ADVERTISEMENT

ಆನ್‌ಲೈನ್‌ ಫಾರ್ಮಾ ನೆಟ್‌ಮೆಡ್ಸ್‌ನಲ್ಲಿ ರಿಲಯನ್ಸ್‌ ₹620 ಕೋಟಿ ಹೂಡಿಕೆ

ಬಹುತೇಕ ಷೇರು_ಸ್ವಾಧೀನ

ಪಿಟಿಐ
Published 19 ಆಗಸ್ಟ್ 2020, 9:17 IST
Last Updated 19 ಆಗಸ್ಟ್ 2020, 9:17 IST
ರಿಲಯನ್ಸ್‌ ಮತ್ತು ನೆಟ್‌ಮೆಡ್ಸ್‌
ರಿಲಯನ್ಸ್‌ ಮತ್ತು ನೆಟ್‌ಮೆಡ್ಸ್‌    

ನವದೆಹಲಿ: ದೇಶದಲ್ಲಿ ಆನ್‌ಲೈನ್‌ ಮೂಲಕ ಔಷಧಿ ಮಾರಾಟ ಮಾಡುತ್ತಿರುವ ನೆಟ್‌ಮೆಡ್ಸ್‌ (Netmeds) ಡಿಜಿಟಲ್‌ ಫಾರ್ಮಾದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್ ₹620 ಕೋಟಿ ಹೂಡಿಕೆ ಮಾಡಿದೆ. ಈ ಮೂಲಕ ಆನ್‌ಲೈನ್‌ ಫಾರ್ಮಸಿ ಕ್ಷೇತ್ರದಲ್ಲಿ ರಿಲಯನ್ಸ್‌ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿದೆ.

ರಿಲಯನ್ಸ್‌ ₹620 ಕೋಟಿ ಹೂಡಿಕೆಯಿಂದ ವೈಟಾಲಿಕ್‌ ಹೆಲ್ತ್‌ ಪ್ರೈವೇಟ್‌ ಲಿಮಿಟೆಟ್‌ನಲ್ಲಿ ಶೇ 60ರಷ್ಟು ಈಕ್ವಿಟಿ ಷೇರುಗಳು ಹಾಗೂ ಆ ಸಂಸ್ಥೆಯ ಒಡೆತನದ ತ್ರೆಸಾರಾ ಹೆಲ್ತ್ ಪ್ರೈವೆಟ್‌ ಲಿಮಿಟೆಡ್‌, ನೆಟ್‌ಮೆಡ್ಸ್ ಮಾರ್ಕೆಟ್‌ ಪ್ಲೇಸ್‌ ಲಿಮಿಟೆಡ್‌ ಹಾಗೂ ದಾಧಾ ಫಾರ್ಮಾ ಡಿಸ್ಟ್ರಿಬ್ಯೂಷನ್‌ ಪ್ರೈವೆಟ್‌ ಲಿಮಿಟೆಡ್‌ನ ಶೇ 100ರಷ್ಟು ಪಾಲುದಾರಿಕೆ ಪಡೆದಿರುವುದಾಗಿ ಮಂಗಳವಾರ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಮೆಜಾನ್‌ ಇತ್ತೀಚೆಗಷ್ಟೇ ಆನ್‌ಲೈನ್‌ ಫಾರ್ಮಾಗೆ ಚಾಲನೆ ನೀಡಿದೆ. ಆ ಮೂಲಕ ಇ–ಕಾಮರ್ಸ್‌ ವಲಯದಲ್ಲಿ ಪೈಪೋಟಿ ಹೆಚ್ಚಳವಾಗಿದ್ದು, ಫ್ಲಿಪ್‌ಕಾರ್ಟ್‌ ಮತ್ತು ಜಿಯೊಮಾರ್ಟ್‌ ಸ್ಪರ್ಧೆಯ ಒತ್ತಡದಲ್ಲಿವೆ.

ವೈಟಾಲಿಕ್‌ ಹೆಲ್ತ್‌ ಮತ್ತು ಅದರ ಅಂಗಸಂಸ್ಥೆಗಳೂ ಸೇರಿ 'ನೆಟ್‌ಮೆಡ್ಸ್‌' ಆಗಿದೆ.

ADVERTISEMENT

'ಭಾರತದಲ್ಲಿ ಪ್ರತಿಯೊಬ್ಬರಿಗೂ ಡಿಜಿಟಲ್‌ ಮೂಲಕವೇ ಅಗತ್ಯ ವಸ್ತುಗಳು ಸಿಗುವಂತೆ ಮಾಡುವ ಉದ್ದೇಶದೊಂದಿಗೆ ಈ ಹೂಡಿಕೆ ಮಾಡಲಾಗಿದೆ. ನೆಟ್‌ಮೆಡ್ಸ್‌ ಮೂಲಕ ರಿಲಯನ್ಸ್‌ ಉತ್ತಮ ಗುಣಮಟ್ಟದ ಹಾಗೂ ಕೈಗೆಟುಕುವ ದರದಲ್ಲಿ ಆರೋಗ್ಯ ಸಂಬಂಧಿಸಿದ ವಸ್ತುಗಳು ಹಾಗೂ ಸೇವೆಗಳನ್ನು ನೀಡಲಿದೆ...' ಎಂದು ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ ಲಿಮಿಟೆಡ್‌ನ (ಆರ್‌ಆರ್‌ವಿಎಲ್‌) ನಿರ್ದೇಶಕಿ ಇಶಾ ಅಂಬಾನಿ ಹೇಳಿದ್ದಾರೆ.

ರಿಲಯನ್ಸ್‌ ಸಮೂಹದೊಂದಿಗೆ ಸೇರುತ್ತಿರುವುದು ಹೆಮ್ಮೆಯ ಗಳಿಗೆಯಾಗಿದೆ. ಪ್ರತಿ ಭಾರತೀಯರಿಗೆ ಗುಣಮಟ್ಟದ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ರಕ್ಷಕ ವಸ್ತುಗಳನ್ನು ಪೂರೈಸಲು ಜೊತೆಯಾಗಿ ಶ್ರಮಿಸಲಿದ್ದೇವೆ ಎಂದು ನೆಟ್‌ಮೆಟ್ಸ್ ಸಂಸ್ಥಾಪಕ ಮತ್ತು ಸಿಇಒ ಪ್ರದೀಪ್‌ ದಾಧಾ ಹೇಳಿದ್ದಾರೆ.

ನೆಟ್‌ಮೆಟ್ಸ್‌ ಪ್ರಸ್ತುತ ದೇಶದ 20,000 ಪಿನ್‌ ಕೋಡ್‌ಗಳಲ್ಲಿ ಔಷಧಿಗಳನ್ನು ಡೆಲಿವರಿ ಮಾಡುವ ವ್ಯವಸ್ಥೆ ಅಳವಡಿಸಿಕೊಂಡಿದೆ. ಸಾಮಾನ್ಯ ಔಷಧಿಗಳಿಂದ ವೈದ್ಯರ ಸಲಹೆ ಮೇರೆಗೆ ಪಡೆಯುವ ಔಷಧಿಗಳು, ನ್ಯೂಟ್ರೀಷನ್‌ಗಾಗಿ ಬಳಸುವ ಉತ್ಪನ್ನಗಳು ಹಾಗೂ ಆರೋಗ್ಯ ಸಂಬಂಧಿಸಿದ ಇತರೆ ವಸ್ತುಗಳನ್ ನೆಟ್‌ಮೆಡ್ಸ್‌ ಇ–ಫಾರ್ಮಾ ಪೋರ್ಟಲ್‌ ಮೂಲಕ ಮಾರಾಟ ಮಾಡುತ್ತಿದೆ. 2015ರಲ್ಲಿ ಸ್ಥಾಪನೆಯಾದ ವೈಟಾಲಿಕ್‌ ಮತ್ತು ಅದರ ಅಂಗ ಸಂಸ್ಥೆಗಳು ಔಷಧಿ ವಿತರಣೆ, ಮಾರಾಟ, ಉದ್ಯಮ ಸೇವೆಗಳನ್ನು ನೀಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.