
ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 93 ಪೈಸೆ ಕುಸಿದಿದ್ದು, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ರೂಪಾಯಿ ಮೌಲ್ಯ ಇಳಿಕೆ ಆಗಿದೆ.
ವಹಿವಾಟಿನ ಅಂತ್ಯದ ವೇಳೆಗೆ ಡಾಲರ್ ಎದುರು ರೂಪಾಯಿ ಮೌಲ್ಯವು ₹89.61ಕ್ಕೆ ಇಳಿದಿದೆ. ಇದು ಮೂರು ತಿಂಗಳಿನಲ್ಲಿ ರೂಪಾಯಿಯು ಒಂದೇ ದಿನದಲ್ಲಿ ಕಂಡ ಅತಿದೊಡ್ಡ ಕುಸಿತ.
ಭಾರತ ಮತ್ತು ಅಮೆರಿಕದ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದದ ಬಗ್ಗೆ ಸ್ಪಷ್ಟತೆಯಿಲ್ಲ. ಇದರಿಂದ ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು. ಇದು ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿತು ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.
ಶುಕ್ರವಾರ ಬೆಳಿಗ್ಗೆ ರೂಪಾಯಿ ವಿನಿಮಯ ಮೌಲ್ಯ ಡಾಲರ್ ಎದುರು ₹88.67 ಇತ್ತು. ಮಧ್ಯಂತರದಲ್ಲಿ ಇದು ₹89.65ಕ್ಕೆ ಕುಸಿಯಿತು. ವಹಿವಾಟಿನ ಮುಕ್ತಾಯದ ವೇಳೆಗೆ ₹89.61 ಆಗಿತ್ತು.
ಗುರುವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 20 ಪೈಸೆ ಇಳಿಕೆ ಕಂಡು, ₹88.68 ಆಗಿತ್ತು. ಜುಲೈ 30ರಂದು ರೂಪಾಯಿ 89 ಪೈಸೆ ಇಳಿಕೆ ಆಗಿತ್ತು. ಇದು ಇದುವರೆಗಿನ ಒಂದೇ ದಿನ ಕಂಡಿದ್ದ ಹೆಚ್ಚು ಇಳಿಕೆ ಆಗಿತ್ತು.
‘ಕ್ರಿಪ್ಟೊಕರೆನ್ಸಿಗಳು ಮತ್ತು ಕೃತಕ ಬುದ್ಧಿಮತ್ತೆ ಸಂಬಂಧಿತ ತಂತ್ರಜ್ಞಾನ ಕಂಪನಿಗಳ ಷೇರುಗಳ ಮಾರಾಟವು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ. ಪ್ರಸ್ತಾವಿತ ಭಾರತ ಮತ್ತು ಅಮೆರಿಕದ ವ್ಯಾಪಾರ ಒಪ್ಪಂದದ ಸುತ್ತಲಿನ ದೀರ್ಘಕಾಲದ ಅನಿಶ್ಚಿತತೆಯು ಒತ್ತಡವನ್ನು ಹೆಚ್ಚಿಸಿದೆ. ಈ ವಿದ್ಯಮಾನಗಳು ಕರೆನ್ಸಿ ವಿನಿಮಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿವೆ. ಹೀಗಾಗಿ ರೂಪಾಯಿ ಮೌಲ್ಯ ಕುಸಿದಿದೆ’ ಎಂದು ಕೋಟಕ್ ಸೆಕ್ಯುರಿಟೀಸ್‌ನ ಸಂಶೋಧನಾ ವಿಭಾಗದ (ಕರೆನ್ಸಿ, ಸರಕು ಮತ್ತು ಬಡ್ಡಿದರ ಉತ್ಪನ್ನ) ಮುಖ್ಯಸ್ಥೆ ಅನಿಂದ್ಯಾ ಬ್ಯಾನರ್ಜಿ ಹೇಳಿದ್ದಾರೆ.
ಆರ್‌ಬಿಐ ಗವರ್ನರ್ ಹೇಳಿದ್ದೇನು?: ‘ರೂಪಾಯಿ ಮೌಲ್ಯವನ್ನು ಇಂತಿಷ್ಟೇ ಮಟ್ಟದಲ್ಲಿ ಇರಿಸಬೇಕು ಎಂಬ ಗುರಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಂದಿಲ್ಲ. ವ್ಯಾಪಾರ ನಿಯಮಗಳು ಮತ್ತು ಅಮೆರಿಕದ ಹೆಚ್ಚುವರಿ ಸುಂಕವು ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿವೆ’ ಎಂದು ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುವಾರ ಹೇಳಿದ್ದರು.
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ಗೆ ಬೇಡಿಕೆ ಹೆಚ್ಚಳವಾಗಿದೆ. ಇದರಿಂದ ರೂಪಾಯಿ ಮೌಲ್ಯ ಡಾಲರ್ ಎದುರು ಇಳಿದಿದೆ. ರೂಪಾಯಿಗೆ ಬೇಡಿಕೆ ಹೆಚ್ಚಳವಾದರೆ, ಡಾಲರ್ ಮೌಲ್ಯ ಇಳಿದು ರೂಪಾಯಿ ಮೌಲ್ಯ ಏರಿಕೆಯಾಗಲಿದೆ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.