ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ಶೇ 0.25ರಷ್ಟು ಕಡಿತಗೊಳಿಸಬಹುದು ಎಂದು ಎಸ್‌ಬಿಐ ರಿಸರ್ಚ್‌ನ ವರದಿ ಹೇಳಿದೆ. ಆದರೆ ಹಲವು ತಜ್ಞರ ಪ್ರಕಾರ, ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಯೂ ಇದೆ.
ಆರ್‌ಬಿಐನ ಗವರ್ನರ್ ಸಂಜಯ್ ಮಲ್ಹೋತ್ರ ಅಧ್ಯಕ್ಷತೆಯಲ್ಲಿ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆ ಸೋಮವಾರದಿಂದ ಪ್ರಾರಂಭವಾಗಲಿದ್ದು, ಬುಧವಾರ (ಅಕ್ಟೋಬರ್ 1) ಸಭೆಯ ನಿರ್ಧಾರವು ಪ್ರಕಟವಾಗಲಿದೆ.
ಫೆಬ್ರುವರಿಯ ನಂತರ ಆರ್‌ಬಿಐ ರೆಪೊ ದರವನ್ನು ಮೂರು ಬಾರಿ ಕಡಿಮೆ ಮಾಡಿದೆ. ಆದರೆ, ಆಗಸ್ಟ್ ತಿಂಗಳಿನಲ್ಲಿ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು.
ಮುಂಬರುವ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ನಿಯಂತ್ರಣದಲ್ಲಿರುವ ನಿರೀಕ್ಷೆ ಇದೆ. ಹೀಗಾಗಿ, ಮುಂಬರುವ ಹಣಕಾಸು ನೀತಿ ಸಭೆಯು ಶೇ 0.25ರಷ್ಟು ರೆಪೊ ದರ ಕಡಿತ ಮಾಡಲಿದೆ ಎಂದು ವರದಿ ಹೇಳಿದೆ.
ಜಿಎಸ್‌ಟಿ ಸರಳೀಕರಣದಿಂದಾಗಿ ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಿಂದ ಮುಂದಿನ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದವರೆಗೂ ಹಣದುಬ್ಬರ ಶೇ 0.25ರಿಂದ ಶೇ 0.50ರಷ್ಟು ಕಡಿಮೆ ಆಗಲಿದೆ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಮತ್ತಷ್ಟು ಇಳಿಕೆ ಕಾಣಬಹುದು ಎಂದು ಹೇಳಿದ್ದಾರೆ.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.