ADVERTISEMENT

ಅವಧಿಪೂರ್ವ ಸಾಲ ಮರುಪಾವತಿಗೆ ಶುಲ್ಕ ಬೇಡ: ಆರ್‌ಬಿಐ ಸೂಚನೆ

ಬ್ಯಾಂಕ್‌, ಎನ್‌ಬಿಎಫ್‌ಸಿಗಳಿಗೆ ಆರ್‌ಬಿಐ ಸೂಚನೆ * ವಾಣಿಜ್ಯ ಉದ್ದೇಶದ ಸಾಲಗಳಿಗೆ ಅನುಕೂಲ

ಪಿಟಿಐ
Published 3 ಜುಲೈ 2025, 15:34 IST
Last Updated 3 ಜುಲೈ 2025, 15:34 IST
<div class="paragraphs"><p>&nbsp;ಆರ್‌ಬಿಐ</p></div>

 ಆರ್‌ಬಿಐ

   

ಮುಂಬೈ: ಅತಿಸಣ್ಣ ಮತ್ತು ಸಣ್ಣ ಪ್ರಮಾಣದ ಉದ್ದಿಮೆಗಳು (ಎಂಎಸ್‌ಇ) ಹಾಗೂ ವ್ಯಕ್ತಿಗಳು ತಾವು ಪಡೆದಿರುವ ಫ್ಲೋಟಿಂಗ್ ರೇಟ್‌ ಸಾಲವನ್ನು ಅವಧಿಗೆ ಮೊದಲೇ ಮರುಪಾವತಿ ಮಾಡಿದರೆ ಅದಕ್ಕೆ ಶುಲ್ಕ ವಿಧಿಸಬಾರದು ಎಂದು ಬ್ಯಾಂಕ್‌ಗಳಿಗೆ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಆರ್‌ಬಿಐ ಸೂಚನೆ ನೀಡಿದೆ. ವ್ಯಕ್ತಿಗಳು ಮತ್ತು ಎಸ್‌ಎಂಇ ವಲಯದ ಉದ್ದಿಮೆಗಳು ವಾಣಿಜ್ಯ ಉದ್ದೇಶಕ್ಕೆ ಈ ಬಗೆಯ ಸಾಲ ಪಡೆದಿದ್ದರೂ ಈ ಸೂಚನೆ ಅನ್ವಯವಾಗಲಿದೆ.

ಇದು 2026ರ ನಂತರ ಪಡೆಯುವ ಅಥವಾ ನವೀಕರಿಸಿಕೊಳ್ಳುವ ಇಂತಹ ಸಾಲಗಳಿಗೆ ಅನ್ವಯವಾಗಲಿದೆ. ಈಗಾಗಲೇ ಜಾರಿಯಲ್ಲಿ ಇರುವ ಮಾರ್ಗಸೂಚಿ ಪ್ರಕಾರ, ವ್ಯಕ್ತಿಗಳು ವಾಣಿಜ್ಯ ಉದ್ದೇಶ ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಪಡೆದಿರುವ ಫ್ಲೋಟಿಂಗ್ ರೇಟ್‌ ಅವಧಿ ಸಾಲಗಳಿಗೆ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಅವಧಿಪೂರ್ವ ಮರುಪಾವತಿ ಶುಲ್ಕ ಪಡೆಯುವಂತೆ ಇಲ್ಲ.

ADVERTISEMENT

ಎಂಎಸ್‌ಇ ವಲಯದ ಉದ್ಯಮಗಳಿಗೆ ಸಾಲವು ಸುಲಭವಾಗಿ ಹಾಗೂ ಕೈಗೆಟಕುವ ದರದಲ್ಲಿ ಲಭ್ಯವಾಗಬೇಕಿರುವುದು ಬಹಳ ಮುಖ್ಯ ಎಂದು ಆರ್‌ಬಿಐ ಸುತ್ತೋಲೆಯಲ್ಲಿ ಹೇಳಿದೆ.

ಆದರೆ, ಕೆಲವು ಸಾಲದಾತರು ಎಂಎಸ್‌ಇ ಉದ್ಯಮಗಳಿಗೆ ನೀಡಿರುವ ಸಾಲದ ವಿಚಾರದಲ್ಲಿ ಭಿನ್ನ ಮಾರ್ಗ ತುಳಿದಿರುವುದು ಪರಿಶೀಲನೆಯ ಸಂದರ್ಭದಲ್ಲಿ ಗೊತ್ತಾಗಿದೆ. ಇದರಿಂದಾಗಿ ವ್ಯಾಜ್ಯಗಳು ಉಂಟಾಗಿವೆ ಎಂದು ಅದು ಹೇಳಿದೆ.

ಪರಿಶೀಲನೆಯ ಸಂದರ್ಭದಲ್ಲಿ ಕಂಡುಬಂದ ಅಂಶಗಳನ್ನು ಪರಾಮರ್ಶೆಗೆ ಒಳಪಡಿಸಿ, ಕರಡು ಸುತ್ತೋಲೆಗೆ ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಿ ಆರ್‌ಬಿಐ ಈ ನಿರ್ದೇಶನಗಳನ್ನು ನೀಡಿದೆ.

ವ್ಯಕ್ತಿಗಳಿಗೆ ಹಾಗೂ ಎಂಎಸ್‌ಇಗಳಿಗೆ ವಾಣಿಜ್ಯ ಉದ್ದೇಶಗಳಿಗೆ ನೀಡಿರುವ ಸಾಲಗಳಿಗೆ ವಾಣಿಜ್ಯ ಬ್ಯಾಂಕ್‌ಗಳು (ಕಿರು ಹಣಕಾಸು ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಮತ್ತು ಸ್ಥಳೀಯ ಪ್ರದೇಶ ಬ್ಯಾಂಕ್‌ಗಳನ್ನು ಹೊರತುಪಡಿಸಿ), ನಾಲ್ಕನೆಯ ಹಂತದ ಪ್ರಾಥಮಿಕ (ನಗರ) ಸಹಕಾರ ಬ್ಯಾಂಕ್‌ಗಳು, ಎನ್‌ಬಿಎಫ್‌ಸಿ (ಯುಎಲ್‌) ಮತ್ತು ಅಖಿಲ ಭಾರತ ಹಣಕಾಸು ಸಂಸ್ಥೆಗಳು ಅವಧಿಪೂರ್ವ ಮರುಪಾವತಿಗೆ ಶುಲ್ಕ ವಿಧಿಸಲು ಅವಕಾಶ ಇಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಹಾಗೆಯೇ, ವ್ಯಕ್ತಿಗಳಿಗೆ ವಾಣಿಜ್ಯ ಉದ್ದೇಶ ಹೊರತುಪಡಿಸಿ ನೀಡಿರುವ ಸಾಲಗಳಿಗೆ ಕೂಡ ಅವಧಿಪೂರ್ವ ಮರುಪಾವತಿ ಶುಲ್ಕ ವಿಧಿಸಲು ಅವಕಾಶ ಇಲ್ಲ ಎಂದು ಹೇಳಿದೆ.

ಕಿರು ಹಣಕಾಸು ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಮೂರನೆಯ ಹಂತದ ಪ್ರಾಥಮಿಕ (ನಗರ) ಸಹಕಾರ ಬ್ಯಾಂಕ್‌ಗಳು, ರಾಜ್ಯ ಸಹಕಾರ ಬ್ಯಾಂಕ್‌ಗಳು, ಕೇಂದ್ರ ಸಹಕಾರ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು (ಎಂಎಲ್‌) ₹50 ಲಕ್ಷದವರೆಗೆ ಅನುಮೋದನೆ ನೀಡಿರುವ ಸಾಲಕ್ಕೆ ಅವಧಿಪೂರ್ವ ಮರುವಾಪತಿ ಶುಲ್ಕ ವಿಧಿಸಲು ಅವಕಾಶ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.