
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಷೇರಿನ ಮೌಲ್ಯ ₹1,765ಕ್ಕೆ ತಲುಪಲಿದೆ ಎಂದು ಬ್ರೋಕರೇಜ್ ಕಂಪನಿ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.
ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ತೆರಿಗೆ, ಬಡ್ಡಿ, ಸಾಲ ತೀರುವಳಿ (ಇಬಿಐಟಿಡಿಎ) ನಂತರದ ಆದಾಯವು, ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 5ರಷ್ಟು ಹೆಚ್ಚಳವಾಗಿದ್ದು, ₹45,900 ಕೋಟಿ ಆಗಿದೆ. ರಿಟೇಲ್ ಮತ್ತು ಜಿಯೊ ವ್ಯವಹಾರದಲ್ಲಿನ ಏರಿಕೆ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದೆ.
ಹಬ್ಬದ ಋತು ಅಂಗವಾಗಿ ಹೆಚ್ಚಿದ ಬೇಡಿಕೆ ಮತ್ತು ಜಿಎಸ್‌ಟಿ ದರ ಪರಿಷ್ಕರಣೆ ಮತ್ತು ಕ್ವಿಕ್ ಕಾಮರ್ಸ್‌ನಲ್ಲಿನ ಉತ್ತಮ ಪ್ರಗತಿಯಿಂದ ರಿಟೇಲ್ ವ್ಯವಹಾರದ ವರಮಾನವು ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 19ರಷ್ಟು ಹೆಚ್ಚಳವಾಗಿದೆ. ರಿಲಯನ್ಸ್ ಜಿಯೊ 83 ಲಕ್ಷ 5ಜಿ ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡಿದೆ.
ಕಂಪನಿಯ ತೈಲ–ರಾಸಾಯನಿಕ ವಹಿವಾಟಿನ ಗಳಿಕೆಯು, ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 3ರಷ್ಟು ಏರಿಕೆಯಾಗಿದೆ. ರಿಟೇಲ್ ಮತ್ತು ಜಿಯೊ ವ್ಯವಹಾರವು ಸುಸ್ಥಿರ ಬೆಳವಣಿಗೆ ಕಾಣುವ ವಿಶ್ವಾಸವನ್ನು ಕಂಪನಿಯ ಆಡಳಿತ ಮಂಡಳಿ ಹೊಂದಿದೆ ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ.
2024–25ರಿಂದ 2027–28ರ ಆರ್ಥಿಕ ವರ್ಷದವರೆಗೆ ರಿಲಯನ್ಸ್ ಇಂಡಸ್ಟ್ರೀಸ್‌ನ ತೆರಿಗೆ ನಂತರದ ಲಾಭದ ಸಂಯುಕ್ತ ವಾರ್ಷಿಕ ಹೆಚ್ಚಳದ ಪ್ರಮಾಣವು (ಸಿಎಜಿಆರ್) ಶೇ 11ರಷ್ಟಿರಲಿದೆ ಎಂದು ಅಂದಾಜಿಸಿದೆ. ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಕಂಪನಿಯ ಷೇರಿನ ಮೌಲ್ಯ ₹1,569.75 ಆಗಿದೆ.
(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.