
ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಬುಧವಾರ ₹90.15ಕ್ಕೆ ಕುಸಿದಿದೆ. ರೂಪಾಯಿಯ ಮೌಲ್ಯವು ವಹಿವಾಟಿನ ಅಂತ್ಯಕ್ಕೆ 90ಕ್ಕಿಂತ ಕಡಿಮೆ ಮಟ್ಟಕ್ಕೆ ಬಂದಿರುವುದು ಇದೇ ಮೊದಲು.
ವಿದೇಶಿ ಬಂಡವಾಳದ ಹೊರಹರಿವು ನಿರಂತರವಾಗಿರುವುದು, ಕಚ್ಚಾ ತೈಲದ ಬೆಲೆಯು ಹೆಚ್ಚಳವಾಗಿರುವುದು ಕೂಡ ರೂಪಾಯಿ ಮೌಲ್ಯ ಕುಸಿಯಲು ಕಾರಣವಾಗಿವೆ. ಅಮೆರಿಕ ಮತ್ತು ಭಾರತದ ನಡುವೆ ವ್ಯಾಪಾರ ಒಪ್ಪಂದ ಏರ್ಪಡುವ ಬಗ್ಗೆ ಅನಿಶ್ಚಿತತೆ ಮುಂದುವರಿದಿರುವುದು, ರೂಪಾಯಿ ಮೌಲ್ಯ ಕುಸಿತವನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೆಚ್ಚಿನ ಯತ್ನ ನಡೆಸುತ್ತಿಲ್ಲದಿರುವುದು ರೂಪಾಯಿಯ ಮೇಲೆ ಒತ್ತಡ ಸೃಷ್ಟಿಸಿವೆ ಎಂದು ವರ್ತಕರು ಹೇಳಿದ್ದಾರೆ.
ಬುಧವಾರ ವಹಿವಾಟಿನ ಆರಂಭದಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು ₹89.96ರಷ್ಟು ಇತ್ತು. ದಿನದ ನಡುವೆ ಅದು ₹90.30ರವರೆಗೂ ಇಳಿದಿತ್ತು. ವಹಿವಾಟಿನ ಕೊನೆಯಲ್ಲಿ ಮೌಲ್ಯವು ₹90.15 ಆಗಿದೆ. ಮಂಗಳವಾರದ ಮೌಲ್ಯಕ್ಕೆ ಹೋಲಿಸಿದರೆ ಬುಧವಾರ ರೂಪಾಯಿ ಮೌಲ್ಯವು 19 ಪೈಸೆಯಷ್ಟು ಕುಸಿದಿದೆ.
ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದ್ದರೂ, ರೂಪಾಯಿ ದುರ್ಬಲ ಎನ್ನಲಾಗದು ಎಂದು ಎಸ್‌ಬಿಐನ ಆರ್ಥಿಕ ಸಂಶೋಧನಾ ವಿಭಾಗವು ವರದಿಯೊಂದರಲ್ಲಿ ಹೇಳಿದೆ.
ವಿದೇಶಿ ಹೂಡಿಕೆದಾರರು ಭಾರತದ ಷೇರುಪೇಟೆಗಳಲ್ಲಿ ನಿರಂತರವಾಗಿ ಷೇರು ಮಾರಾಟದಲ್ಲಿ ತೊಡಗಿರುವುದು ರೂಪಾಯಿ ಮೌಲ್ಯ ಕುಸಿಯುತ್ತಿರುವುದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕ್ರಿಪ್ಟೊಕರೆನ್ಸಿಗಳಲ್ಲಿ ದಿಢೀರ್ ಕುಸಿತ ಉಂಟಾಗಿದ್ದುದು ಡಾಲರ್‌ಗೆ ಹೆಚ್ಚು ಬೇಡಿಕೆ ಬರುವಂತೆ ಮಾಡಿದೆ ಎಂದು ತಜ್ಞರು ಹೇಳಿದ್ದಾರೆ.
ಷೇರುಪೇಟೆಯ ಬುಧವಾರದ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು ಒಟ್ಟು ₹3,206 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಬುಧವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಇಳಿಕೆ ಕಂಡಿವೆ.
ಸೇವಾ ಚಟುವಟಿಕೆ ಏರಿಕೆ: ದೇಶದ ಸೇವಾ ವಲಯದ ಚಟುವಟಿಕೆಗಳ ಮಟ್ಟವನ್ನು ಸೂಚಿಸುವ ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್ ಬ್ಯುಸಿನೆಸ್ ಆ್ಯಕ್ಟಿವಿಟಿ ಸೂಚ್ಯಂಕವು ನವೆಂಬರ್ ತಿಂಗಳಲ್ಲಿ 59.8ಕ್ಕೆ ಏರಿಕೆ ಕಂಡಿದೆ. ಇದು ಅಕ್ಟೋಬರ್‌ನಲ್ಲಿ 58.9ರಷ್ಟು ಇತ್ತು. ಹೊಸ ವಹಿವಾಟುಗಳಲ್ಲಿನ ಏರಿಕೆಯು ಈ ಬೆಳವಣಿಗೆಗೆ ಪೂರಕವಾಗಿ ಒದಗಿಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.