ADVERTISEMENT

ಚಿಲ್ಲರೆ ಹಣದುಬ್ಬರ ಆರು ವರ್ಷಗಳ ಕನಿಷ್ಠ

ತರಕಾರಿ ಹಾಗೂ ಇತರ ಆಹಾರ ವಸ್ತುಗಳ ಬೆಲೆ ಇಳಿಕೆ, ರೆಪೊ ದರ ಇನ್ನಷ್ಟು ಕಡಿಮೆ ಆಗುವ ಸಾಧ್ಯತೆ

ಪಿಟಿಐ
Published 14 ಜುಲೈ 2025, 15:22 IST
Last Updated 14 ಜುಲೈ 2025, 15:22 IST
.
.   

ನವದೆಹಲಿ: ಚಿಲ್ಲರೆ ಹಣದುಬ್ಬರ ಪ್ರಮಾಣವು ಜೂನ್‌ನಲ್ಲಿ ಆರು ವರ್ಷಗಳ ಕನಿಷ್ಠ ಮಟ್ಟವಾದ ಶೇಕಡ 2.1ಕ್ಕೆ ಇಳಿಕೆ ಕಂಡಿದೆ. ತರಕಾರಿ ಸೇರಿದಂತೆ ಆಹಾರ ವಸ್ತುಗಳ ಬೆಲೆಯಲ್ಲಿನ ಇಳಿಕೆಯು ಹಣದುಬ್ಬರ ಇಳಿಕೆಗೆ ಕಾರಣವಾಗಿದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ಪ್ರಮಾಣವು ಮೇ ತಿಂಗಳಲ್ಲಿ ಶೇ 2.82ರಷ್ಟು ಇತ್ತು. ಇದು ಕಳೆದ ವರ್ಷದ ಜೂನ್‌ನಲ್ಲಿ ಶೇ 5.08ರಷ್ಟು ಇತ್ತು. 2024ರ ನವೆಂಬರ್‌ ನಂತರದಲ್ಲಿ ಹಣದುಬ್ಬರ ಪ್ರಮಾಣವು ತಗ್ಗುತ್ತಿದೆ.

2019ರ ಜನವರಿಯಲ್ಲಿ ಶೇ 1.97ರಷ್ಟು ಹಣದುಬ್ಬರ ದಾಖಲಾಗಿತ್ತು. ಅದರ ನಂತರದ ಕನಿಷ್ಠ ಮಟ್ಟ ಜೂನ್‌ನಲ್ಲಿ ದಾಖಲಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ತಿಳಿಸಿದೆ.

ADVERTISEMENT

ತರಕಾರಿ, ದ್ವಿದಳ ಧಾನ್ಯಗಳು ಮತ್ತು ಅವುಗಳ ಉತ್ಪನ್ನಗಳು, ಮಾಂಸ ಮತ್ತು ಮೀನು, ಏಕದಳ ಧಾನ್ಯಗಳು ಹಾಗೂ ಅವುಗಳ ಉತ್ಪನ್ನಗಳು, ಸಕ್ಕರೆ, ಹಾಲು ಮತ್ತು ಉತ್ಪನ್ನಗಳು, ಸಂಬಾರ ಪದಾರ್ಥಗಳ ಬೆಲೆ ಏರಿಕೆಯ ಪ್ರಮಾಣವು ತಗ್ಗಿರುವುದು ಒಟ್ಟಾರೆ ಹಣದುಬ್ಬರ ಪ್ರಮಾಣ ಕಡಿಮೆ ಆಗಿರುವುದಕ್ಕೆ ಕಾರಣ ಎಂದು ಎನ್‌ಎಸ್‌ಒ ಹೇಳಿದೆ.

ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ 4ರಲ್ಲಿ ಇರಿಸುವ ಹೊಣೆಯು ಆರ್‌ಬಿಐ ಮೇಲಿದೆ. ಹಣದುಬ್ಬರ ನಿಯಂತ್ರಣಕ್ಕೆ ಬಂದಿರುವ ಕಾರಣಕ್ಕೆ ಆರ್‌ಬಿಐ, ರೆಪೊ ದರವನ್ನು ಫೆಬ್ರುವರಿ ನಂತರದಲ್ಲಿ ಶೇ 1ರಷ್ಟು ಕಡಿಮೆ ಮಾಡಿದೆ.

ಸಗಟು ಹಣದುಬ್ಬರ ಇಳಿಕೆ:

ಸಗಟು ಹಣದುಬ್ಬರ ಕೂಡ ಜೂನ್‌ನಲ್ಲಿ ಇಳಿಕೆ ಕಂಡಿದೆ. ಇದು 19 ತಿಂಗಳ ನಂತರದಲ್ಲಿ ಋಣಾತ್ಮಕ ಮಟ್ಟ ಕಂಡಿದ್ದು, (–)0.13ಕ್ಕೆ ತಲುಪಿದೆ. ಆಹಾರ ವಸ್ತುಗಳು, ಇಂಧನ ಬೆಲೆಯಲ್ಲಿ ಇಳಿಕೆ ಆಗಿದ್ದು ಹಾಗೂ ತಯಾರಿಸಿದ ಉತ್ಪನ್ನಗಳ ಬೆಲೆಯು ಇಳಿಕೆಯಾಗಿದ್ದುದು ಇದಕ್ಕೆ ಒಂದು ಕಾರಣ.

ಕಳೆದ ವರ್ಷದ ಜೂನ್‌ನಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ 3.43ರಷ್ಟು ಇತ್ತು. ‘ಆಹಾರ ವಸ್ತುಗಳು, ಖನಿಜ ತೈಲ, ಮೂಲ ಲೋಹಗಳ ತಯಾರಿಕೆ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇತ್ಯಾದಿಗಳ ಬೆಲೆಯಲ್ಲಿ ಇಳಿಕೆ ಕಂಡ ಕಾರಣದಿಂದಾಗಿ ಜೂನ್‌ನಲ್ಲಿ ಸಗಟು ಹಣದುಬ್ಬರವು ಋಣಾತ್ಮಕ ಮಟ್ಟದಲ್ಲಿದೆ’ ಎಂದು ಕೈಗಾರಿಕಾ ಸಚಿವಾಲಯವು ಹೇಳಿದೆ.

ಹಣದುಬ್ಬರ ಇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್, ‘ಆರ್‌ಬಿಐ ರೆಪೊ ದರವನ್ನು ಆಗಸ್ಟ್‌ನಲ್ಲಿ ಶೇ 0.25ರಷ್ಟು ಕಡಿಮೆ ಮಾಡುವ ಸಾಧ್ಯತೆಯನ್ನು ನಾವು ಅಲ್ಲಗಳೆಯುತ್ತಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.