ADVERTISEMENT

ಜಿಡಿಪಿ ಮುನ್ನೋಟ ಪರಿಷ್ಕರಿಸದ ಆರ್‌ಬಿಐ

ಪಿಟಿಐ
Published 6 ಆಗಸ್ಟ್ 2025, 15:25 IST
Last Updated 6 ಆಗಸ್ಟ್ 2025, 15:25 IST
ಜಿಡಿಪಿ
ಜಿಡಿಪಿ   

ಮುಂಬೈ: ಪ್ರಸಕ್ತ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಪ್ರಮಾಣದ ಅಂದಾಜನ್ನು ಆರ್‌ಬಿಐ ಶೇಕಡ 6.5ರಲ್ಲಿ ಉಳಿಸಿಕೊಂಡಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣದ ಅಂದಾಜನ್ನು ಪರಿಷ್ಕರಿಸಿರುವ ಆರ್‌ಬಿಐ, ಅದನ್ನು ಶೇ 3.1ಕ್ಕೆ ತಗ್ಗಿಸಿದೆ.

ಅಮೆರಿಕವು ಭಾರತದ ಸರಕುಗಳ ಮೇಲೆ ದೊಡ್ಡ ಮಟ್ಟದಲ್ಲಿ ಸುಂಕವನ್ನು ವಿಧಿಸಿರುವ ಕಾರಣಕ್ಕೆ ದೇಶದ ಜಿಡಿಪಿ ಬೆಳವಣಿಗೆ ಪ್ರಮಾಣವು ತುಸು ತಗ್ಗಬಹುದು ಎಂದು ಕೆಲವು ಹಣಕಾಸು ಸಂಸ್ಥೆಗಳು ಅಂದಾಜು ಮಾಡಿದ್ದರೂ, ಆರ್‌ಬಿಐ ತನ್ನ ಅಂದಾಜನ್ನು ಪರಿಷ್ಕರಿಸಿಲ್ಲ.

ಮುಂಗಾರು ಮಳೆಯು ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದು, ಹಣದುಬ್ಬರವು ಕಡಿಮೆ ಮಟ್ಟದಲ್ಲಿ ಇರುವುದು, ಹಣಕಾಸಿನ ಸ್ಥಿತಿಯು ಪೂರಕವಾಗಿ ಇರುವುದು ದೇಶದ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಿ ಇವೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ADVERTISEMENT

ಹಣಕಾಸು ನೀತಿಗಳು, ವಿತ್ತೀಯ ಕ್ರಮಗಳು ಹಾಗೂ ಸರ್ಕಾರದ ಕಡೆಯಿಂದ ಆಗುತ್ತಿರುವ ದೊಡ್ಡ ಮಟ್ಟದ ಬಂಡವಾಳ ವೆಚ್ಚಗಳು ಕೂಡ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಲಿವೆ. ಸೇವಾ ವಲಯದಲ್ಲಿ ಬೆಳವಣಿಗೆ ಚೆನ್ನಾಗಿ ಇರಲಿದೆ ಎಂದು ಅವರು ಹೇಳಿದ್ದಾರೆ.

ಚಿಲ್ಲರೆ ಹಣದುಬ್ಬರ ಪ್ರಮಾಣವು ಎರಡನೆಯ ತ್ರೈಮಾಸಿಕದಲ್ಲಿ ಶೇ 2.1ರಷ್ಟು, ಮೂರನೆಯ ತ್ರೈಮಾಸಿಕದಲ್ಲಿ ಶೇ 3.1ರಷ್ಟು ಹಾಗೂ ನಾಲ್ಕನೆಯ ತ್ರೈಮಾಸಿಕದಲ್ಲಿ ಶೇ 4.4ರಷ್ಟು ಇರುವ ಅಂದಾಜು ಇದೆ ಎಂದು ಆರ್‌ಬಿಒ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.