ADVERTISEMENT

ಗ್ರಾಮೀಣ ಉಪಭೋಗ; 7 ವರ್ಷ ಹಿಂದಿನ ಮಟ್ಟಕ್ಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 18:16 IST
Last Updated 18 ಅಕ್ಟೋಬರ್ 2019, 18:16 IST

ನವದೆಹಲಿ: ಗ್ರಾಮೀಣ ಪ್ರದೇಶದಲ್ಲಿ ಸರಕುಗಳ ಬಳಕೆ ಪ್ರಮಾಣವು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 7 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ಗ್ರಾಮೀಣ ಕುಟುಂಬಗಳ ಉತ್ಪನ್ನಗಳ ಉಪಭೋಗದ ಪ್ರಮಾಣವು ವರ್ಷದ ಹಿಂದಿನ ಶೇ 16.2ಕ್ಕೆ ಹೋಲಿಸಿದರೆ ಈ ಬಾರಿ ಶೇ 7.3ಕ್ಕೆ ಇಳಿದಿದೆ. ಪ್ಯಾಕೇಜ್ಡ್‌ ಗ್ರಾಹಕ ಸರಕುಗಳ ಬಳಕೆಯು ನಗರ ಪ್ರದೇಶಕ್ಕಿಂತ ಕಡಿಮೆ ಮಟ್ಟದ ಏರಿಕೆ ದಾಖಲಿಸಿದೆ. ಗ್ರಾಮೀಣ ಪ್ರದೇಶದ ಬಳಕೆಯ ಬೆಳವಣಿಗೆ ವಿಷಯದಲ್ಲಿ ಇದು ಕಳೆದ 7 ವರ್ಷಗಳಲ್ಲಿನ ಅತ್ಯಂತ ಕಡಿಮೆ ಮಟ್ಟ ಇದಾಗಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ನೀಲ್ಸನ್‌ ಹೇಳಿದೆ.

ಮೌಲ್ಯದ ಲೆಕ್ಕದಲ್ಲಿ ಗ್ರಾಮೀಣ ಪ್ರದೇಶದ ಉಪಭೋಗದ ಪ್ರಮಾಣವು ವರ್ಷದ ಹಿಂದಿನ ಶೇ 20ಕ್ಕೆ ಬದಲಾಗಿ ಕೇವಲ ಶೇ 5ರಷ್ಟು ಹೆಚ್ಚಳಗೊಂಡಿದೆ. ನಗರ ಪ್ರದೇಶದಲ್ಲಿನ ಬಳಕೆ ಪ್ರಮಾಣವು ವರ್ಷದ ಹಿಂದಿನ ಶೇ 14ಕ್ಕೆ ಹೋಲಿಸಿದರೆ ಶೇ 8ರಷ್ಟಾಗಿದೆ.

ADVERTISEMENT

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ಖರೀದಿಯಲ್ಲಿ ಗ್ರಾಮೀಣ ಪ್ರದೇಶದ ಜನರು ಮಾಡುವ ವೆಚ್ಚದ ಪ್ರಮಾಣವು ಶೇ 36ರಷ್ಟಿದೆ. ವರ್ಷಗಳಿಂದ ಇದು ನಗರ ಪ್ರದೇಶಗಳಿಗಿಂತ ಶೇ 3 ರಿಂದ ಶೇ 5ರಷ್ಟು ಹೆಚ್ಚಿನ ಪ್ರಮಾಣದಲ್ಲಿಯೇ ಇದೆ.

ಕೃಷಿ ಸಂಕಷ್ಟವು ದೀರ್ಘ ಸಮಯದಿಂದ ಮುಂದುವರೆದಿರುವುದು, ವರಮಾನವು ಹೆಚ್ಚಳಗೊಳ್ಳದಿರುವುದರಿಂದ ಗ್ರಾಹಕ ಬಳಕೆ ಉತ್ಪನ್ನಗಳ ಬೇಡಿಕೆ ಕುಸಿದಿದೆ. ಕೃಷಿ ಉತ್ಪನ್ನಗಳ ಬೆಲೆ ಇಳಿಕೆಯಿಂದ ವರಮಾನದಲ್ಲಿ ಖೋತಾ ಆಗಿದೆ. ರೈತರಷ್ಟೇ ಅಲ್ಲದೆ, ಕೃಷಿ ಕಾರ್ಮಿಕರ ವರಮಾನವೂ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.