ADVERTISEMENT

ತಮ್ಮ ವಿರುದ್ಧ ತನಿಖೆ ನಡೆಯುತ್ತಿದ್ದಾಗಲೇ ಆಡಳಿತ ಮಂಡಳಿಯಿಂದ ಹೊರಬಂದ ಬಿಲ್ ಗೇಟ್ಸ್

ಏಜೆನ್ಸೀಸ್
Published 17 ಮೇ 2021, 16:26 IST
Last Updated 17 ಮೇ 2021, 16:26 IST

ನ್ಯೂಯಾರ್ಕ್‌: ಮೈಕ್ರೊಸಾಫ್ಟ್‌ ಕಾರ್ಪೊರೇಷನ್‌ನ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರು ಕಂಪನಿ ಉದ್ಯೋಗಿಯೊಬ್ಬಳ ಜೊತೆ ಹಿಂದೆ ಹೊಂದಿದ್ದ ‘ಪ್ರಣಯ’ ಸಂಬಂಧದ ಬಗ್ಗೆ ತನಿಖೆ ನಡೆಯುತ್ತಿರುವಾಗ, ಗೇಟ್ಸ್‌ ಅವರು ಕಂಪನಿಯ ಆಡಳಿತ ಮಂಡಳಿಯಲ್ಲಿ ಮುಂದುವರಿಯುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಮಂಡಳಿಯ ಸದಸ್ಯರೇ ಬಂದಿದ್ದರು!

ಗೇಟ್ಸ್‌ ಅವರು ಹೊಂದಿದ್ದ ಸಂಬಂಧವು ‘ಅನುಚಿತವಾಗಿತ್ತು’ ಎಂದು ಭಾವಿಸಲಾಗಿತ್ತು. ಈ ಸಂಬಂಧದ ಬಗ್ಗೆ ಆಡಳಿತ ಮಂಡಳಿಯೇ 2020ರಲ್ಲಿ ತನಿಖೆ ನಡೆಸಿತ್ತು.

‘ನಾನು ಹಲವು ವರ್ಷಗಳವರೆಗೆ ಗೇಟ್ಸ್‌ ಅವರ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ’ ಎಂದು ಮೈಕ್ರೊಸಾಫ್ಟ್‌ ಕಂಪನಿಯಲ್ಲಿ ಎಂಜಿನಿಯರ್‌ ಆಗಿರುವ ಮಹಿಳೆಯೊಬ್ಬರು ಪತ್ರ ಬರೆದಿದ್ದರು. ಇದರ ಬಗ್ಗೆ ತನಿಖೆ ನಡೆಸಲು ಆಡಳಿತ ಮಂಡಳಿಯು ಕಾನೂನು ಸಂಸ್ಥೆಯೊಂದನ್ನು ನೇಮಕ ಮಾಡಿಕೊಂಡಿತ್ತು ಎಂದು ಅಮೆರಿಕದ ‘ದಿ ವಾಲ್‌ ಸ್ಟ್ರೀಟ್‌ ಜರ್ನಲ್’ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ADVERTISEMENT

ಆಡಳಿತ ಮಂಡಳಿ ಆರಂಭಿಸಿದ ತನಿಖೆ ಪೂರ್ಣಗೊಳ್ಳುವ ಮೊದಲೇ ಗೇಟ್ಸ್‌ ಅವರು ಮಂಡಳಿಗೆ ರಾಜೀನಾಮೆ ನೀಡಿದರು ಎಂದು ಪತ್ರಿಕೆಯ ವರದಿಯಲ್ಲಿ ಹೇಳಲಾಗಿದೆ. ‘ಸರಿಸುಮಾರು 20 ವರ್ಷಗಳ ಹಿಂದೆ ಒಂದು ಸಂಬಂಧ ಇತ್ತು. ಆ ಸಂಬಂಧಕ್ಕೆ ಪರಸ್ಪರ ಮಾತುಕತೆ ಮೂಲಕ ಅಂತ್ಯ ಹೇಳಲಾಯಿತು’ ಎಂದು ಗೇಟ್ಸ್ ಅವರ ವಕ್ತಾರರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

ಆದರೆ, ‘ಅವರು ರಾಜೀನಾಮೆ ನೀಡಿದ್ದಕ್ಕೂ, ಈ ಸಂಬಂಧಕ್ಕೂ ನಂಟು ಇಲ್ಲ’ ಎಂದು ವಕ್ತಾರರು ಹೇಳಿದ್ದಾರೆ. ಗೇಟ್ಸ್ ಅವರು ಕಳೆದ ವರ್ಷ ಮೈಕ್ರೊಸಾಫ್ಟ್‌ನ ಆಡಳಿತ ಮಂಡಳಿಯಿಂದ ಹೊರಬಂದಾಗ, ‘ಸಮಾಜ ಸೇವೆಗೆ ಹೆಚ್ಚಿನ ಗಮನ ನೀಡುವ ಉದ್ದೇಶವಿದೆ’ ಎಂಬ ಕಾರಣ ನೀಡಿದ್ದರು.

‘2019ರಲ್ಲಿ ಒಂದು ಪತ್ರ ಬಂತು. ಅದರಲ್ಲಿ, ಬಿಲ್ ಗೇಟ್ಸ್ ಅವರು ಕಂಪನಿಯ ಉದ್ಯೋಗಿಯೊಬ್ಬರ ಜೊತೆ ಸಂಬಂಧ ಹೊಂದಲು 2000ನೆಯ ಇಸವಿಯಲ್ಲಿ ಪ್ರಯತ್ನಿಸಿದ್ದರು ಎಂಬ ವಿವರ ಇತ್ತು. ಪತ್ರದಲ್ಲಿನ ವಿವರಗಳ ಬಗ್ಗೆ ಕಂಪನಿಯ ಆಡಳಿತ ಮಂಡಳಿ ಪರಿಶೀಲಿಸಿತು. ತನಿಖೆ ನಡೆಯುತ್ತಿದ್ದ ವೇಳೆ, ಆ ಮಹಿಳಾ ಉದ್ಯೋಗಿಗೆ ಕಂಪನಿಯು ಬೆಂಬಲವಾಗಿ ನಿಂತಿತ್ತು’ ಎಂದು ಮೈಕ್ರೊಸಾಫ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.