ADVERTISEMENT

ದೇಶದ ಅರ್ಥ ವ್ಯವಸ್ಥೆಗೆ ₹ 1.2 ಲಕ್ಷ ಕೋಟಿ ಹೊಸ ಕರೆನ್ಸಿ ತಂದ ಆರ್‌ಬಿಐ

ಪಿಟಿಐ
Published 17 ಏಪ್ರಿಲ್ 2020, 12:01 IST
Last Updated 17 ಏಪ್ರಿಲ್ 2020, 12:01 IST
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್   

ಮುಂಬೈ: ದೇಶದಲ್ಲಿ ಕೋವಿಡ್–19 ಕಾಣಿಸಿಕೊಂಡ ನಂತರ, ಕಳೆದ 45 ದಿನಗಳಲ್ಲಿ ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ₹ 1.2 ಲಕ್ಷ ಕೋಟಿ ಮೌಲ್ಯದ ಹೊಸ ಕರೆನ್ಸಿ ನೋಟ್‌ಗಳನ್ನು ಚಲಾವಣೆಗೆ ತಂದಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತದಾಸ್ ಶುಕ್ರವಾರ ಹೇಳಿದರು.

ಎಟಿಎಂಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ದೂರದ ಮತ್ತು ಒಳಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆ ಒದಗಿಸುವ ವಾಣಿಜ್ಯ ಪ್ರತಿನಿಧಿಗಳು (ಬ್ಯುಸಿನೆಸ್ ಕರೆಸ್ಪಾಂಡೆಂಟ್ಸ್) ಅಗತ್ಯವಿರುವವರಿಗೆ ಸೌಲಭ್ಯ ಒದಗಿಸುತ್ತಿದ್ದಾರೆ ಎಂದು ಅವರು ನುಡಿದರು.

ಮಾರ್ಚ್‌ ತಿಂಗಳಲ್ಲಿ ನಗದು ವಹಿವಾಟಿನ ಪ್ರಮಾಣ ₹ 86,000 ಕೋಟಿಯಷ್ಟು ಹೆಚ್ಚಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನರು ಕರೆನ್ಸಿ ನೋಟುಗಳನ್ನು ವಿತ್‌ಡ್ರಾ ಮಾಡಿಕೊಳ್ಳುವ ಪ್ರಮಾಣ ಹೆಚ್ಚಾಗಿದೆ ಎಂಬ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯೆಯಾಗಿ ಆರ್‌ಬಿಐ ಗವರ್ನರ್‌ ಹೊಸ ಕರೆನ್ಸಿ ನೋಟುಗಳನ್ನು ಚಲಾವಣೆಗೆ ತಂದಿರುವ ಮಾಹಿತಿ ನೀಡಿದರು.

ADVERTISEMENT

ಮಾರ್ಚ್‌ 1ರಿಂದ ಏಪ್ರಿಲ್ 14ರ ನಡುವೆ ಆರ್‌ಬಿಐನ ಪ್ರಾದೇಶಿಕ ಕಚೇರಿಗಳು ₹ 1.2 ಲಕ್ಷ ಕೋಟಿಯಷ್ಟು ನಗದನ್ನು ಚಲಾವಣೆ ಮಾಡಿವೆ. ಕೋವಿಡ್–19 ಪಿಡುಗು ದೇಶದಲ್ಲಿ ವ್ಯಾಪಿಸಿದ ನಂತರ ನಗದು ಪಡೆಯುವ ಪ್ರಮಾಣ ಹೆಚ್ಚಾಗಿದೆ ಎಂದು ಶಕ್ತಿಕಾಂತ್‌ ದಾಸ್ ಸಾಮಾಜಿಕ ಮಾಧ್ಯಮಗಳ ಮೂಲಕ ಬಿಡುಗಡೆ ಮಾಡಿರುವ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಲಾಕ್‌ಡೌನ್‌ ನಿರ್ಬಂಧದಿಂದ ಹಲವು ಬಗೆಯ ತೊಂದರೆಗಳು ಎದುರಾಗಿದ್ದರೂ ಬ್ಯಾಂಕ್‌ಗಳು ಎಟಿಎಂಗಳಿಗೆ ನಿಯಮಿತವಾಗಿ ಹಣ ತುಂಬುತ್ತಿವೆ. ಇಂಟರ್ನೆಟ್‌ ಮೊಬೈಲ್‌ ಬ್ಯಾಂಕಿಂಗ್‌ ಡೌನ್‌ಟೈಮ್ ಸಹ ಘೋಷಿಸಿಲ್ಲ ಇದು ಶ್ಲಾಘನೀಯ ಎಂದ ಶಕ್ತಿಕಾಂತ್‌ ದಾಸ್ ಹೊಗಳಿದ್ದಾರೆ.

ಬ್ಯಾಂಕ್‌ಗಳು ತಮ್ಮ ವ್ಯವಹಾರವನ್ನು ನಿರಂತರವಾಗಿ ಮುಂದುವರಿಸಲು ಯೋಜನೆಗಳನ್ನು ರೂಪಿಸಬೇಕು. ಗ್ರಾಹಕರಿಗೆ ನಿರಂತರವಾಗಿ ಸೌಲಭ್ಯ ಒದಗಿಸಲು ವಿಪತ್ತು ನಿರ್ವಹಣಾ ಸ್ಥಳ ಅಥವಾ ಪರ್ಯಾಯ ಸ್ಥಳಗಳಿಂದ ಕೆಲಸ ಮಾಡಲು ಗಮನಹರಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ಆರ್‌ಬಿಐನ 150 ಅಧಿಕಾರಿಗಳು ಕ್ವಾರಂಟೈನ್‌ನಲ್ಲಿದ್ದಾರೆ. ಆದರೂ ಅವರೆಲ್ಲರೂ ನಗದು ಚಲಾವಣೆ, ಚಿಲ್ಲರೆ ಮತ್ತು ಸಗಟು ವಹಿವಾಟುಗಳ ಚುಕ್ತಾ ವಿವರ, ಹಣಕಾಸು ಮಾರುಕಟ್ಟೆಗಳ ನಿರ್ವಹಣೆ, ಮೀಸಲು ನಿಧಿ, ನಗದು ಲಭ್ಯತೆ ಸೇರಿದತೆ ಹಲವು ಚಟುವಟಿಕೆಗಳನ್ನು ಗಮನಿಸುತ್ತಿದ್ದಾರೆ. ನಮ್ಮ ದೇಶದ ಕೋವಿಡ್–19ರಿಂದ ಚೇತರಿಸಿಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.