ADVERTISEMENT

ಕೃಷಿ ಕಾಯ್ದೆಗಳಿಗೂ ನಮಗೂ ಸಂಬಂಧವೇ ಇಲ್ಲ: ರಿಲಯನ್ಸ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 14:42 IST
Last Updated 4 ಜನವರಿ 2021, 14:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕೇಂದ್ರ ಸರ್ಕಾರವು ಜಾರಿಗೆ ತಂದಿರುವ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳಿಗೂ ತನಗೂ ಯಾವ ಸಂಬಂಧವೂ ಇಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹೇಳಿದೆ.

ಈ ಮೂರು ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಗಳು ಆರಂಭವಾದ ನಂತರದಲ್ಲಿ ಪಂಜಾಬ್‌ನಲ್ಲಿ ರಿಲಯನ್ಸ್ ಜಿಯೊ ಕಂಪನಿಯ ಮೊಬೈಲ್‌ ಟವರ್‌ಗಳಿಗೆ ರೈತರು ಹಾನಿ ಮಾಡಿದ್ದಾರೆ ಎಂಬ ವರದಿಗಳು ಇವೆ. ಈ ವರದಿಗಳ ಬೆನ್ನಲ್ಲೇ ಕಂಪನಿಯಿಂದ ಈ ಹೇಳಿಕೆ ಬಂದಿದೆ.

‘ರಿಲಯನ್ಸ್ ರಿಟೇಲ್ ಲಿಮಿಟೆಡ್, ರಿಲಯನ್ಸ್ ಜಿಯೋ ಅಥವಾ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ಸಂಬಂಧಿಸಿದ ಯಾವ ಕಂಪನಿಯೂ ಗುತ್ತಿಗೆ ಆಧಾರದಲ್ಲಿ ಕೃಷಿ ಕೆಲಸ ಮಾಡಿಲ್ಲ. ಮುಂದೆ ಕೂಡ ಅಂಥ ಉದ್ದೇಶ ಕಂಪನಿಗೆ ಇಲ್ಲ. ಪಂಜಾಬ್, ಹರಿಯಾಣ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಂಪನಿಯು ಗುತ್ತಿಗೆ ಆಧಾರದ ಕೃಷಿ ಉದ್ದೇಶಕ್ಕಾಗಿ ಕೃಷಿ ಜಮೀನು ಖರೀದಿಸಿಲ್ಲ. ಖರೀದಿಸುವ ಆಲೋಚನೆ ಕೂಡ ಕಂಪನಿಗೆ ಇಲ್ಲ’ ಎಂದು ರಿಲಯನ್ಸ್ ಸ್ಪಷ್ಟನೆ ನೀಡಿದೆ.

ADVERTISEMENT

ಕಂಪನಿಯು ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಖರೀದಿಸುವುದಿಲ್ಲ. ಧಾನ್ಯಗಳು, ಹಣ್ಣು, ತರಕಾರಿ, ಬಟ್ಟೆ, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಔಷಧಿ ಸೇರಿದಂತೆ ಹಲವು ವಸ್ತುಗಳನ್ನು ಉತ್ಪಾದಕರು ಹಾಗೂ ಸರಬರಾಜುದಾರರಿಂದ ಖರೀದಿಸಿ, ಮಾರಾಟ ಮಾಡುತ್ತದೆ ಎಂದು ಪ್ರಕಟಣೆ ವಿವರಿಸಿದೆ.

‘ಅನ್ನದಾತರಾದ ಕೃಷಿಕರ ಬಗ್ಗೆ ರಿಲಯನ್ಸ್‌ಗೆ ಅಪಾರ ಗೌರವ ಹಾಗೂ ಕೃತಜ್ಞತೆ ಇದೆ. ಅವರ ಸಬಲೀಕರಣದ ಉದ್ದೇಶದೊಂದಿಗೆ ರಿಲಯನ್ಸ್ ಕಂಪನಿ ಮತ್ತು ಅದರ ಅಂಗಸಂಸ್ಥೆಗಳು ಶ್ರಮಿಸುತ್ತಿವೆ. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಗೆ ಬದ್ಧವಾಗಿರುವಂತೆ ನಮ್ಮ ಪೂರೈಕೆದಾರರಿಗೆ ಸೂಚಿಸುತ್ತೇವೆ. ಆ ಮೂಲಕ, ರೈತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎಂಬ ಉದ್ದೇಶ ಹೊಂದಿದ್ದೇವೆ’ ಎಂದು ಕಂಪನಿ ಹೇಳಿದೆ.

ಕೃಷಿ ಕಾಯ್ದೆಗಳ ಜೊತೆ ರಿಲಯನ್ಸ್ ಹೆಸರನ್ನು ಬೆಸೆಯುತ್ತಿರುವುದು ಕಂಪನಿಯ ವ್ಯವಹಾರ ಮತ್ತು ವರ್ಚಸ್ಸನ್ನು ಹಾಳು ಮಾಡುವ ಉದ್ದೇಶದಿಂದ ಎಂದು ಅದು ದೂರಿದೆ.

ಹೈಕೋರ್ಟ್‌ಗೆ ಅರ್ಜಿ

ನವದೆಹಲಿ: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ತನ್ನ ಮೊಬೈಲ್‌ ಟವರ್‌ಗಳ ಮೇಲೆ ದಾಳಿ ನಡೆಸದಂತೆ ನೋಡಿಕೊಳ್ಳಲು ಅಧಿಕಾರಿಗಳ ನೆರವು ಬೇಕು ಎಂದು ಕೋರಿ ರಿಲಯನ್ಸ್ ಕಂಪನಿಯು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಪಂಜಾಬ್‌ನಲ್ಲಿ ತನ್ನ ಟವರ್‌ಗಳ ಮೇಲೆ ನಡೆದ ದಾಳಿ ಹಿಂದೆ ಸ್ಥಾಪಿತ ಹಿತಾಸಕ್ತಿಗಳು ಹಾಗೂ ಎದುರಾಳಿಗಳ ಕೈವಾಡ ಇದೆ ಎಂದು ಕಂಪನಿ ದೂರಿದೆ.

‘ದುಷ್ಕರ್ಮಿಗಳಿಗೆ ಸ್ಥಾಪಿತ ಹಿತಾಸಕ್ತಿಗಳು ಪ್ರಚೋದನೆ ನೀಡುತ್ತಿವೆ. ಟವರ್‌ ಧ್ವಂಸಗೊಳಿಸುವ ಕೃತ್ಯದಿಂದಾಗಿ ನಮ್ಮ ಸಹಸ್ರಾರು ಉದ್ಯೋಗಿಗಳ ಜೀವಕ್ಕೆ ಅಪಾಯ ಎದುರಾಗಿದೆ. ಸಂವಹನ ಮೂಲಸೌಕರ್ಯಕ್ಕೆ, ಕಂಪನಿಯ ಅಂಗಸಂಸ್ಥೆಗಳು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಹೊಂದಿರುವ ಮಳಿಗೆಗಳಿಗೆ ಕೂಡ ಹಾನಿ ಉಂಟಾಗಿದೆ’ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.