ADVERTISEMENT

RBI Repo Rate: ರೆಪೊ ದರದಲ್ಲಿ ಬದಲಾವಣೆ ಇಲ್ಲ; ಶೇ 5.5ರಲ್ಲೇ ಮುಂದುವರಿಕೆ

ಪಿಟಿಐ
Published 6 ಆಗಸ್ಟ್ 2025, 7:03 IST
Last Updated 6 ಆಗಸ್ಟ್ 2025, 7:03 IST
<div class="paragraphs"><p>ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ</p></div>

ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ

   

–ಪಿಟಿಐ ಚಿತ್ರ

ಮುಂಬೈ: ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇರುವ ತೀರ್ಮಾನವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು ಬುಧವಾರ ತೆಗೆದುಕೊಂಡಿದೆ.

ADVERTISEMENT

ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಸಮಿತಿಯು ರೆಪೊ ದರವನ್ನು
ಶೇ 5.5ರಲ್ಲೇ ಉಳಿಸಿಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಿದೆ. ಅಲ್ಲದೆ, ‘ತಟಸ್ಥ’ ಹಣಕಾಸಿನ ನೀತಿಯನ್ನು ಮುಂದುವರಿಸಲು ಕೂಡ ಅದು ನಿರ್ಣಯಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಣಿಜ್ಯ ನೀತಿಗಳು ಪೂರ್ಣ
ಪ್ರಮಾಣದಲ್ಲಿ ಪ್ರಕಟಗೊಳ್ಳುವುದರ
ಹಾಗೂ ಈ ಹಿಂದೆ ರೆಪೊ ದರವನ್ನು ಇಳಿಕೆ ಮಾಡಿದ್ದುದರ
ಪರಿಣಾಮಗಳನ್ನು ಅರ್ಥ ಮಾಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುವ ನಿಲುವನ್ನು ಆರ್‌ಬಿಐ ತಾಳಿರುವಂತಿದೆ.

ಮುಂಗಾರು ಮಳೆಯು ಚೆನ್ನಾಗಿ ಆಗುತ್ತಿರುವುದು ಹಾಗೂ ಹಬ್ಬಗಳ ಋತು
ಹತ್ತಿರವಾಗಿರುವುದು ದೇಶದ ಅರ್ಥ ವ್ಯವಸ್ಥೆಗೆ ಶಕ್ತಿ ಕೊಡುವ ನಿರೀಕ್ಷೆ ಇದೆ.

ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಹಿವಾಟುಗಳಿಗೆ ಸವಾಲುಗಳು ಮುಂದುವರಿದಿವೆ ಎಂದು ಸಮಿತಿಯ ತೀರ್ಮಾನವನ್ನು ಪ್ರಕಟಿಸುವ ಸಂದರ್ಭದಲ್ಲಿ ಮಲ್ಹೋತ್ರಾ ಹೇಳಿದ್ದಾರೆ.

‘ಬದಲಾಗುತ್ತಿರುವ ಜಾಗತಿಕ
ವ್ಯವಸ್ಥೆಯಲ್ಲಿ ಮಧ್ಯಮಾವಧಿಯಲ್ಲಿ
ಕೂಡ ದೇಶದ ಅರ್ಥ ವ್ಯವಸ್ಥೆಯು ಚೆನ್ನಾಗಿ ಬೆಳವಣಿಗೆ ಕಾಣುವ ಸಾಧ್ಯತೆ ಇದೆ. ಇದಕ್ಕೆ ಅರ್ಥ ವ್ಯವಸ್ಥೆಯ ಆಂತರಿಕ ಶಕ್ತಿ,
ಅರ್ಥವ್ಯವಸ್ಥೆಯ ಮೂಲಭೂತ ಅಂಶಗಳು ಗಟ್ಟಿಯಾಗಿರುವುದು ಕಾರಣ’ ಎಂದು ಅವರು ಹೇಳಿದ್ದಾರೆ.

ಫೆಬ್ರುವರಿಯಿಂದ ಈಚೆಗೆ ಆರ್‌ಬಿಐ ರೆಪೊ ದರವನ್ನು ಒಟ್ಟು ಶೇ 1ರಷ್ಟು ಕಡಿಮೆ ಮಾಡಿದೆ. ಈ ಕಡಿತಗಳ ಪ್ರಯೋಜನವು ಗ್ರಾಹಕರಿಗೆ ವರ್ಗಾವಣೆ ಆಗುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಆರ್‌ಬಿಐ ಹೇಳಿದೆ.

ಚಿಲ್ಲರೆ ಹಣದುಬ್ಬರ ಪ್ರಮಾಣವು ಈ ಆರ್ಥಿಕ ವರ್ಷದ ನಾಲ್ಕನೆಯ
ತ್ರೈಮಾಸಿಕದಲ್ಲಿ ಹಾಗೂ ಅದರ ನಂತರದಲ್ಲಿ ಶೇ 4ಕ್ಕಿಂತ ಹೆಚ್ಚಳ ಕಾಣುವ ಸಾಧ್ಯತೆ ಇದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.