ADVERTISEMENT

ಜಿಎಸ್‌ಟಿ ಮೇಲ್ಮನವಿ: ಇಂಗ್ಲಿಷ್‌ ನಿಯಮ ಕೈಬಿಡಲು ಮನವಿ

ಪಿಟಿಐ
Published 20 ಫೆಬ್ರುವರಿ 2026, 15:54 IST
Last Updated 20 ಫೆಬ್ರುವರಿ 2026, 15:54 IST
   

ಇಂದೋರ್: ಜಿಎಸ್‌ಟಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವಾಗ ದಾಖಲೆಗಳ ಇಂಗ್ಲಿಷ್‌ ಅನುವಾದವನ್ನು ಕೂಡ ಇರಿಸಬೇಕು ಎಂಬ ನಿಯಮವನ್ನು ಕೇಂದ್ರ ಸರ್ಕಾರವು ರದ್ದುಪಡಿಸಬೇಕು ಎಂದು ಮಧ್ಯಪ್ರದೇಶದ ತೆರಿಗೆ ಸಮಾಲೋಚಕರನ್ನು ಪ್ರತಿನಿಧಿಸುವ ಸಂಘಟನೆಗಳು ಆಗ್ರಹಿಸಿವೆ.

ಕೇಂದ್ರದ ನಿಯಮವು ಮೇಲ್ಮನವಿ ಸಲ್ಲಿಸುವವರ ಮೇಲೆ ಅವಾಸ್ತವಿಕ ಹಣಕಾಸಿನ ಹೊರೆಯನ್ನು ಹೊರಿಸುತ್ತಿದೆ ಎಂದು ಅವು ಆಕ್ರೋಶ ವ್ಯಕ್ತಪಡಿಸಿವೆ.

ಈ ವಿಚಾರವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಪತ್ರವೊಂದನ್ನು ಬರೆದಿರುವುದಾಗಿ ಮಧ್ಯಪ್ರದೇಶ ತೆರಿಗೆ ಕಾನೂನು ವಕೀಲರ ಸಂಘದ ಅಧ್ಯಕ್ಷ ಎ.ಕೆ. ಲಖೋಟಿಯಾ ತಿಳಿಸಿದ್ದಾರೆ.

ADVERTISEMENT

ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ ಸಂಬಂಧಿಸಿದ 23ನೆಯ ನಿಯಮದ ಪ್ರಕಾರ, ನ್ಯಾಯಮಂಡಳಿಯ ಎದುರು ಮೇಲ್ಮನವಿ ಸಲ್ಲಿಸುವಾಗ ಎಲ್ಲ ದಾಖಲೆಗಳ ಇಂಗ್ಲಿಷ್‌ ಅನುವಾದವನ್ನು ಸಲ್ಲಿಸುವುದು ಕಡ್ಡಾಯ ಎಂದು ಲಖೋಟಿಯಾ ವಿವರಿಸಿದರು.

‘ಸರ್ಕಾರಿ ಭಾಷೆಗಳ ಕಾಯ್ದೆ 1963’ರ ಪ್ರಕಾರ ಮಧ್ಯಪ್ರದೇಶವು ‘ವರ್ಗ ಎ’ ಅಡಿಯಲ್ಲಿ ಬರುವ ರಾಜ್ಯ. ಇಲ್ಲಿ ಹಿಂದಿಯ ಬಳಕೆ ಅಗತ್ಯವಾಗಿದೆ. ಇಲ್ಲಿ ರಾಜ್ಯ ಜಿಎಸ್‌ಟಿ ಇಲಾಖೆಯ ಹೆಚ್ಚಿನ ಕಡತಗಳು ಹಿಂದಿಯಲ್ಲಿರುತ್ತವೆ. ಹೀಗಾಗಿ ಮೇಲ್ಮನವಿ ಸಲ್ಲಿಸುವಾಗ ಎಲ್ಲ ದಾಖಲೆಗಳನ್ನು ಇಂಗ್ಲಿಷ್‌ಗೆ ಕಡ್ಡಾಯವಾಗಿ ಅನುವಾದಿಸಬೇಕು ಎಂಬ ನಿಯಮವು ಅವಾಸ್ತವಿಕ ಎಂದು ಹೇಳಿದರು.

ಹಿಂದಿ ಭಾಷಿಕ ರಾಜ್ಯಗಳಲ್ಲಿನ ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿಗಳು ಮೇಲ್ಮನವಿ ಹಾಗೂ ಇತರ ಕೆಲವು ದಾಖಲೆಗಳನ್ನು ಹಿಂದಿಯಲ್ಲಿ ಸ್ವೀಕರಿಸಲು ಅವಕಾಶ ಕೊಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.