ಸರ್ಕಾರಕ್ಕೆ ಇರುವ ಅಧಿಕಾರವನ್ನು ಕೋರ್ಟ್‌ ಎತ್ತಿ ಹಿಡಿದಿದೆ.

ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಯ ಸೆಕ್ಷನ್‌ 35ಎಎ ಅನ್ವಯ, ಕೇಂದ್ರ ಸರ್ಕಾರವು ತನ್ನ ವಿವೇಚನೆ ಬಳಸಿಕೊಂಡು ಕೇಂದ್ರೀಯ ಬ್ಯಾಂಕ್‌ಗೆ ನಿರ್ದೇಶನ ನೀಡಬಹುದಾಗಿದೆ. ದಿವಾಳಿ ಸಂಹಿತೆಯಡಿ (ಐಬಿಸಿ) ಯಾವುದೇ ಕಂಪನಿ ವಿರುದ್ಧ ಸಾಲ ವಸೂಲಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರವು ಆರ್‌ಬಿಐಗೆ ಅಧಿಕಾರ ನೀಡಲಿದೆ.

₹ 2 ಸಾವಿರ ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲ ಬಾಕಿ ಉಳಿಸಿಕೊಂಡ ಪ್ರಕರಣಗಳಲ್ಲಿ ಬ್ಯಾಂಕ್‌ಗಳು ಸಾಲ ವಸೂಲಿಗೆ ಕೈಗೊಂಡ ಕ್ರಮಗಳ ಬಗ್ಗೆ 180 ದಿನಗಳಲ್ಲಿ ಮಾಹಿತಿ ನೀಡಬೇಕು ಎಂದು ಆರ್‌ಬಿಐ 2018ರ ಫೆಬ್ರುವರಿಯಲ್ಲಿ ಸುತ್ತೋಲೆ ಹೊರಡಿಸಿತ್ತು.
ಇದಕ್ಕೆ ಉದ್ದಿಮೆ ವಲಯ ಮತ್ತು ಸಂಸತ್ತಿನ ಸಮಿತಿಯಿಂದ ಆಕ್ಷೇಪವ್ಯಕ್ತವಾಗಿತ್ತು.

ಹೊಸ ನಿಯಮ ಅಗತ್ಯ: ಅಮಿತಾಭ್‌ ‘ಸಾಲಗಾರರು ನಿಗದಿತ ಸಮಯದಲ್ಲಿ ಸಾಲ ಮರುಪಾವತಿಸುವಂತೆ ಮಾಡಲು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಹೊಸ ನಿಯಮಗಳನ್ನು ರೂಪಿಸುವ ಅಗತ್ಯ ಇದೆ’ ಎಂದು ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಹೇಳಿದ್ದಾರೆ.

‘ಸಾಲಗಾರರಿಂದ ಹಣಕಾಸು ಶಿಸ್ತು ನಿರೀಕ್ಷಿಸಲು ಹೊಸ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಬೇಕು. ಇದರಿಂದ ಸಕಾಲದಲ್ಲಿ ಸಾಲ ಮರುಪಾವತಿ ಆಗಲಿದೆ. ವಸೂಲಾಗದ ಸಾಲಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.