ADVERTISEMENT

ವಿಮಾನ ನಿಲ್ದಾಣ, ನಿರ್ವಹಣೆ | ಹಲವು ಲೋಪಗಳನ್ನು ಗುರುತಿಸಿದ ಡಿಜಿಸಿಎ

ಪಿಟಿಐ
Published 24 ಜೂನ್ 2025, 15:29 IST
Last Updated 24 ಜೂನ್ 2025, 15:29 IST
   

ನವದೆಹಲಿ: ವಿಮಾನಯಾನ ಕಂಪನಿಗಳು, ವಿಮಾನ ನಿಲ್ದಾಣಗಳು ಹಾಗೂ ವಿಮಾನ ನಿರ್ವಹಣೆ ಕೆಲಸಗಳಲ್ಲಿ ನಿಯಮ ಉಲ್ಲಂಘನೆಯ ಹಲವು ನಿದರ್ಶನಗಳನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಪತ್ತೆ ಮಾಡಿದೆ.

ದೇಶದ ಪ್ರಮುಖ ವಿಮಾನ ನಿಲ್ದಾಣಗಳ ತಪಾಸಣೆ ವೇಳೆ, ಲೋಪಗಳು ಮರುಕಳಿಸಿರುವುದನ್ನು ಕೂಡ ಡಿಜಿಸಿಎ ಪತ್ತೆ ಮಾಡಿದೆ. ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ತುತ್ತಾದ ನಂತರದಲ್ಲಿ ಡಿಜಿಸಿಎ ಈ ಪರಿಶೀಲನೆ ಕೈಗೊಂಡಿತ್ತು.

ಆದರೆ ಯಾವ ವಿಮಾನ ಕಂಪನಿಯಲ್ಲಿ, ಯಾವ ವಿಮಾನ ನಿಲ್ದಾಣದಲ್ಲಿ ನಿಯಮ ಉಲ್ಲಂಘನೆಗಳು ಕಂಡುಬಂದಿವೆ ಎಂಬುದನ್ನು ಡಿಜಿಸಿಎ ಬಹಿರಂಗಪಡಿಸಿಲ್ಲ. ವಿಮಾನಗಳ ಕಾರ್ಯಾಚರಣೆ, ವಿಮಾನಗಳು ಹಾರಾಟಕ್ಕೆ ಸುರಕ್ಷಿತವೇ ಎಂಬ ಬಗ್ಗೆ, ವಿಮಾನ ನಿಲ್ದಾಣದ ನಿಯಂತ್ರಣ ಕೇಂದ್ರ (ಎಟಿಸಿ) ಕುರಿತು ಪರಿಶೀಲನೆ ನಡೆಸಲಾಗಿದೆ.

ADVERTISEMENT

ವಿಮಾನಯಾನ ಸೇವಾ ವಲಯದಲ್ಲಿನ ಲೋಪಗಳ ಪತ್ತೆಗೆ ಮುಂದೆಯೂ ಪರಿಶೀಲನೆ ನಡೆಯಲಿದೆ ಎಂಬುದನ್ನು ಡಿಜಿಸಿಎ ಸ್ಪಷ್ಟಪಡಿಸಿದೆ. ಈಗ ನಡೆದಿರುವ ಪರಿಶೀಲನೆಯಲ್ಲಿ ಕಂಡುಬಂದಿರುವ ಅಂಶಗಳನ್ನು ಸಂಬಂಧಪಟ್ಟವರಿಗೆ ತಿಳಿಸಲಾಗಿದೆ, ಲೋಪಗಳನ್ನು ತಿದ್ದಿಕೊಳ್ಳುವ ಕ್ರಮಗಳನ್ನು ಏಳು ದಿನಗಳಲ್ಲಿ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದೆ.

ಮುಂಬೈ ಹಾಗೂ ದೆಹಲಿ ವಿಮಾನ ನಿಲ್ದಾಣ ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಎರಡು ತಂಡಗಳು ಪರಿಶೀಲನೆ ನಡೆಸಿವೆ. ಕೆಲವು ವಿಮಾನಗಳಲ್ಲಿ ಲೋಪಗಳ ಬಗ್ಗೆ ಮಾಹಿತಿ ನೀಡಿದ ನಂತರವೂ ಅವು ಮತ್ತೆ ಕಾಣಿಸಿಕೊಂಡ ನಿದರ್ಶನಗಳು ಇವೆ.

ವಿಮಾನ ನಿಲ್ದಾಣವೊಂದರಲ್ಲಿ ರನ್‌ವೇ ಮಧ್ಯದ ಗೆರೆಯು ಅಳಿಸಿಹೋಗಿತ್ತು, ಸಣ್ಣ ವಿಮಾನ ನಿಲ್ದಾಣವೊಂದರ ಸುತ್ತ ಹಲವು ಕಟ್ಟಡಗಳ ನಿರ್ಮಾಣ ಆಗಿದ್ದರೂ ಅದರ ಬಗ್ಗೆ ಸಮೀಕ್ಷೆಯನ್ನೇ ನಡೆಸದಿರುವುದು ಕೂಡ ಡಿಜಿಸಿಎ ಗಮನಕ್ಕೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.