ADVERTISEMENT

ಹಣಕಾಸು ಮಾರುಕಟ್ಟೆ: ನಗದು ಕೊರತೆ ಇಲ್ಲ - ಆರ್‌ಬಿಐ

ಪಿಟಿಐ
Published 27 ಸೆಪ್ಟೆಂಬರ್ 2018, 19:44 IST
Last Updated 27 ಸೆಪ್ಟೆಂಬರ್ 2018, 19:44 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಮುಂಬೈ: ಹಣಕಾಸು ಮಾರುಕಟ್ಟೆಯಲ್ಲಿ ನಗದು ಕೊರತೆ ಉಂಟಾಗಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.

ವ್ಯವಸ್ಥೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ನಗದು ಚಲಾವಣೆ ಇದೆ. ನಗದುತನ ಹೆಚ್ಚಿಸಲು ಉದಾರ ಧೋರಣೆ ತಳೆಯಲಾಗಿದೆ. ಇದೇ ಉದ್ದೇಶಕ್ಕೆ ಈ ತಿಂಗಳ 19ರಂದು ಮುಕ್ತ ಮಾರುಕಟ್ಟೆ ಕಾರ್ಯಾಚರಣೆ (ಒಎಂಒ) ಕೈಗೊಳ್ಳಲಾಗಿತ್ತು.

ಗುರುವಾರವೂ ಇಂತಹ ಕಾರ್ಯಾಚರಣೆ ನಡೆಸಲಾಗಿದೆ. ಹಣದ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದನ್ನು ತಡೆಯಲು ಅಕ್ಟೋಬರ್‌ 1ರಿಂದ ಜಾರಿಗೆ ಬರುವಂತೆ ಶಾಸನಬದ್ಧ ನಗದು ಅನುಪಾತದಲ್ಲಿ ರಿಯಾಯ್ತಿ ನೀಡಲಾಗಿದೆ.

ADVERTISEMENT

ಬ್ಯಾಂಕ್‌ಗಳಿಗೆ ಒಂದು ದಿನಕ್ಕಿಂತ ಹೆಚ್ಚಿನ ಅವಧಿಯ ಬಳಕೆಗಾಗಿ (ಟರ್ಮ್‌ ರೆಪೊ) ₹ 1.68 ಲಕ್ಷ ಕೋಟಿ ಒದಗಿಸಲಾಗಿದೆ. ಈ ಎಲ್ಲ ಕ್ರಮಗಳಿಂದ ವ್ಯವಸ್ಥೆಯಲ್ಲಿ ನಗದು ಲಭ್ಯತೆಯ ಸಮಸ್ಯೆ ತಲೆದೋರಿಲ್ಲ ಎಂದು ಕೇಂದ್ರೀಯ ಬ್ಯಾಂಕ್‌ ತಿಳಿಸಿದೆ.

ದೀರ್ಘಾವಧಿಯ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ನೆರವು ಒದಗಿಸುವ ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ ಸಂಸ್ಥೆಯು ಹಣಕಾಸು ಬಿಕ್ಕಟ್ಟಿಗೆ ಗುರಿಯಾಗಿದೆ. ಅದರಿಂದ ಸಾಲ ಮರುಪಾವತಿ ಸಾಧ್ಯವಾಗುತ್ತಿಲ್ಲ.

ಈ ಬಿಕ್ಕಟ್ಟಿನ ಬಿಸಿಯು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ (ಎನ್‌ಬಿಎಫ್‌ಸಿ) ತಟ್ಟಿದೆ.

ಬ್ಯಾಂಕ್‌ಗಳು ‘ಎನ್‌ಬಿಎಫ್‌ಸಿ’ಗಳಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಇದರಿಂದಾಗಿ ನಗದು ಕೊರತೆ ಉಂಟಾಗಿರುವ ಆತಂಕ ಕಂಡು ಬಂದಿದೆ. ದೇಶಿ ಷೇರುಪೇಟೆಯ ವಹಿವಾಟಿನ ಮೇಲೆಯೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.