ADVERTISEMENT

ರೆಪೊ ದರದಲ್ಲಿ ಯಥಾಸ್ಥಿತಿ ಸಾಧ್ಯತೆ

ತಗ್ಗಿದ ಚಿಲ್ಲರೆ ಹಣದುಬ್ಬರ: ಮಾರುಕಟ್ಟೆ ತಜ್ಞರ ಅಭಿಫ್ರಾಯ

ಪಿಟಿಐ
Published 4 ಜೂನ್ 2023, 13:46 IST
Last Updated 4 ಜೂನ್ 2023, 13:46 IST
Reserve Bank of India.
Reserve Bank of India.   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತನ್ನ ಮುಂಬರುವ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೊ ದರವನ್ನು ಶೇ 6.5ರಲ್ಲಿಯೇ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 4.7ಕ್ಕೆ ಇಳಿಕೆ ಕಂಡಿದ್ದು, ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಇಳಿಕೆ ಆಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜೂನ್‌ 6 ರಿಂದ 8ರವರೆಗೆ ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಸಭೆ ಸೇರಲಿದ್ದು, ಜೂನ್‌ 8ರಂದು ಸಭೆಯ ನಿರ್ಧಾರವನ್ನು ಪ್ರಕಟಿಸಲಿದೆ.

ಏಪ್ರಿಲ್‌ನಲ್ಲಿ ಸಭೆ ಸೇರಿದ್ದ ಸಮಿತಿಯು ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅದಕ್ಕೂ ಮೊದಲು 2022ರ ಮೇ ತಿಂಗಳಿನಿಂದ ಶೇ 2.50ರಷ್ಟು ಬಡ್ಡಿದರವನ್ನು ಹೆಚ್ಚಳ ಮಾಡಿತ್ತು.

ADVERTISEMENT

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ 5ಕ್ಕಿಂತಲೂ ಕೆಳಕ್ಕೆ ಇಳಿಕೆ ಕಂಡಿದ್ದು, ಮೇನಲ್ಲಿ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇದೆ. ಹೀಗಾದಲ್ಲಿ, ಈ ಹಿಂದೆ ಬಡ್ಡಿದರದಲ್ಲಿ ಮಾಡಿರುವ ಏರಿಕೆಯು ಹಣದುಬ್ಬವರನ್ನು ನಿಯಂತ್ರಿಸಲು ಪರಿಣಾಮ ಬೀರಿದೆ ಎಂದಾಗುತ್ತದೆ. ಹೀಗಾಗಿ ಈ ಬಾರಿಯ ಸಭೆಯಲ್ಲಿ ಮತ್ತೊಮ್ಮೆ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ನಿರೀಕ್ಷೆ ಮಾಡಬಹುದು ಎಂದು ಬ್ಯಾಂಕ್‌ ಆಫ್ ಬರೋಡಾದ ಮುಖ್ಯ ಆರ್ಥಿಕ ತಜ್ಞ ಮದನ್‌ ಸಬ್ನವೀಸ್‌ ಹೇಳಿದ್ದಾರೆ.

ಅಕ್ಟೋಬರ್‌ ನಂತರ ರೆಪೊ ದರದಲ್ಲಿ ಶೇ 25 ರಿಂದ ಶೇ 50ರವರೆಗೆ ಇಳಿಕೆ ಆಗುವ ಸಾಧ್ಯತೆ ಇದೆ ಎಂದೂ ಅವರು ಸೂಚನೆ ನೀಡಿದ್ದಾರೆ.

ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಇರುವ ನಗದು ಮತ್ತು ಈಚಿನ ಜಿಡಿಪಿ ಬೆಳವಣಿಗೆಯನ್ನು ಗಮನಿಸಿದರೆ ರೆಪೊ ದರವನ್ನು ಹೆಚ್ಚಳ ಮಾಡುವಂತೆ ಕಾಣಿಸುತ್ತಿಲ್ಲ ಎಂದು ಬ್ಯಾಂಕ್‌ ಆಫ್‌ ಮಹಾರಾಷ್ಟ್ರದ ಕಾರ್ಯನಿರ್ವಾಹಕ ನಿರ್ದೇಶಕ ಆಶಿಷ್‌ ಪಾಂಡೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.