ADVERTISEMENT

ಚಿಲ್ಲರೆ ಹಣದುಬ್ಬರ 18 ತಿಂಗಳ ಕನಿಷ್ಠ

8 ತಿಂಗಳ ಕನಿಷ್ಠ ಮಟ್ಟ ತಲುಪಿದ ಸಗಟು ಹಣದುಬ್ಬರ

ಪಿಟಿಐ
Published 14 ಜನವರಿ 2019, 16:25 IST
Last Updated 14 ಜನವರಿ 2019, 16:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹಣ್ಣು, ತರಕಾರಿ ಮತ್ತು ಇಂಧನ ದರಗಳು ಇಳಿಕೆ ಆಗಿವೆ. ಹೀಗಾಗಿ ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ 18 ತಿಂಗಳ ಕನಿಷ್ಠ ಮಟ್ಟವಾದ ಶೇ 2.19ಕ್ಕೆ ಇಳಿಕೆ ಕಂಡಿದೆ.

ಈ ಹಿಂದೆ 2017ರ ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 1.46ರಷ್ಟು ಕನಿಷ್ಠ ಮಟ್ಟಕ್ಕೆ ತಲುಪಿತ್ತು.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ನವೆಂಬರ್‌ನಲ್ಲಿ ಶೇ 2.33ರಷ್ಟಿತ್ತು ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮಾಹಿತಿ ನೀಡಿದೆ.

ADVERTISEMENT

ಆಹಾರ ಹಣದುಬ್ಬರ ನಕಾರಾತ್ಮಕ ಮಟ್ಟದಲ್ಲಿಯೇ ಇದೆ. ನವೆಂಬರ್‌ನಲ್ಲಿ ಶೇ (–) 2.61 ಇತ್ತು. ಡಿಸೆಂಬರ್‌ನಲ್ಲಿ ಶೇ (–) 2.51ಕ್ಕೆ ಇಳಿದಿದೆ.

ಇಂಧನ ಮತ್ತು ವಿದ್ಯುತ್‌ ಹಣದುಬ್ಬರ ಶೇ 7.39 ರಿಂದ ಶೇ 4.54ಕ್ಕೆ ಇಳಿಕೆಯಾಗಿದೆ. ಮಾಂಸ, ಮೀನು ಮತ್ತು ಬೇಳೆಕಾಳುಗಳ ದರದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ.

ಸಗಟು ಹಣದುಬ್ಬರ 8 ತಿಂಗಳ ಕನಿಷ್ಠ: ಸಗಟು ಹಣದುಬ್ಬರವು 2018ರ ಡಿಸೆಂಬರ್‌ನಲ್ಲಿ 8 ತಿಂಗಳ ಕನಿಷ್ಠ ಮಟ್ವವಾದ ಶೇ 3.80ಕ್ಕೆ ಇಳಿಕೆಯಾಗಿದೆ.

ಇಂಧನ ಮತ್ತು ಆಹಾರ ಉತ್ಪನ್ನಗಳ ಬೆಲೆ ಇಳಿಕೆಯಿಂದ ಸಗಟು ಬೆಲೆ ಸೂಚ್ಯಂಕ ಆಧರಿಸಿದ (ಡಬ್ಲ್ಯುಪಿಐ) ಹಣದುಬ್ಬರ ತಗ್ಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

2018ರ ನವೆಂಬರ್‌ನಲ್ಲಿ ಇದು ಶೇ 4.68ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಶೇ 0.84ರಷ್ಟು ಇಳಿಕೆಯಾಗಿದೆ.ಆಹಾರ ಉತ್ಪನ್ನಗಳ ದರ ಶೇ 3.31 ರಿಂದ ಶೇ 0.07ಕ್ಕೆ, ತರಕಾರಿಗಳ ಬೆಲೆ ಶೇ 17.65ರಿಂದ ಶೇ 26.98ಕ್ಕೆ ಇಳಿದಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಕ್ರಮವಾಗಿ ಶೇ 1.57 ಮತ್ತು ಶೇ 8.61ರಷ್ಟು ತಗ್ಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.