ನವದೆಹಲಿ: ದೇಶದ ಚಿಲ್ಲರೆ ಹಣದುಬ್ಬರವು ಜನವರಿ ತಿಂಗಳಿನಲ್ಲಿ ಐದು ತಿಂಗಳ ಕನಿಷ್ಠ ಮಟ್ಟವಾದ ಶೇ 4.31ಕ್ಕೆ ಇಳಿಕೆಯಾಗಿದೆ. ತರಕಾರಿ, ಮೊಟ್ಟೆ ಮತ್ತು ಬೇಳೆಕಾಳು ದರ ಕಡಿಮೆಯಾಗಿರುವುದೇ ಹಣದುಬ್ಬರದ ಇಳಿಕೆಗೆ ಕಾರಣ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಬುಧವಾರ ತಿಳಿಸಿದೆ.
ಕಳೆದ ವರ್ಷದ ಅಕ್ಟೋಬರ್‌ನಿಂದಲೂ ಗ್ರಾಹಕ ಬೆಲೆ ಸೂಚ್ಯಂಕ ಆಧರಿತ ಹಣದುಬ್ಬರವು ಇಳಿಕೆಯ ಪಥದಲ್ಲಿಯೇ ಸಾಗಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಶೇ 5.22ರಷ್ಟು ದಾಖಲಾಗಿತ್ತು.
ಜನವರಿಯಲ್ಲಿ ಆಹಾರದ ಹಣದುಬ್ಬರವು ಶೇ 6.02ರಷ್ಟು ದಾಖಲಾಗಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ದಾಖಲಾಗಿರುವ ಕಡಿಮೆ ಮಟ್ಟ ಇದಾಗಿದೆ. ಇಂಧನ ಹಾಗೂ ಇತರೆ ಸರಕುಗಳ ಬೆಲೆಯಲ್ಲಿಯೂ ಗಣನೀಯ ಇಳಿಕೆಯಾಗಿದೆ.
ಕಳೆದ ವಾರ ನಡೆದ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ಸಭೆಯು (ಎಂಪಿಸಿ) ರೆಪೊ ದರದಲ್ಲಿ ಶೇ 0.25ರಷ್ಟು ಕಡಿತಗೊಳಿಸಿದೆ. ಹಣದುಬ್ಬರವು ಆರ್‌ಬಿಐನ ನಿರೀಕ್ಷಿತ ಮಟ್ಟದಲ್ಲಿಯೇ ಇರುವುದರಿಂದ ಈ ನಿರ್ಧಾರ ಕೈಗೊಂಡಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ಗ್ರಾಮೀಣ ಪ್ರದೇಶದಲ್ಲೂ ಹಣದುಬ್ಬರದ ಪ್ರಮಾಣ ಇಳಿಕೆಯಾಗಿದೆ. ಡಿಸೆಂಬರ್‌ನಲ್ಲಿ ಶೇ 5.76ರಷ್ಟು ಇದ್ದಿದ್ದು, ಜನವರಿಯಲ್ಲಿ ಶೇ 4.64ಕ್ಕೆ ತಗ್ಗಿದೆ. ಆಹಾರ ಪದಾರ್ಥಗಳ ಬೆಲೆಯು ಶೇ 8.65ರಿಂದ ಶೇ 6.31ಕ್ಕೆ ಇಳಿದಿದೆ.
ನಗರ ಪ್ರದೇಶದ ವ್ಯಾಪ್ತಿಯಲ್ಲೂ ಹಣದುಬ್ಬರ ಪ್ರಮಾಣ ಇಳಿಕೆಯಾಗಿದೆ. ಡಿಸೆಂಬರ್‌ನಲ್ಲಿ ಶೇ 4.58ರಷ್ಟು ಇದ್ದಿದ್ದು, ಜನವರಿಯಲ್ಲಿ ಶೇ 3.87ಕ್ಕೆ ಇಳಿದಿದೆ. ಆಹಾರ ಪದಾರ್ಥಗಳ ಬೆಲೆಯು ಶೇ 7.9ರಿಂದ ಶೇ 5.53ಕ್ಕೆ ಇಳಿಕೆಯಾಗಿದೆ.
ಆದರೆ, ಮನೆಗಳ ಬೆಲೆಯಲ್ಲಿ ಶೇ 2.76ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.
ರಾಷ್ಟ್ರೀಯ ಸರಾಸರಿಗಿಂತಲೂ ಕೇರಳ (ಶೇ 6.76), ಒಡಿಶಾ (ಶೇ 6.05), ಛತ್ತೀಸಗಢ (ಶೇ 5.85), ಹರಿಯಾಣ (ಶೇ 5.1) ಹಾಗೂ ಬಿಹಾರದಲ್ಲಿ (ಶೇ 5.06) ಹಣದುಬ್ಬರವು ಹೆಚ್ಚು ದಾಖಲಾಗಿದೆ. ದೆಹಲಿಯಲ್ಲಿ ಶೇ 2.02ರಷ್ಟು ಅತಿ ಕಡಿಮೆ ದಾಖಲಾಗಿದೆ.
‘ಹಣದುಬ್ಬರ ಇಳಿಕೆಯು ರೆಪೊ ದರ ಕಡಿತವನ್ನು ಸಮರ್ಥಿಸುವಂತಿದೆ. ಏಪ್ರಿಲ್ ಅಥವಾ ಜೂನ್‌ನಲ್ಲಿ ಮತ್ತೆ ಆರ್‌ಬಿಐನಿಂದ ಶೇ 0.25ರಷ್ಟು ಬಡ್ಡಿದರ ಕಡಿತವಾಗುವ ಸಾಧ್ಯತೆಯಿದೆ’ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ತಿಳಿಸಿದ್ದಾರೆ.
ತೆಂಗಿನ ಎಣ್ಣೆ ಶೇ 54.2 ಆಲೂಗೆಡ್ಡೆ ಶೇ 49.61 ತೆಂಗಿನಕಾಯಿ ಶೇ 38.71 ಬೆಳ್ಳುಳ್ಳಿ ಶೇ 30.65 ಹಾಗೂ ಬಟಾಣಿ ಬೆಲೆಯಲ್ಲಿ ಶೇ 30.17ರಷ್ಟು ಹೆಚ್ಚಳವಾಗಿದೆ. ಈ ಪದಾರ್ಥಗಳಿಗೆ ಹೋಲಿಸಿದರೆ ಜೀರಿಗೆ ಶೇ 32.25 ಶುಂಠಿ ಶೇ 30.92 ಒಣ ಮೆಣಸಿನಕಾಯಿ ಶೇ 11.27 ಬದನೆಕಾಯಿ ಶೇ 9.94 ಹಾಗೂ ಎಲ್‌ಪಿಜಿ (ನಿರ್ವಹಣೆ ವೆಚ್ಚ ಹೊರತುಪಡಿಸಿ) ದರದಲ್ಲಿ ಶೇ 9.29ರಷ್ಟು ಇಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.