ADVERTISEMENT

ಬ್ಯಾಂಕ್‌ ನಿಗಾ ವ್ಯವಸ್ಥೆ ಬಲಪಡಿಸಲು ಕ್ರಮ

ಮೇಲ್ವಿಚಾರಣೆ, ನಿಯಂತ್ರಣಕ್ಕೆ ವಿಶೇಷ ಅಧಿಕಾರಿಗಳ ನೇಮಕ

ಪಿಟಿಐ
Published 22 ಮೇ 2019, 18:41 IST
Last Updated 22 ಮೇ 2019, 18:41 IST
ಆರ್‌ಬಿಐ ಲಾಂಛನ
ಆರ್‌ಬಿಐ ಲಾಂಛನ   

ಚೆನ್ನೈ: ಬ್ಯಾಂಕ್‌, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಒಳಗೊಂಡಂತೆ ಹಣಕಾಸು ಸಂಸ್ಥೆಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣ ಉದ್ದೇಶಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್, ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಲಿದೆ.

ಮೂಲ ಸೌಕರ್ಯ ಯೋಜನೆಗಳಿಗೆ ದೀರ್ಘಾವಧಿ ಸಾಲ ನೀಡುವ ಇನ್‌
ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಸಿಯಲ್‌ ಸರ್ವಿಸಸ್‌ನಲ್ಲಿನ (ಐಎಲ್‌ಆ್ಯಂಡ್ಎಫ್‌ಎಸ್‌) ಬಿಕ್ಕಟ್ಟಿನ ಫಲವಾಗಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನಗದು ಕೊರತೆ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಆರ್‌ಬಿಐ ಈ ನಿರ್ಧಾರಕ್ಕೆ ಬಂದಿದೆ.

ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರೀಯ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ದೇಶಿ ಆರ್ಥಿಕತೆಯ ಸದ್ಯದ ಪರಿಸ್ಥಿತಿ, ಜಾಗತಿಕ ಮತ್ತು ದೇಶಿ ಸವಾಲುಹಾಗೂ ಕೇಂದ್ರೀಯ ಬ್ಯಾಂಕ್‌ನ ಕಾರ್ಯವ್ಯಾಪ್ತಿ ಕುರಿತೂ ಸಭೆ ಪರಾಮರ್ಶೆ ನಡೆಸಿತು ಎಂದು ಆರ್‌ಬಿಐ ತಿಳಿಸಿದೆ.

ADVERTISEMENT

ವಾಣಿಜ್ಯ ಬ್ಯಾಂಕ್‌, ಪಟ್ಟಣ ಸಹಕಾರಿ ಬ್ಯಾಂಕ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮತ್ತು ನಿಯಂತ್ರಣ ಕ್ರಮಗಳನ್ನು ಬಲಪಡಿಸಲು ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಲು ನಿರ್ಧರಿಸಲಾಗಿದೆ.

ದೇಶಿ ಹಣಕಾಸು ವಲಯದಲ್ಲಿ ಹೆಚ್ಚುತ್ತಿರುವ ವೈವಿಧ್ಯತೆ, ಸಂಕೀರ್ಣತೆ ಮತ್ತು ಪರಸ್ಪರ ಅವಲಂಬನೆಯ ಕಾರಣಕ್ಕೆ ಹಣಕಾಸು ಸಂಸ್ಥೆಗಳ ಮೇಲ್ವಿಚಾರಣೆಯ ಸ್ವರೂಪ ಹೇಗಿರಬೇಕು ಎನ್ನುವುದನ್ನೂ ನಿರ್ದೇಶಕ ಮಂಡಳಿಯು ಪರಿಶೀಲಿಸಿದೆ.

ಕರೆನ್ಸಿ ನಿರ್ವಹಣೆ ಮತ್ತು ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಆರ್‌ಬಿಐ ನಿರ್ವಹಿಸುವ ಪಾತ್ರದ ಕುರಿತ ಸಂಗತಿಗಳು ಸಭೆಯಲ್ಲಿ ಚರ್ಚೆಗೆ ಬಂದವು.

ಡೆಪ್ಯುಟಿ ಗವರ್ನರ್‌ ಎನ್‌. ಎಸ್‌. ವಿಶ್ವನಾಥನ್‌, ವಿರಲ್‌ ವಿ. ಆಚಾರ್ಯ, ಬಿ. ಪಿ. ಕನುಂಗೊ, ಮಹೇಶ್‌ ಕುಮಾರ್ ಜೈನ್‌ ಅವರಲ್ಲದೆ ಕೇಂದ್ರೀಯ ಮಂಡಳಿಯ ನಿರ್ದೇಶಕರಾದ ಭರತ್‌ ದೋಷಿ, ಸುಧೀರ್‌ ಮಂಕಡ್‌, ಮನೀಷ್‌ ಸಬರ್‌ವಾಲ್‌, ಸತೀಶ್‌ ಮರಾಠೆ, ಸ್ವಾಮಿನಾಥನ್‌ ಗುರುಮೂರ್ತಿ, ರೇವತಿ ಅಯ್ಯರ್‌ ಮತ್ತು ಸಚಿನ್‌ ಚತುರ್ವೇದಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.