ADVERTISEMENT

ಬಡ್ಡಿ ದರ, ಆರ್ಥಿಕ ಮುನ್ನೋಟ ಕಡಿತ

ಆರ್‌ಬಿಐನ ಅಚ್ಚರಿಯ ನಿರ್ಧಾರ: ಗೃಹ, ವಾಹನ, ಸಾಲ ಅಗ್ಗ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 20:15 IST
Last Updated 7 ಆಗಸ್ಟ್ 2019, 20:15 IST
ಶಕ್ತಿಕಾಂತ್‌ ದಾಸ್‌
ಶಕ್ತಿಕಾಂತ್‌ ದಾಸ್‌   

ಮುಂಬೈ (ಪಿಟಿಐ): ದೇಶಿ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿರುವುದನ್ನು ಒಪ್ಪಿಕೊಂಡಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು, ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ತನ್ನ ಅಲ್ಪಾವಧಿ ಬಡ್ಡಿ ದರವನ್ನು (ರೆಪೊ) ಅನಿರೀಕ್ಷಿತವಾಗಿ ಶೇ 0.35ರಷ್ಟು ತಗ್ಗಿಸಿದೆ.

ಇದರಿಂದ ಗೃಹ ಮತ್ತು ವಾಹನ ಖರೀದಿ ಸಾಲದ ಮಾಸಿಕ ಸಮಾನ ಕಂತು (ಇಎಂಐ) ಮತ್ತು ಉದ್ದಿಮೆಗಳು ಪಡೆಯುವ ಸಾಲದ ಮೇಲಿನ ಬಡ್ಡಿ ದರ ಅಗ್ಗವಾಗಲಿವೆ. ಆರ್‌ಬಿಐನ ಬಡ್ಡಿ ದರ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಬ್ಯಾಂಕ್‌ಗಳು ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಭರವಸೆ ನೀಡಿದ್ದವು.

ಆರ್‌ಬಿಐ ನಿರ್ಧಾರದ ಬೆನ್ನಲ್ಲೆ, ಎಸ್‌ಬಿಐ ತನ್ನ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ 0.15ರಷ್ಟು ತಗ್ಗಿಸಿದೆ. ಗೃಹ ಸಾಲಗಳು ಶೇ 0.35ರಷ್ಟು ಅಗ್ಗವಾಗಲಿವೆ.

ADVERTISEMENT

ಶೇ 0.25ರಷ್ಟು ಬಡ್ಡಿ ಕಡಿತವಾಗಲಿದೆ ಎನ್ನುವ ನಿರೀಕ್ಷೆಗೆ ಈ ನಿರ್ಧಾರವು ವ್ಯತಿರಿಕ್ತವಾಗಿದೆ. ಶೇ 5.75 ರಿಂದ ಶೇ 5.40 ರಷ್ಟಾಗಲಿರುವ ರೆಪೊ ದರವು ಒಂಬತ್ತು ವರ್ಷಗಳಲ್ಲಿನ ಕನಿಷ್ಠ ಮಟ್ಟವಾಗಿದೆ. ರಿವರ್ಸ್‌ ರೆಪೊ ದರವು ಶೇ 5.15ರಷ್ಟಾಗಿದೆ.

ಬ್ಯಾಂಕ್‌ಗಳಿಗೆ ಕೇಂದ್ರೀಯ ಬ್ಯಾಂಕ್‌ ನೀಡುವ ಸಾಲದ ಬಡ್ಡಿ ದರವಾಗಿರುವ ರೆಪೊ ದರವು ಈ ವರ್ಷದಲ್ಲಿ ಇದುವರೆಗೆ ಶೇ 1.1ರಷ್ಟು ಕಡಿತಗೊಂಡಿದೆ. 2006ರಿಂದೀಚೆಗೆ ಶೇ 0.25 ಅಥವಾ ಶೇ 0.50ರ ದರದಲ್ಲಿ ಬಡ್ಡಿ ದರ ಕಡಿತ ಮಾಡುತ್ತ ಬರಲಾಗಿತ್ತು. ಈ ಬಾರಿ ಅಂತಹ ಸಂಪ್ರದಾಯ ಕೈಬಿಡಲಾಗಿದೆ.

ಬೇಡಿಕೆ ಮತ್ತು ಬಂಡವಾಳ ಹೂಡಿಕೆ ಯಲ್ಲಿನ ಇಳಿಕೆಯಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿನ ಆರ್ಥಿಕ ವೃದ್ಧಿ ದರದ ಅಂದಾಜನ್ನು ಆರ್‌ಬಿಐ ಶೇ 6.9ಕ್ಕೆ ಪರಿಷ್ಕರಿಸಿದೆ. ವೃದ್ಧಿ ದರವು ಶೇ 7ರಷ್ಟು ಇರಲಿದೆ ಎಂದು ಜೂನ್‌ ತಿಂಗಳಲ್ಲಿ ಅಂದಾಜಿಸಿತ್ತು.

‘ಈ ನಿರ್ಧಾರದಲ್ಲಿ ಅಸಾಮಾನ್ಯವಾದುದೇನೂ ಇಲ್ಲ. ಶೇ 0.25ರಷ್ಟು ಬಡ್ಡಿ ದರ ಕಡಿತವು ಸದ್ಯದ ಪರಿಸ್ಥಿತಿಗೆ ಸಾಲುತ್ತಿರಲಿಲ್ಲ. ಶೇ 0.50ರಷ್ಟು ಕಡಿತವು ಅತಿಯಾಗಿರುತ್ತಿತ್ತು. ಹೀಗಾಗಿ ಶೇ 0.35 ಕಡಿತದ ಮೂಲಕ ಸಮತೋಲನ ಸಾಧಿಸಲಾಗಿದೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

‘ಬೇಡಿಕೆ ಮತ್ತು ಹೂಡಿಕೆ ಕುಂಠಿತಗೊಂಡಿರುವುದು ಆರ್ಥಿಕ ಪ್ರಗತಿ ಮೇಲೆ ಉತ್ಸಾಹ ಕುಂದಿಸುವ ಪರಿಣಾಮ ಬೀರುತ್ತಿದೆ’ ಎಂದು ಹೇಳಿದ ಬೆನ್ನಲ್ಲೇ, ‘ಇದೊಂದು ಆರ್ಥಿಕ ಚಟುವಟಿಕೆಗಳ ಏರಿಳಿತದ ಪರಿಣಾಮವಷ್ಟೆ. ಅರ್ಥ ವ್ಯವಸ್ಥೆಯ ಎಲ್ಲ ವಲಯಗಳಲ್ಲಿನ ತೀವ್ರ ಸ್ವರೂಪದ ಪ್ರಗತಿ ಕುಂಠಿತಗೊಂಡಿಲ್ಲ. ನಾಲ್ಕನೆ ತ್ರೈಮಾಸಿಕದ ವೇಳೆಗೆ ಬೆಳವಣಿಗೆ ಚೇತರಿಕೆ ಕಾಣಲಿದೆ’ ಎಂದು ದಾಸ್‌ ಸ್ಪಷ್ಟನೆ ನೀಡಿದರು.

ಹಣದುಬ್ಬರದ ಅಂದಾಜು: ಗ್ರಾಹಕರ ಬೆಲೆ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 3.1 ಮತ್ತು ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಶೇ 3.5ರಿಂದ ಶೇ 3.7ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.

ದಿನದ 24 ಗಂಟೆ ‘ನೆಫ್ಟ್‌’ ಸೌಲಭ್ಯ

ಬ್ಯಾಂಕ್‌ ಖಾತೆಗಳ ಮೂಲಕ ಸುಲಭವಾಗಿ ಹಣ ವರ್ಗಾಯಿಸುವ ’ನೆಫ್ಟ್‌’ (ಎನ್‌ಇಎಫ್‌ಟಿ) ಸೌಲಭ್ಯವನ್ನು ಡಿಸೆಂಬರ್‌ ತಿಂಗಳಿನಿಂದ ದಿನದ 24 ಗಂಟೆಗಳಿಗೆ (24X7) ವಿಸ್ತರಿಸಲು ಆರ್‌ಬಿಐ ನಿರ್ಧರಿಸಿದೆ.

ಡಿಜಿಟಲ್‌ ವಹಿವಾಟು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ರಿಟೇಲ್‌ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ನಿರೀಕ್ಷಿಸಲಾಗಿದೆ ಎಂದು ತಿಳಿಸಿದೆ. ಸದ್ಯಕ್ಕೆ ಬ್ಯಾಂಕ್‌ಗಳು ಕೆಲಸ ಮಾಡುವ ದಿನಗಳಲ್ಲಿ ಮಾತ್ರ ಬೆಳಿಗ್ಗೆ 8ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಈ ಸೇವೆ ಲಭ್ಯ ಇದೆ. ಈ ಸೌಲಭ್ಯದಡಿ ₹ 2 ಲಕ್ಷದವರೆಗೆ ಹಣ ವರ್ಗಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.