ADVERTISEMENT

ಆರ್ಥಿಕ ಬೆಳವಣಿಗೆ ಅಂದಾಜು ತಗ್ಗಿಸಿದ ಆರ್‌ಬಿಐ

ಪಿಟಿಐ
Published 4 ಜೂನ್ 2021, 15:48 IST
Last Updated 4 ಜೂನ್ 2021, 15:48 IST
   

ಮುಂಬೈ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಎಷ್ಟು ಹೆಚ್ಚಬಹುದು ಎಂಬುದರ ಅಂದಾಜನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಗ್ಗಿಸಿದೆ. ಜಿಡಿಪಿ ಬೆಳವಣಿಗೆ ದರ ಶೇಕಡ 10.5ರಷ್ಟು ಇರಲಿದೆ ಎಂದು ಈ ಮೊದಲು ಅಂದಾಜಿಸಿದ್ದ ಆರ್‌ಬಿಐ, ಈಗ ಬೆಳವಣಿಗೆ ದರ ಶೇ 9.5ರಷ್ಟು ಇರಲಿದೆ ಎಂದು ಹೇಳಿದೆ.

ಕೊರೊನಾ ಪ್ರಕರಣಗಳ ಎರಡನೆಯ ಅಲೆಯು ಸೃಷ್ಟಿಸಿರುವ ಅನಿಶ್ಚಿತ ಸ್ಥಿತಿಯ ಕಾರಣದಿಂದಾಗಿ ಜಿಡಿಪಿ ಬೆಳವಣಿಗೆ ಅಂದಾಜು ತಗ್ಗಿಸಲಾಗಿದೆ. ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಗವರ್ನರ್ ಶಕ್ತಿಕಾಂತ ದಾಸ್ ಈ ವಿಷಯ ತಿಳಿಸಿದರು.

ಕೋವಿಡ್ ಸಾಂಕ್ರಾಮಿಕವು ದೇಶದ ಸಣ್ಣ ಪಟ್ಟಣಗಳಿಗೆ, ಹಳ್ಳಿಗಳಿಗೆ ನುಗ್ಗಿದೆ. ದುರಂತಗಳಿಗೆ ಕಾರಣವಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಇದ್ದಕ್ಕಿದ್ದಂತೆ ಜಾಸ್ತಿ ಆದುದರಿಂದಾಗಿ, ಆರ್ಥಿಕ ಚೇತರಿಕೆಗೆ ಏಟು ಬಿದ್ದಿದೆ ಎಂದು ದಾಸ್ ಹೇಳಿದರು. ‘ಒಳ್ಳೆಯದಾಗುತ್ತದೆ ಎಂದು ಆಶಿಸುತ್ತಲೇ, ಅತ್ಯಂತ ಕಠಿಣ ಪರಿಸ್ಥಿತಿಯನ್ನೂ ಎದುರಿಸಲು ಆರ್‌ಬಿಐ ಸಿದ್ಧತೆ ಮಾಡಿಕೊಳ್ಳುತ್ತದೆ’ ಎಂದರು.

ADVERTISEMENT

ಹಣಕಾಸು ನೀತಿ ಸಮಿತಿಯು ರೆಪೊ ದರದಲ್ಲಿ ಯಾವುದೇ ಬದಲಾವಣೆ ತರದಿರಲು ತೀರ್ಮಾನಿಸಿದೆ. ಅಗತ್ಯ ಇರುವಷ್ಟು ಕಾಲ ಹೊಂದಾಣಿಕೆಯ ಆರ್ಥಿಕ ನೀತಿಯನ್ನು ಮುಂದುವರಿಸಲು ಕೂಡ ನಿರ್ಧರಿಸಿದೆ. ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧಿರಿಸಿರುವ ಕಾರಣ, ಸಾಲದ ಬಡ್ಡಿ ದರದಲ್ಲಿ ಹಾಗೂ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ತಕ್ಷಣಕ್ಕೆ ಬದಲಾವಣೆ ಆಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಹಾಲಿ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ 5.1ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಆದರೆ, ಕೋವಿಡ್‌ನ ಎರಡನೆಯ ಅಲೆ ಹಾಗೂ ಅದನ್ನು ತಡೆಯಲು ದೇಶದ ಎಲ್ಲ ಕಡೆಗಳಲ್ಲಿ ಜಾರಿಗೆ ಬಂದಿರುವ ನಿರ್ಬಂಧಗಳಿಂದಾಗಿ ಹಣದುಬ್ಬರ ಜಾಸ್ತಿ ಆಗುವ ಅಪಾಯವೂ ಇದೆ ಎಂದು ಹೇಳಿದೆ.

ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ಯಮಗಳ ಸಾಲದ ಅಗತ್ಯಗಳಿಗೆ ಸ್ಪಂದಿಸಲು ವಿಶೇಷವಾಗಿ ₹ 16 ಸಾವಿರ ಕೋಟಿಯನ್ನು ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ಗೆ (ಎಸ್‌ಐಡಿಬಿಐ) ಒದಗಿಸಲು ಆರ್‌ಬಿಐ ತೀರ್ಮಾನಿಸಿದೆ.

ಯಾವ ತ್ರೈಮಾಸಿಕದಲ್ಲಿ ಎಷ್ಟು ಬೆಳವಣಿಗೆ?

1ನೇ ತ್ರೈಮಾಸಿಕ 18.5%
2ನೇ ತ್ರೈಮಾಸಿಕ 7.9%
3ನೇ ತ್ರೈಮಾಸಿಕ 7.2%
4ನೇ ತ್ರೈಮಾಸಿಕ 6.6%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.