
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಕೃಪೆ: ಪಿಟಿಐ
ನವದೆಹಲಿ: ಭಾರತವು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ತಕ್ಷಣಕ್ಕೆ ನಿಲ್ಲಿಸುವುದು ಸಾಧ್ಯವಾಗದ ಕೆಲಸ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಚ್ಚಾ ತೈಲ ಆಮದು ಬಗ್ಗೆ 4–6 ವಾರಗಳ ಮೊದಲೇ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ, ಕನಿಷ್ಠಪಕ್ಷ ನವೆಂಬರ್ ಅಂತ್ಯದವರೆಗಿನ ಆಮದು ಬಗ್ಗೆ ಈಗಾಗಲೇ ಒಪ್ಪಂದ ಆಗಿರುತ್ತದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿರುವುದು ನಿಜ ಎಂದಾದರೆ, ರಷ್ಯಾದಿಂದ ಕಚ್ಚಾ ತೈಲ ಆಮದು ನವೆಂಬರ್ ಮೂರನೆಯ ಅಥವಾ ನಾಲ್ಕನೆಯ ವಾರದಿಂದ ಕೊನೆಗೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ.
‘ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸಲು ಭಾರತ ಒಪ್ಪಿದೆ’ ಎಂದು ಟ್ರಂಪ್ ಅವರು ಹೇಳಿರುವುದು ರಾಜಕೀಯ ಮಾತಿನಂತೆ ಕಾಣುತ್ತಿದೆ ಎಂದು ವಿಶ್ಲೇಷಣಾ ಸಂಸ್ಥೆ ಕೆಪ್ಲರ್ ಹೇಳಿದೆ. ಆಮದು ನಿಲ್ಲಿಸುವ ಬಗ್ಗೆ ಕೇಂದ್ರ ಸರ್ಕಾರವು ಅಧಿಕೃತ ಹೇಳಿಕೆ ನೀಡಿಲ್ಲ.
ಅಕ್ಟೋಬರ್‌ನಲ್ಲಿ ಭಾರತವು ರಷ್ಯಾದಿಂದ ದಿನಕ್ಕೆ 18 ಲಕ್ಷ ಬ್ಯಾರಲ್ ಕಚ್ಚಾ ತೈಲ ಖರೀದಿಸಿದೆ ಎಂದು ಕೆಪ್ಲರ್ ಅಂದಾಜು ಮಾಡಿದೆ. ಸೆಪ್ಟೆಂಬರ್‌ನಲ್ಲಿ ಖರೀದಿಸುತ್ತಿದ್ದ ಮಟ್ಟಕ್ಕೆ ಹೋಲಿಸಿದರೆ ಇದು ದಿನಕ್ಕೆ 2.50 ಲಕ್ಷ ಬ್ಯಾರಲ್‌ನಷ್ಟು ಹೆಚ್ಚು.
ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಖರೀದಿಯು ತುಸು ಕಡಿಮೆ ಆಗಿದ್ದಕ್ಕೆ ಕಾರಣ ಅಮೆರಿಕವು ಭಾರತದ ಸರಕುಗಳ ಮೇಲೆ ವಿಧಿಸಿದ ಸುಂಕ ಅಲ್ಲ. ಅದಕ್ಕೆ ಇತರ ಕಾರಣಗಳಿದ್ದವು, ಅದರಲ್ಲೂ ಮುಖ್ಯವಾಗಿ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಘಟಕಗಳಲ್ಲಿ ವಾರ್ಷಿಕ ನಿರ್ವಹಣಾ ಚಟುವಟಿಕೆಗಳು ಕಾರಣವಾಗಿದ್ದವು.
ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವಲ್ಲಿ ಎರಡನೆಯ ಸ್ಥಾನದಲ್ಲಿ ಇರುವ ಭಾರತವು ಆಮದನ್ನು ನಿಲ್ಲಿಸಿದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಬ್ಯಾರಲ್‌ಗೆ 100 ಡಾಲರ್‌ವರೆಗೆ ಹೆಚ್ಚಳವಾಗುವ ಅಪಾಯ ಇದೆ. ಇದರ ಪರಿಣಾಮವಾಗಿ ಹಣದುಬ್ಬರವು ಜಗತ್ತಿನೆಲ್ಲೆಡೆ ಏರಿಕೆ ಕಾಣಬಹುದು ಎಂದು ತಜ್ಞರು ಭೀತಿ ವ್ಯಕ್ತಪಡಿಸಿದ್ದಾರೆ.
ರಷ್ಯಾದ ಕಚ್ಚಾ ತೈಲ ಆಮದು ನಿಲ್ಲಿಸಬೇಕು ಎಂದಾದರೆ ಭಾರತದ ಕಂಪನಿಗಳು ದೊಡ್ಡ ಮಟ್ಟದಲ್ಲಿ ಆರ್ಥಿಕ ಲಾಭವನ್ನು ಬಿಟ್ಟುಕೊಡಬೇಕಾಗುತ್ತದೆ. ಒಂದು ಅಂದಾಜಿನ ಪ್ರಕಾರ ದೇಶದ ವಾರ್ಷಿಕ ಆಮದು ವೆಚ್ಚವು 5 ಬಿಲಿಯನ್ ಡಾಲರ್‌ವರೆಗೆ (ಅಂದಾಜು ₹43 ಸಾವಿರ ಕೋಟಿ) ಹೆಚ್ಚಬಹುದು.
‘ದೇಶಿ ತೈಲ ಸಂಸ್ಕರಣಾ ಕಂಪನಿಗಳು ಹಣಕಾಸಿನ ಲೆಕ್ಕಾಚಾರ ಹಾಗೂ ಲಭ್ಯತೆಯನ್ನು ಆಧರಿಸಿ ವಿವಿಧ ಮೂಲಗಳಿಂದ ಖರೀದಿ ಮುಂದುವರಿಸಲಿವೆ’ ಎಂದು ಐಸಿಆರ್‌ಎ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಪ್ರಶಾಂತ್ ವಸಿಷ್ಠ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.