ಮುಂಬೈ: ಪ್ರಸಕ್ತ ವರ್ಷದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸತತ ಎರಡನೇ ಬಾರಿಗೆ ರೆಪೊ ದರದಲ್ಲಿ ಶೇ 0.25ರಷ್ಟು ಕಡಿತಗೊಳಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಡ್ಡಿದರ ಕಡಿತಗೊಳಿಸುವ ಸುಳಿವು ಕೂಡ ನೀಡಿದೆ.
ಶೇ 6.25ರಷ್ಟಿದ್ದ ರೆಪೊ ದರವು ಶೇ 6ಕ್ಕೆ ಇಳಿದಿದೆ. ಇದರಿಂದ ಬ್ಯಾಂಕ್‌ಗಳಲ್ಲಿ ಈ ಬಡ್ಡಿದರ ಆಧರಿತ ಗೃಹ, ಕಾರು ಮತ್ತು ವೈಯಕ್ತಿಕ ಸಾಲ ಪಡೆದವರಿಗೆ ಸಾಲ ಮರುಪಾವತಿಯ ಸಮಾನ ಮಾಸಿಕ ಕಂತಿನ (ಇಎಂಐ) ಮೊತ್ತವೂ ಕಡಿಮೆಯಾಗಲಿದೆ. ಅಲ್ಲದೆ, ಗೃಹ ಮತ್ತು ವಾಹನ ಸಾಲ ಅಗ್ಗವಾಗಲಿವೆ.
ಅಮೆರಿಕದ ಪ್ರತಿ ಸುಂಕ ನೀತಿಯು ಭಾರತಕ್ಕೆ ಹಲವು ಸವಾಲುಗಳನ್ನು ಒಡ್ಡಿದೆ. ಸುಂಕದ ಬಿಸಿಯನ್ನು ತಣ್ಣಗಾಗಿಸಿ ದೇಶದ ಆರ್ಥಿಕತೆಗೆ ಬಲ ತುಂಬಲು ಆರ್‌ಬಿಐ ಮುಂದಾಗಿದೆ. ಹಾಗಾಗಿ, ಬಡ್ಡಿದರ ಇಳಿಕೆಯ ನಿರ್ಧಾರ ಕೈಗೊಂಡಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಮುಕ್ತಾಯಗೊಂಡ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ, ಎಲ್ಲಾ ಆರು ಸದಸ್ಯರು ಬಡ್ಡಿದರ ಕಡಿತಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಿದರು.
ವಾಣಿಜ್ಯ ಬ್ಯಾಂಕ್‌ಗಳಿಗೆ ಹಣಕಾಸಿನ ಕೊರತೆ ನೀಗಿಸಲು ಆರ್‌ಬಿಐ ಸಾಲ ಸೌಲಭ್ಯ ನೀಡುತ್ತದೆ. ಈ ಸಾಲಕ್ಕೆ ವಿಧಿಸುವ ಬಡ್ಡಿಯೇ ‘ರೆಪೊ ದರ’. ಇದು ಹೆಚ್ಚಳವಾದರೆ ಬ್ಯಾಂಕ್‌ಗಳ ಸಾಲದ ವೆಚ್ಚ ಪ್ರಮಾಣವೂ ಏರಿಕೆಯಾಗುತ್ತದೆ. ಬ್ಯಾಂಕ್‌ಗಳು ಸಹಜವಾಗಿ ಈ ಹೊರೆಯನ್ನು ಗ್ರಾಹಕರ ಮೇಲೆ ಹೇರುತ್ತವೆ. ಇದರಿಂದ ಗೃಹ, ಕಾರು ಮತ್ತು ವೈಯಕ್ತಿಕ ಸಾಲದ ಇಎಂಐ ಪಾವತಿ ಮೊತ್ತದಲ್ಲಿ ಏರಿಕೆಯಾಗುತ್ತದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಹೋತ್ರಾ, ‘ಈ ಮೊದಲು ಸಭೆಯು ಹಣದುಬ್ಬರ ನಿಯಂತ್ರಿಸುವ ಮೂಲಕ ಆರ್ಥಿಕ ಬೆಳವಣಿಗೆಯ ಸ್ಥಿರತೆಗೆ ಒತ್ತು ನೀಡಲು ‘ತಟಸ್ಥ’ ನೀತಿ ಅನುಸರಿಸಿತ್ತು. ಈಗ ‘ಹೊಂದಾಣಿಕೆ’ ನಿಲುವು ತಳೆದಿದೆ ಎಂದು ತಿಳಿಸಿದರು.
‘ಮುಂದಿನ ಎಂಪಿಸಿ ಸಭೆಯ ವೇಳೆಗೆ ದೇಶದಲ್ಲಿ ಆರ್ಥಿಕ ಅನಿಶ್ಚಿತ ಸ್ಥಿತಿ ಎದುರಾದರೆ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದು ಅಥವಾ ಕಡಿತ ಮುಂದುವರಿಸುವುದು ಈ ನಿಲುವಿನ ಹಿಂದಿರುವ ಉದ್ದೇಶವಾಗಿದೆ’ ಎಂದು ಸ್ಪಷ್ಟಪಡಿಸಿದರು.
ನಾನು ಮಹಾಭಾರತದ ಸಂಜಯನಲ್ಲ. ಸದ್ಯ ಜಾಗತಿಕ ಅನಿಶ್ಚಿತ ಸ್ಥಿತಿ ತಲೆದೋರಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ರೆಪೊ ದರವು ಯಾವ ಮಟ್ಟದಲ್ಲಿ ಮಿತಗೊಳ್ಳಲಿದೆ ಎಂದು ಹೇಳುವುದು ಕಷ್ಟಕರಸಂಜಯ್ ಮಲ್ಹೋತ್ರಾ ಆರ್‌ಬಿಐ ಗವರ್ನರ್
ನಿಶ್ಚಿತ ಠೇವಣಿಗೆ ಬರೆ
ಜನಸಾಮಾನ್ಯರ ಹೂಡಿಕೆ ಹಾಗೂ ಉಳಿತಾಯದ ಮೇಲೂ ರೆಪೊ ದರ ಪರಿಣಾಮ ಬೀರುತ್ತದೆ. ಬ್ಯಾಂಕ್‌ಗಳು ಗ್ರಾಹಕರಿಂದ ಹೆಚ್ಚಿನ ಮೊತ್ತದ ಠೇವಣಿ ಆಕರ್ಷಿಸಲು ಮುಂದಾಗುತ್ತವೆ. ರೆಪೊ ದರ ಹೆಚ್ಚಳವಾದರೆ ನಿಶ್ಚಿತ ಠೇವಣಿ ಹಾಗೂ ಇತರೆ ಉಳಿತಾಯದ ಮೊತ್ತಕ್ಕೆ ಹೆಚ್ಚಿನ ಬಡ್ಡಿ ಲಭಿಸುತ್ತದೆ. ರೆಪೊ ದರ ಇಳಿಕೆಯಾದಾಗ ಉಳಿತಾಯ ಯೋಜನೆಗಳ ಮೇಲೆ ಲಭಿಸುವ ಬಡ್ಡಿ ಕೂಡ ಕಡಿಮೆಯಾಗುತ್ತದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ಬ್ಯಾಂಕ್‌ಗಳು ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಇಳಿಸಲು ಮುಂದಾಗುವುದಿಲ್ಲ. ಹಂತ ಹಂತವಾಗಿ ಈ ನಿಟ್ಟಿನಲ್ಲಿ ಕ್ರಮವಹಿಸುತ್ತವೆ. ಹಾಗಾಗಿ ಗ್ರಾಹಕರು ಹೆಚ್ಚಿನ ಬಡ್ಡಿದರ ನೀಡುವ ಬ್ಯಾಂಕ್‌ಗಳಲ್ಲಿ ಹಣವನ್ನು ಠೇವಣಿ ಇಡುವುದು ಉತ್ತಮ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ತಗ್ಗಿದ ಜಿಡಿಪಿ ಬೆಳವಣಿಗೆ ದರ
ಜಾಗತಿಕ ಮಟ್ಟದಲ್ಲಿ ತಲೆದೋರಿರುವ ವ್ಯಾಪಾರ ಸಮರ ಮತ್ತು ಆರ್ಥಿಕ ಅನಿಶ್ಚಿತ ಸ್ಥಿತಿಯಿಂದಾಗಿ 2025–26ನೇ ಆರ್ಥಿಕ ವರ್ಷದಲ್ಲಿನ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರವನ್ನು ಆರ್‌ಬಿಐ ಪರಿಷ್ಕರಿಸಿದೆ. ಈ ಮೊದಲು ಜಿಡಿಪಿಯು ಶೇ 6.7ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಲಾಗಿತ್ತು. ಇದನ್ನು ಶೇ 6.5ಕ್ಕೆ ತಗ್ಗಿಸಿದೆ. ಮೊದಲ ತ್ರೈಮಾಸಿಕದಲ್ಲಿ ಶೇ 6.5 ಎರಡನೇ ತ್ರೈಮಾಸಿಕ ಶೇ 6.7 ಮೂರನೇ ತ್ರೈಮಾಸಿಕ ಶೇ 6.6 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ 6.3ರಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ. ‘ದೇಶದ ಜಲಾಶಯಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದ್ದು ಆಹಾರ ಧಾನ್ಯಗಳ ಉತ್ಪಾದನೆಗೆ ಬಲ ನೀಡಲಿದೆ. ಹಾಗಾಗಿ ಕೃಷಿ ವಲಯವು ಸದೃಢವಾಗಿರಲಿದೆ’ ಎಂದು ಗವರ್ನರ್ ಮಲ್ಹೋತ್ರಾ ಹೇಳಿದ್ದಾರೆ.
ಚಿಲ್ಲರೆ ಹಣದುಬ್ಬರ ಪರಿಷ್ಕರಣೆ
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ 4ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಈ ಮೊದಲು ಶೇ 4.2ರಷ್ಟು ದಾಖಲಾಗಲಿದೆ ಎಂದು ಅಂದಾಜಿಸಲಾಗಿತ್ತು. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿತ ಹಣದುಬ್ಬರವು ಜನವರಿಯಿಂದ ಫೆಬ್ರುವರಿಗೆ ಶೇ 1.6ರಷ್ಟು ಇಳಿಕೆಯಾಗಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಶೇ 5.2ರಷ್ಟು ಇತ್ತು. ಫೆಬ್ರುವರಿಯಲ್ಲಿ ಶೇ 3.6ರಷ್ಟು ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದೇ ತಿಂಗಳಿನಲ್ಲಿ ಆಹಾರ ಪದಾರ್ಥಗಳ ಬೆಲೆಯು 21 ತಿಂಗಳ ಕನಿಷ್ಠ ಮಟ್ಟವಾದ ಶೇ 3.8ಕ್ಕೆ ಇಳಿಕೆಯಾಗಿದೆ. ಹಣದುಬ್ಬರವು ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 3.6 ಎರಡನೇ ತ್ರೈಮಾಸಿಕ ಶೇ 3.9 ಮೂರನೇ ತ್ರೈಮಾಸಿಕ ಶೇ 3.8 ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 4.4ರಷ್ಟು ದಾಖಲಾಗಲಿದೆ ಎಂದು ಅಂದಾಜಿಸಲಾಗಿದೆ.
ಬಿಒಐ ಯುಕೊದಿಂದ ಬಡ್ಡಿದರ ಇಳಿಕೆ
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ (ಬಿಒಐ) ಮತ್ತು ಯುಕೊ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರದಲ್ಲಿ ಶೇ 0.25ರಷ್ಟು ಕಡಿತಗೊಳಿಸಿವೆ. ಆರ್‌ಬಿಐ ರೆಪೊ ದರ ಕಡಿತಗೊಳಿಸಿದ ಬೆನ್ನಲ್ಲೇ ಈ ಕ್ರಮಕೈಗೊಂಡಿವೆ. ಉಳಿದ ಬ್ಯಾಂಕ್‌ಗಳು ಬಡ್ಡಿದರ ಇಳಿಕೆ ಮಾಡುವ ನಿರೀಕ್ಷೆಯಿದೆ. ಬ್ಯಾಂಕ್ ಆಫ್ ಇಂಡಿಯಾವು ರೆಪೊ ಆಧರಿತ ಸಾಲದ ಬಡ್ಡಿದರವನ್ನು ಶೇ 9.10ರಿಂದ ಶೇ 8.85ಕ್ಕೆ ತಗ್ಗಿಸಿದೆ. ಬುಧವಾರದಿಂದಲೇ ಈ ಪರಿಷ್ಕೃತ ದರ ಜಾರಿಗೆ ಬಂದಿದೆ. ಯುಕೊ ಬ್ಯಾಂಕ್ ರೆಪೊ ಆಧರಿತ ಸಾಲದ ಬಡ್ಡಿದರವನ್ನು ಶೇ 8.8ಕ್ಕೆ ನಿಗದಿಪಡಿಸಿದ್ದು ಗುರುವಾರದಿಂದ ಜಾರಿಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.