ADVERTISEMENT

ಆಸ್ಟ್ರೇಲಿಯಾ ವೀಸಾ: ಶುಲ್ಕರಹಿತ ನವೀಕರಣ ಅವಕಾಶ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 13:10 IST
Last Updated 14 ಏಪ್ರಿಲ್ 2022, 13:10 IST
   

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಆವರಿಸಿದ ನಂತರದಲ್ಲಿ ಆಸ್ಟ್ರೇಲಿಯಾದ ಪ್ರವಾಸಿ ವೀಸಾ ಅವಧಿ ಮುಗಿದುಹೋಗಿದ್ದರೆ, ಅದನ್ನು ಶುಲ್ಕವಿಲ್ಲದೆ ನವೀಕರಿಸಿಕೊಳ್ಳುವ ಅವಕಾಶವನ್ನು ಆಸ್ಟ್ರೇಲಿಯಾ ಸರ್ಕಾರ ಕಲ್ಪಿಸಿದೆ.

‘2020ರ ಮಾರ್ಚ್‌ 20ರಿಂದ ಈ ವರ್ಷದ ಜೂನ್‌ 30ರ ನಡುವಿನ ಅವಧಿಯಲ್ಲಿ ಪ್ರವಾಸಿ ವೀಸಾ ಅವಧಿ ಮುಗಿಯುತ್ತದೆ ಎಂದಾದರೆ, ಅಂತಹ ವೀಸಾ ಹೊಂದಿರುವವರು ಅರ್ಜಿ ಶುಲ್ಕ ವಿನಾಯಿತಿಯ ಪ್ರಯೋಜನ ಪಡೆಯಬಹುದು. ಅವರು ವೀಸಾ ನವೀಕರಣಕ್ಕೆ ಡಿಸೆಂಬರ್ 31ಕ್ಕೆ ಮೊದಲು ಅರ್ಜಿ ಸಲ್ಲಿಸಬೇಕು’ ಎಂದು ಟೂರಿಸಂ ಆಸ್ಟ್ರೇಲಿಯಾ ಸಂಸ್ಥೆಯ ಭಾರತ ಮತ್ತು ಕೊಲ್ಲಿ ರಾಷ್ಟ್ರಗಳ ವ್ಯವಸ್ಥಾಪಕ ನಿಶಾಂತ್ ಕಾಶಿಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತದಿಂದ ಆಸ್ಟ್ರೇಲಿಯಾಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯು 2035ರ ವೇಳೆಗೆ 12 ಲಕ್ಷಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ ಎಂದರು. 2019ರಲ್ಲಿ ಭಾರತದಿಂದ ಆಸ್ಟ್ರೇಲಿಯಾಕ್ಕೆ 4 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು, ಈ ಪೈಕಿ ಬೆಂಗಳೂರಿನಿಂದ ಬಂದವರ ಸಂಖ್ಯೆ 41 ಸಾವಿರ ಆಗಿತ್ತು. ಬೆಂಗಳೂರಿನಿಂದ ಬಂದಿದ್ದವರು ಆಸ್ಟ್ರೇಲಿಯಾ ಅರ್ಥ ವ್ಯವಸ್ಥೆಗೆ ₹ 1,040 ಕೋಟಿ ಕೊಡುಗೆ ನೀಡಿದ್ದಾರೆ ಎಂದರು.

ADVERTISEMENT

ದೀರ್ಘ ಅವಧಿಗೆ ‍ಪ್ರವಾಸ ಹೋಗಲು ಬಯಸುವ 22 ಲಕ್ಷ ಭಾರತೀಯ ಪ್ರವಾಸಿಗರ ಪೈಕಿ 18 ಲಕ್ಷ ಮಂದಿ ಇನ್ನು ಎರಡು ವರ್ಷಗಳೊಳಗೆ ಆಸ್ಟ್ರೇಲಿಯಾಕ್ಕೆ ಹೋಗಲು ಬಯಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಸೆಪ್ಟೆಂಬರ್ 14ರಿಂದ ಬೆಂಗಳೂರಿನಿಂದ ಸಿಡ್ನಿಗೆ ಕ್ವಾಂಟಾಸ್ ಏರ್‌ಲೈನ್ಸ್‌ ವಾರದಲ್ಲಿ ನಾಲ್ಕು ದಿನ ನೇರ ವಿಮಾನ ಪ್ರಯಾಣ ಆರಂಭಿಸಲಿದೆ. ಎರಡು ಡೋಸ್ ಕೊವಿಡ್ ಲಸಿಕೆ ಪಡೆದವರು ಆಸ್ಟ್ರೇಲಿಯಾದಲ್ಲಿ ಪ್ರತ್ಯೇಕವಾಸದಲ್ಲಿ ಇರುವ ಅಗತ್ಯ ಇಲ್ಲ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.