ADVERTISEMENT

ರೆಪೊ ದರ ಕಡಿತ; ಗ್ರಾಹಕರಿಗೆ ತ್ವರಿತ ವರ್ಗಾವಣೆ?

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 19:45 IST
Last Updated 5 ಅಕ್ಟೋಬರ್ 2019, 19:45 IST
ಆರ್‌ಬಿಐ
ಆರ್‌ಬಿಐ   

ಬೆಂಗಳೂರು: ಭಾರತೀಯ ರಿಸರ್ವ್‌ ಬ್ಯಾಂಕ್‌, ರೆಪೊ ದರವನ್ನು ಶೇ 0.25ರಷ್ಟು ತಗ್ಗಿಸಿರುವುದು ಈ ಬಾರಿ ಬ್ಯಾಂಕ್‌ ಗ್ರಾಹಕರಿಗೆ ತ್ವರಿತವಾಗಿ ವರ್ಗಾವಣೆಗೊಳ್ಳುವ ಸಾಧ್ಯತೆ ಇದೆ.

ಬದಲಾಗುವ ಬಡ್ಡಿ ದರದ ಗೃಹ, ವಾಹನ ಖರೀದಿ ಮತ್ತು ಇತರ ರಿಟೇಲ್‌ ಸಾಲಗಳಿಗೆ ಬ್ಯಾಂಕ್‌ಗಳು ಈಗ ಹೊಸ ಬಡ್ಡಿ ದರ ನಿಗದಿಪಡಿಸಬೇಕಾಗಿದೆ. ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಬಡ್ಡಿ ದರದ ಬದಲಿಗೆ ರೆಪೊ ದರ, 3 ಅಥವಾ 6 ತಿಂಗಳ ಟ್ರೆಷರಿ ಬಿಲ್ ಆದಾಯ ಇಲ್ಲವೇ ಫೈನಾನ್ಶಿಯಲ್ ಬೆಂಚ್‌ಮಾರ್ಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಫ್‌ಬಿಐಎಲ್) ಪ್ರಕಟಿಸುವ ಬಡ್ಡಿ ದರ ಆಧರಿಸಿ ವಿವಿಧ ಸಾಲಗಳಿಗೆ ಹೊಸ ಬಡ್ಡಿ ದರ ನಿಗದಿಪಡಿಸಲು ಆರ್‌ಬಿಐ ಸೂಚಿಸಿದೆ.

ಹೀಗಾಗಿ ಬಹುತೇಕ ಬ್ಯಾಂಕ್‌ಗಳು ರೆಪೊ ದರ ಆಧರಿಸಿ ತಮ್ಮ ರಿಟೇಲ್‌ ಸಾಲಗಳ ಮೇಲಿನ ಬಡ್ಡಿ ದರ ನಿಗದಿಪಡಿಸಲು ಮುಂದಾಗಲಿವೆ. ಪ್ರಸಕ್ತ ವರ್ಷದಲ್ಲಿ ಆರ್‌ಬಿಐ ಇದುವರೆಗೆ ಶೇ 1.35ರಷ್ಟು ಬಡ್ಡಿ ದರ ಕಡಿತಗೊಳಿಸಿದೆ. ಡಿಸೆಂಬರ್‌ನಲ್ಲಿಯೂ ಬಡ್ಡಿ ದರ ಕಡಿತಗೊಳ್ಳುವ ನಿರೀಕ್ಷೆ ಇದೆ.

ADVERTISEMENT

‘ಬ್ಯಾಂಕಿಂಗ್‌ ಕ್ಷೇತ್ರವು ಬಡ್ಡಿ ದರ ನಿಗದಿಗೆ ಹೊಸ ವ್ಯವಸ್ಥೆ ಅಳವಡಿಸಿಕೊಂಡಿದೆ. ಹೀಗಾಗಿ ಶೇ 0.25ರಷ್ಟು ರೆಪೊ ದರ ಕಡಿತದ ಲಾಭವು ಈ ಬಾರಿ ತ್ವರಿತವಾಗಿ ಗ್ರಾಹಕರಿಗೆ ವರ್ಗಾವಣೆಗೊಳ್ಳಲಿದೆ’ ಎಂದು ಸಿಂಡಿಕೇಟ್‌ ಬ್ಯಾಂಕ್‌ ಸಿಇಒ ಮೃತ್ಯುಂಜಯ ಮಹಾಪಾತ್ರ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಅಗ್ಗದ ಬಡ್ಡಿ ದರಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಸಾಲ ಪಡೆಯುವ ಪ್ರಮಾಣದಲ್ಲಿ ಏರಿಕೆ ಕಂಡು ಬರಲಿದೆ’ ಎಂದು ಭಾರತೀಯ ಬ್ಯಾಂಕ್‌ ಸಂಘದ (ಐಬಿಎ) ಸಿಇಒ ವಿ. ಜಿ. ಕಣ್ಣನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.