
ಡಾಲರ್ ವಿರುದ್ಧ ಮತ್ತೆ ಕುಸಿದ ರೂಪಾಯಿ ಮೌಲ್ಯ
ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 43 ಪೈಸೆಯಷ್ಟು ಕುಸಿದಿದ್ದು, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ.
ವಹಿವಾಟಿನ ಅಂತ್ಯದ ವೇಳೆಗೆ ರೂಪಾಯಿ ಮೌಲ್ಯವು ₹89.96ಕ್ಕೆ ಇಳಿದಿದೆ. ದೇಶದ ಷೇರುಪೇಟೆಯಿಂದ ವಿದೇಶಿ ಬಂಡವಾಳದ ಹೊರಹರಿವು, ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದ ಬಗ್ಗೆ ಇರುವ ಅನಿಶ್ಚಿತತೆಯು ಹೂಡಿಕೆದಾರರ ಭಾವನೆ ಮೇಲೆ ಪರಿಣಾಮ ಬೀರಿದೆ. ಇವು ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾಗಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಮಂಗಳವಾರ ಬೆಳಿಗ್ಗೆ ರೂಪಾಯಿ ವಿನಿಮಯ ಮೌಲ್ಯವು ಡಾಲರ್ ಎದುರು ₹89.70 ಇತ್ತು. ವಹಿವಾಟಿನ ನಡುವಿನಲ್ಲಿ ಮೌಲ್ಯವು ₹90.00 ಕೂಡ ಆಗಿತ್ತು. ಸೋಮವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 8 ಪೈಸೆ ಇಳಿಕೆ ಆಗಿ, ₹89.53 ಆಗಿತ್ತು.
ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 0.25ರಷ್ಟು ಇಳಿಕೆ ಆಗಿದೆ. ಪ್ರತಿ ಬ್ಯಾರಲ್ ದರ 63.03 ಡಾಲರ್ ಆಗಿದೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 503 ಅಂಶ ಇಳಿಕೆಯಾಗಿ, 85,138ಕ್ಕೆ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 143 ಅಂಶ ಕಡಿಮೆಯಾಗಿ, 26,032ಕ್ಕೆ ಕೊನೆಗೊಂಡಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರದ ವಹಿವಾಟಿನಲ್ಲಿ ₹1,171 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.