ADVERTISEMENT

ಮತ್ತೆ ಮಾರುಕಟ್ಟೆಗೆ ಬಂದ ಕ್ಯಾಂಪಾ ಕೋಲಾ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 16:12 IST
Last Updated 9 ಮಾರ್ಚ್ 2023, 16:12 IST

ಬೆಂಗಳೂರು/ನವದೆಹಲಿ: ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಕನ್ಸ್ಯೂಮ್ ಪ್ರಾಡಕ್ಟ್ಸ್‌ (ಆರ್‌ಸಿಪಿಎಲ್) ಕಂಪನಿಯು ಐವತ್ತು ವರ್ಷಗಳಷ್ಟು ಹಳೆಯದಾದ ಕ್ಯಾಂಪಾ ತಂಪು ಪಾನೀಯ ಬ್ರ್ಯಾಂಡ್‌ಗೆ ಮರುಜೀವ ನೀಡಿದೆ.

ಹೊಸ ಅವತಾರದಲ್ಲಿ ಈ ಬ್ರ್ಯಾಂಡ್‌ ಅಡಿಯಲ್ಲಿ ಕೋಲಾ, ಲೆಮನ್ ಮತ್ತು ಆರೆಂಜ್‌ ಪಾನೀಯಗಳನ್ನು ಕಂಪನಿಯು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ರಾಹಕ ಬಳಕೆಯ ಹೊಸ ಉತ್ಪನ್ನಗಳ ಮೂಲಕ ಅದಾನಿ ಸಮೂಹ, ಐಟಿಸಿ ಹಾಗೂ ಯೂನಿಲಿವರ್‌ ಕಂಪನಿಗಳಿಗೆ ಪೈಪೋಟಿ ನೀಡುವ ಉದ್ದೇಶ ರಿಲಯನ್ಸ್‌ಗೆ ಇದೆ.

ರಿಲಯನ್ಸ್‌ ರಿಟೇಲ್‌ನ ಅಧೀನದಲ್ಲಿ ಕಾರ್ಯಾಚರಿಸುವ ಆರ್‌ಸಿಪಿಎಲ್‌ ಕಂಪನಿಯು ಕ್ಯಾಂಪಾ ಬ್ರ್ಯಾಂಡ್‌ಅನ್ನು ₹ 22 ಕೋಟಿಗೆ ಸ್ವಾಧೀನ ಮಾಡಿಕೊಂಡಿತ್ತು. ಆರಂಭದಲ್ಲಿ ಈ ತಂಪು ಪಾನೀಯವು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮಾತ್ರ ಸಿಗಲಿದೆ. ಮುಂದಿನ ದಿನಗಳಲ್ಲಿ ಇದು ದೇಶದಾದ್ಯಂತ ಲಭ್ಯವಾಗಲಿದೆ.

ADVERTISEMENT

ದೇಶದಲ್ಲಿ 70 ಹಾಗೂ 80ರ ದಶಕದಲ್ಲ ಕ್ಯಾಂಪಾ ಕೋಲಾ ಜನಪ್ರಿಯವಾಗಿತ್ತು. ಆದರೆ ಕೋಕಾ ಕೋಲಾ ಮತ್ತು ಪೆಪ್ಸಿಕೊ ಕಂಪನಿಗಳ ಪ್ರವೇಶದ ನಂತರದಲ್ಲಿ ಈ ಬ್ರ್ಯಾಂಡ್‌ನ ಖ್ಯಾತಿ ತಗ್ಗಿತು. ಉದಾರೀಕರಣದ ನಂತರದಲ್ಲಿ ಕಂಪನಿಯು ತನ್ನ ಮಾರುಕಟ್ಟೆಯನ್ನು ಕಳೆದುಕೊಂಡಿತು.

ರಿಲಯನ್ಸ್ ಕಂಪನಿಯು ತನ್ನದೇ ಆದ ಸೋಪು, ಶಾಂಪೂ, ಬಿಸ್ಕತ್ತುಗಳು ಹಾಗೂ ಕೋಲಾ ಮೂಲಕ ಗ್ರಾಹಕ ಬಳಕೆ ವಸ್ತುಗಳ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಹಂಬಲ ಹೊಂದಿದೆ. ‘ಈಗ ಕ್ಯಾಂಪಾ ಪಾನೀಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ, ಆರ್‌ಸಿಪಿಎಲ್‌ ಕಂಪನಿಯು ಎಫ್‌ಎಂಸಿಜಿ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವನ್ನು ಹೆಚ್ಚಿಸಿಕೊಂಡಿದೆ’ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.