ADVERTISEMENT

ಬಡ್ಡಿ ಇಳಿಕೆ ಲಾಭ ಗ್ರಾಹಕನಿಗೆ ಸಿಕ್ಕಿದ್ದೆಷ್ಟು?

ನರಸಿಂಹ ಬಿ
Published 20 ಆಗಸ್ಟ್ 2019, 18:45 IST
Last Updated 20 ಆಗಸ್ಟ್ 2019, 18:45 IST
ಗೃಹ ಸಾಲ
ಗೃಹ ಸಾಲ   

ಭಾರತೀಯ ರಿಸರ್ವ್ ಬ್ಯಾಂಕ್‌, ತಾನು ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವಾದ ರೆಪೊ ದರ ಕಡಿತ ಮಾಡಿದ ಕೂಡಲೇ ಗೃಹ ಸಾಲ, ವಾಹನ ಸಾಲ ಅಗ್ಗವಾಗುತ್ತವೆ ಎಂಬ ನಿರೀಕ್ಷೆಗಳು ಗರಿಗೆದರುತ್ತವೆ. ಆದರೆ, ವಾಸ್ತವ ಸ್ಥಿತಿ ಇದಕ್ಕೆ ಸಂಪೂರ್ಣ ಭಿನ್ನವಾಗಿದೆ. ಆರ್‌ಬಿಐ ಬಡ್ಡಿ ದರ ಇಳಿಕೆ ಮಾಡುವುದರಿಂದ ಗ್ರಾಹಕರಿಗಿಂತಲೂ ಬ್ಯಾಂಕುಗಳಿಗೇ ಹೆಚ್ಚಿನ ಲಾಭ ಎನ್ನುವ ಸತ್ಯಾಂಶವನ್ನು ಅಂಕಿ-ಅಂಶಗಳು ಹೇಳುತ್ತಿವೆ. ಹೌದು, 2019–20ನೆ ಹಣಕಾಸು ವರ್ಷದಲ್ಲಿ ನಾಲ್ಕು ಬಾರಿ ಒಟ್ಟು 110 ಮೂಲಾಂಶ (ಶೇ 1.10) ಕಡಿತಗೊಳಿಸಿದ್ದರೂ ಗ್ರಾಹಕರಿಗೆ ವರ್ಗಾವಣೆಯಾಗಿರುವುದು ಮಾತ್ರ ನಾಲ್ಕಾಣೆ ಭಾಗದಷ್ಟು ಮಾತ್ರ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 110 ಮೂಲಾಂಶದಷ್ಟು (ಶೇ 1.10ರಷ್ಟು) ಬಡ್ಡಿ ದರ ಇಳಿಕೆಯಾಗಿ, 9 ವರ್ಷಗಳ ಕನಿಷ್ಠ ಮಟ್ಟಕ್ಕೆ ತಗ್ಗಿದೆ. ಇಷ್ಟಾಗಿಯೂ ಬ್ಯಾಂಕ್‌‌ಗಳ ಗ್ರಾಹಕರಿಗೆ ಮಾತ್ರ ಸರಾಸರಿ ಸುಮಾರು 29 ಮೂಲಾಂಶದಷ್ಟು (ಶೇ 0.29) ಪ್ರಯೋಜನ ಮಾತ್ರ ವರ್ಗಾವಣೆಯಾಗಿದೆ.

ಬಡ್ಡಿ ದರ ಇಳಿಸುವಂತೆ ಪ್ರಧಾನಿ ಕೇಳಬೇಕೆ?

ಬ್ಯಾಂಕ್‌‌ಗಳು ಬಡ್ಡಿ ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸೂಚನೆ ನೀಡಿದರು. ಇದರ ಬೆನ್ನಲ್ಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡು ಬಡ್ಡಿ ದರ ಇಳಿಕೆಯ ಲಾಭವನ್ನು ಬ್ಯಾಂಕ್‌‌ಗಳು ಗ್ರಾಹಕರಿಗೆ ತಲುಪಿಸುವಂತೆ ಮಾಡಬೇಕು ಎಂದು ಕೋರಿದರು. ಬಡ್ಡಿ ದರ ಲಾಭದ ವರ್ಗಾವಣೆಯಂತಹ ವಿಚಾರವನ್ನು ದೇಶದ ಪ್ರಧಾನಿ ಪ್ರಸ್ತಾಪಿಸಬೇಕೇ ಎನ್ನುವುದು ಇಲ್ಲಿನ ಚರ್ಚಾಸ್ಪದ ವಿಷಯ. ಆರ್‌ಬಿಐಗೆ ಎಲ್ಲ ಬ್ಯಾಂಕ್‌ಗಳ ಮೇಲೆ ನಿಯಂತ್ರಣ ಇರುತ್ತದೆ. ಅದು ಕಡ್ಡಾಯವಾಗಿ ನಿರ್ದೇಶನ ನೀಡಿದರೆ ಬಡ್ಡಿ ದರ ಇಳಿಕೆಯ ಲಾಭದ ವರ್ಗಾವಣೆ ಅಸಾಧ್ಯವಾದ ವಿಷಯವೇನಲ್ಲ. ಆದರೆ ಕೇವಲ ಸೂಚನೆ ನೀಡಿದರೆ ಏನೂ ಪ್ರಯೋಜನವಿಲ್ಲ.

ADVERTISEMENT

ಹಳೆ ಗ್ರಾಹಕನಿಗೆ ಬರೆ, ಹೊಸ ಗ್ರಾಹಕನಿಗೆ ಲಾಭ

ಬಡ್ಡಿ ದರ ಕಡಿತದ ಲಾಭವನ್ನು ವರ್ಗಾಯಿಸುವಾಗ ಹಳೆಯ ಗ್ರಾಹಕರಿಗೆ ಬರೆ ಬೀಳುತ್ತಿದ್ದು ಹೊಸ ಗ್ರಾಹಕನಿಗೆ ಮಾತ್ರ ಲಾಭವಾಗುತ್ತಿದೆ. ರೆಪೊ ದರದ ಇಳಿಕೆಯ ಲಾಭವನ್ನು ಹೊಸ ಗ್ರಾಹಕರಿಗಷ್ಟೇ ನೀಡಲು ಬ್ಯಾಂಕ್‌‌ಗಳು ಉತ್ಸುಕತೆ ತೋರಿಸುತ್ತವೆ. ಪ್ರಾಮಾಣಿಕವಾಗಿ ನಿಗಧಿತ ಸಮಯದೊಳಗೆ ಸಾಲದ ಕಂತುಗಳನ್ನು ಮರುಪಾವತಿ ಮಾಡುವ ಹಳೆಯ ಗ್ರಾಹಕನನ್ನು ಮೊದಲಿನಿಂದಲೂ ಕಡೆಗಣಿಸುತ್ತಾ ಬಂದಿವೆ. ಅವನ ಸಾಲದ ಮೇಲಿನ ಬಡ್ಡಿ ದರ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಲಾಭವಾಗುವ ಸಾಧ್ಯತೆ ಇದ್ದಲ್ಲಿ ಮಾತ್ರ ಬಾಕಿ ಇರುವ ಸಾಲವನ್ನು ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಮತ್ತೊಂದು ಬ್ಯಾಂಕ್‌‌ಗೆ ವರ್ಗಾಯಿಸುವುದೊಂದೇ ಆತನ ಮುಂದಿರುವ ಏಕೈಕ ಆಯ್ಕೆಯಾಗಿರುತ್ತದೆ.

ಬ್ಯಾಂಕುಗಳು ಹೇಳುವುದೇನು?

ರೆಪೊ ದರ ಇಳಿದ ಕೂಡಲೇ ಬಡ್ಡಿದರ ತಗ್ಗಿಸಬೇಕು ಎಂಬ ಯಾವುದೇ ನಿಯಮವಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಬ್ಯಾಂಕ್‌‌ಗಳಿಗೆ ಎಲ್ಲಾ ಹಣ ಆರ್‌ಬಿಐನಿಂದ ಬರುವುದಿಲ್ಲ. ಬೇರೆ ಬೇರೆ ಮೂಲಗಳಿಂದ ಬ್ಯಾಂಕ್‌‌ಗಳು ಹಣ ಕ್ರೋಡೀಕರಣ ಮಾಡಿಕೊಂಡಿರುತ್ತವೆ. ಸಾಲದ ಮೇಲಿನ ಬಡ್ಡಿ ದರ ಕಡಿತದ ಜತೆ ಠೇವಣಿ ಮೇಲಿನ ಬಡ್ಡಿ ದರವೂ ಕಡಿಮೆಯಾಗಬೇಕು. ಸದ್ಯಕ್ಕೆ ಠೇವಣಿಗಳ ಮೇಲಿನ ಬಡ್ಡಿ ದರವು ಗಮನಾರ್ಹವಾಗಿ ಕಡಿತವಾಗಿಲ್ಲ. ಇದಲ್ಲದೆ ಗ್ರಾಹಕರು ಸಾಲ ಪಡೆಯುವಾಗ ಈ ಹಿಂದೆ ಸಂಸ್ಕರಣಾ ಶುಲ್ಕವಿತ್ತು. ಈಗ ಅದನ್ನು ರದ್ದು ಮಾಡಲಾಗಿದೆ. ಅವಧಿಗೆ ಮುನ್ನ ಸಾಲ ಮರುಪಾವತಿ ಮಾಡಿದಾಗ ಗ್ರಾಹಕರು ಪಾವತಿಸಬೇಕಿದ್ದ ನಿಗದಿತ ಶುಲ್ಕವನ್ನು ರದ್ದು ಮಾಡಲಾಗಿದೆ. ಬ್ಯಾಂಕ್‌‌ ಖಾತೆಯಿಂದ ಖಾತೆಗೆ ಹಣ ವರ್ಗಾಯಿಸುವುದರ (ನೆಫ್ಟ್) ಶುಲ್ಕ ಕೈಬಿಡಲಾಗಿದೆ. ಆದ್ದರಿಂದ ಬಡ್ಡಿ ದರ ಇಳಿದ ಕೂಡಲೇ ಅದರ ಲಾಭವನ್ನು ತಕ್ಷಣದಲ್ಲೇ ಗ್ರಾಹಕನಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎನ್ನುವುದು ವಾಣಿಜ್ಯ ಬ್ಯಾಂಕ್‌‌ಗಳ ವಾದವಾಗಿದೆ.

ಪಾರದರ್ಶಕವಲ್ಲದ ಎಂಸಿಎಲ್‌ಆರ್‌

ಬ್ಯಾಂಕ್‌‌ಗಳು ಸಾಲ ನೀಡುವುದಕ್ಕೆ ಬ್ಯಾಂಕ್‌‌ಗಳಲ್ಲಿ ಸಾಕಷ್ಟು ಠೇವಣಿಯೂ ಇರಬೇಕಾಗುತ್ತದೆ. ಠೇವಣಿ ಮೇಲಿನ ಬಡ್ಡಿ ದರವನ್ನು ಬ್ಯಾಂಕ್‌‌ಗಳು ಹೆಚ್ಚಳ ಮಾಡಿದರೆ, ಅದಕ್ಕೆ ತಕ್ಕಂತೆ ಸಾಲದ ಮೇಲಿನ ಬಡ್ಡಿ ದರವೂ ಹೆಚ್ಚುತ್ತದೆ. ಬ್ಯಾಂಕ್‌ಗಳಲ್ಲಿನ ಠೇವಣಿಗಳಿಗೆ ಹಣ ಹೊಂದಿಸಲು ಎಷ್ಟು ವೆಚ್ಚವಾಗುತ್ತದೆ ಎಂಬ ಆಧಾರದ ಮೇಲೆ, ಸಾಲದ ಮೇಲಿನ ಬಡ್ಡಿ ದರ ನಿಗದಿ ಮಾಡುವ ಅವಕಾಶ ಬ್ಯಾಂಕ್‌ಗಳಿಗಿದೆ. ಇದಕ್ಕೆ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್ ) ಎನ್ನಲಾಗುತ್ತದೆ.

ಈ ಪ್ರಕ್ರಿಯೆ ಪಾರದರ್ಶಕವಾಗಿರದ ಕಾರಣ ಸಾಮಾನ್ಯ ಗ್ರಾಹಕನಿಗೆ ಇದು ಅರ್ಥವಾಗುವುದಿಲ್ಲ. 2018 ಜುಲೈನಲ್ಲಿ ಎಂಸಿಎಲ್‌ಆರ್ ಆಧಾರದಲ್ಲಿ 17 ವರ್ಷಗಳ ಅವಧಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ವೊಂದರಲ್ಲಿ ಶೇ 8.45 ರ ಬಡ್ಡಿದರದಲ್ಲಿ ₹ 35 ಲಕ್ಷ ಸಾಲ ಪಡೆದಿದ್ದ ವ್ಯಕ್ತಿಯೊಬ್ಬರಿಗೆ 6 ತಿಂಗಳ ಬಳಿಕ ಬಡ್ಡಿದರವನ್ನು ಶೇ 8.65 ಕ್ಕೆ ಹೆಚ್ಚಳ ಮಾಡಲಾಯಿತು. ಮತ್ತೆ 6 ತಿಂಗಳ ನಂತರ ಶೇ 8.60 ಗೆ ಇಳಿಸಲಾಯಿತು. ಆರ್‌ಬಿಐ ರೆಪೊ ದರ ಇಳಿಸಿದ್ದರೂ ಇಲ್ಲಿ ಎಂಸಿಎಲ್‌ಆರ್ ಆಧಾರದಲ್ಲಿ ಬಡ್ಡಿ ದರ ಶೇ 8.45 ರಿಂದ ಶೇ 8.60 ಗೆ ಹೆಚ್ಚಳವಾಗಿದ್ದು ಹೇಗೆ ಎನ್ನುವುದೇ ಉತ್ತರ ಸಿಗದ ಪ್ರಶ್ನೆ.

ರೆಪೊ ದರದಲ್ಲಿ ಸಾಲ ಪಡೆದರೆ ಲಾಭ

ಏಪ್ರಿಲ್ 1, 2019 ರಿಂದ ಅನ್ವಯವಾಗುವಂತೆ ರೆಪೊ ದರ ಆಧರಿಸಿ ಸಾಲದ ಬಡ್ಡಿ ದರಗಳನ್ನು ನಿಗದಿ ಮಾಡಬೇಕು ಎಂಬ ಸೂಚನೆ ಬಂದಿದೆ. ಹೀಗಾಗಿ ಹೊಸದಾಗಿ ಸಾಲ ತೆಗೆದುಕೊಳ್ಳುವವರು ಎಂಸಿಎಲ್‌ಆರ್ ಬದಲಿಗೆ ರೆಪೊ ದರ ಆಧಾರದಲ್ಲಿ ಸಾಲ ತೆಗೆದುಕೊಳ್ಳುವುದು ಹೆಚ್ಚು ಪ್ರಯೋಜನಕಾರಿ. ಅದಕ್ಕೆ ಅನುಗುಣವಾಗಿ ನಿಮ್ಮ ಗೃಹ, ವಾಹನ ಸಾಲದ ಬಡ್ಡಿ ದರ ನಿಗದಿಯಾಗಲಿದೆ. ರೆಪೊ ದರಕ್ಕೆ ಸರಿಸಮನಾಗಿ ನಿಮ್ಮ ಸಾಲದ ಬಡ್ಡಿ ದರ ತಿಂಗಳ ಒಳಗಾಗಿ ಪರಿಷ್ಕೃತಗೊಳ್ಳುತ್ತದೆ.

ಬಡ್ಡಿ ಹೊರೆ ತಗ್ಗಿಸಲು ಗೃಹ ಸಾಲ ವರ್ಗಾವಣೆ

ನೀವು ಸಾಲ ಪಡೆದಿರುವ ಬ್ಯಾಂಕ್‌ನಲ್ಲಿ ಬಡ್ಡಿ ದರ ಹೆಚ್ಚಿದ್ದು, ಮತ್ತೊಂದು ಬ್ಯಾಂಕ್‌ನಲ್ಲಿ ಬಡ್ಡಿ ದರ ಕಡಿಮೆಯಿದ್ದರೆ ಆ ಬ್ಯಾಂಕ್‌ಗೆ ಒಂದಿಷ್ಟು ಶುಲ್ಕ ನೀಡಿ, ಸಾಲವನ್ನು ವರ್ಗಾಯಿಸುವ ಪ್ರಕ್ರಿಯೆಯೇ ಗೃಹ ಸಾಲ ವರ್ಗಾವಣೆ. ಸಾಲ ವರ್ಗಾವಣೆ ಮಾಡುವಾಗ ಸಾಕಷ್ಟು ಮಾಹಿತಿ ಕಲೆ ಹಾಕಬೇಕು. ಸಾಲ ವರ್ಗಾವಣೆ ಮಾಡಿಸಿಕೊಳ್ಳುತ್ತಿರೋ ಬ್ಯಾಂಕ್‌ ಈ ಹಿಂದೆ ಯಾವ ರೀತಿ ಮತ್ತು ಯಾವ ಅವಧಿಯಲ್ಲಿ ಫ್ಲೋಟಿಂಗ್ ಬಡ್ಡಿ ದರ ಹೆಚ್ಚಳ ಮಾಡಿದೆ, ಸಾಲ ವಿತರಣಾ ಶುಲ್ಕ (ಪ್ರೊಸೆಸಿಂಗ್ ಫೀ) ಎಷ್ಟು ಎಂಬುದನ್ನು ಅರಿಯಬೇಕು. ಬಡ್ಡಿ ದರದಲ್ಲಿ ಹೆಚ್ಚು ವ್ಯತ್ಯಾಸ ಇಲ್ಲದಿದ್ದರೆ ಗೃಹ ಸಾಲ ವರ್ಗಾವಣೆ ಲಾಭದಾಯಕವಲ್ಲ.

ಬಡ್ಡಿ ಹೊರೆ ತಗ್ಗಿಸಲು ಗೃಹ ಸಾಲ ವರ್ಗಾವಣೆ

ನೀವು ಸಾಲ ಪಡೆದಿರುವ ಬ್ಯಾಂಕ್‌ನಲ್ಲಿ ಬಡ್ಡಿ ದರ ಹೆಚ್ಚಿದ್ದು, ಮತ್ತೊಂದು ಬ್ಯಾಂಕ್‌ನಲ್ಲಿ ಬಡ್ಡಿ ದರ ಕಡಿಮೆಯಿದ್ದರೆ ಆ ಬ್ಯಾಂಕ್‌ಗೆ ಒಂದಿಷ್ಟು ಶುಲ್ಕ ನೀಡುವ ಮೂಲಕ ಸಾಲವನ್ನು ವರ್ಗಾಯಿಸುವ ಪ್ರಕ್ರಿಯೆಯೇ ಗೃಹ ಸಾಲ ವರ್ಗಾವಣೆ. ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ಸಾಲ ವರ್ಗಾವಣೆ ಮಾಡುವಾಗ ಸಾಕಷ್ಟು ಮಾಹಿತಿ ಕಲೆ ಹಾಕಬೇಕು. ಸಾಲ ವರ್ಗಾವಣೆ ಮಾಡಿಸಿಕೊಳ್ಳುತ್ತಿರೋ ಬ್ಯಾಂಕ್‌ ಈ ಹಿಂದೆ ಯಾವ ರೀತಿ ಮತ್ತು ಯಾವ ಅವಧಿಯಲ್ಲಿ ಫ್ಲೋಟಿಂಗ್ ಬಡ್ಡಿ ದರ ಹೆಚ್ಚಳ ಮಾಡಿದೆ, ಸಾಲ ವಿತರಣಾ ಶುಲ್ಕ (ಪ್ರೊಸೆಸಿಂಗ್ ಫೀ) ಎಷ್ಟು ಎಂಬುದನ್ನು ಅರಿಯಬೇಕು. ಬಡ್ಡಿ ದರದಲ್ಲಿ ಹೆಚ್ಚು ವ್ಯತ್ಯಾಸ ಇಲ್ಲದಿದ್ದರೆ ಗೃಹ ಸಾಲ ವರ್ಗಾವಣೆ ಲಾಭದಾಯಕವಲ್ಲ. ಇಲ್ಲಿ ಎಚ್ಚರಿಕೆಯ ನಡೆ ಅಗತ್ಯ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.