
ನವದೆಹಲಿ: ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಮುಂದಿನ ದಿನಗಳಲ್ಲಿ ಕಡಿಮೆ ಆಗುವ ಸಾಧ್ಯತೆ ಇದೆ. ಆದರೆ ಆಮದು ಪೂರ್ತಿಯಾಗಿ ನಿಲ್ಲುವ ಸಾಧ್ಯತೆ ಇಲ್ಲ ಎಂದು ತಜ್ಞರು ಹೇಳಿದ್ದಾರೆ.
ರಷ್ಯಾದ ರೊಸ್ನೆಫ್ಟ್ ಮತ್ತು ಲುಕಾಯಿಲ್ ಕಂಪನಿಗಳ ಮೇಲೆ ಅಮೆರಿಕ ಹೇರಿರುವ ನಿರ್ಬಂಧಗಳು ನವೆಂಬರ್ 21ರಿಂದ ಜಾರಿಗೆ ಬಂದಿವೆ.
ಈ ವರ್ಷದಲ್ಲಿ ಭಾರತವು ರಷ್ಯಾದಿಂದ ಆಮದು ಮಾಡಿಕೊಂಡ ಕಚ್ಚಾ ತೈಲದ ಪ್ರಮಾಣವು ದಿನವೊಂದಕ್ಕೆ ಸರಾಸರಿ 17 ಲಕ್ಷ ಬ್ಯಾರೆಲ್ ಆಗಿದೆ. ನವೆಂಬರ್‌ನಲ್ಲಿ ಆಮದು ಪ್ರಮಾಣವು ದಿನವೊಂದಕ್ಕೆ ಸರಾಸರಿ 19 ಲಕ್ಷ ಬ್ಯಾರೆಲ್ ಆಗಿತ್ತು. ನವೆಂಬರ್‌ನಲ್ಲಿ ಭಾರತಕ್ಕೆ ಕಚ್ಚಾ ತೈಲ ರಫ್ತು ಮಾಡುವ ದೇಶಗಳ ಸಾಲಿನಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿಯೇ ಇತ್ತು. ಆದರೆ ಆಮದು ಡಿಸೆಂಬರ್ ಮತ್ತು ಜನವರಿಯಲ್ಲಿ ಗಮನಾರ್ಹವಾಗಿ ಕಡಿಮೆ ಆಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಇದು ಶೀಘ್ರದಲ್ಲಿ ದಿನವೊಂದಕ್ಕೆ 4 ಲಕ್ಷ ಬ್ಯಾರೆಲ್‌ಗೆ ಇಳಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ.
ಮಧ್ಯವರ್ತಿಗಳನ್ನು ನೇಮಕ ಮಾಡುವ ವಿಚಾರದಲ್ಲಿ, ನಿರ್ಬಂಧಗಳನ್ನು ತಪ್ಪಿಸಿ ಹಡಗುಗಳ ಮೂಲಕ ಉತ್ಪನ್ನಗಳನ್ನು ರವಾನಿಸುವಲ್ಲಿ ಹಾಗೂ ಹಣದ ಪಾವತಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ವಿಚಾರದಲ್ಲಿ ರಷ್ಯಾದ ಬಹಳ ತ್ವರಿತವಾಗಿ ಹೊಸ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಈಗಲೇ ಖಚಿತವಾಗಿ ಏನೂ ಹೇಳಲಾಗದು ಎಂದು ಕೆಪ್ಲರ್ ಸಂಸ್ಥೆಯ ಮುಖ್ಯ ಸಂಶೋಧನಾ ವಿಶ್ಲೇಷಕ ಸುಮಿತ್ ರಿತೋಲಿಯಾ ಹೇಳಿದ್ದಾರೆ.
ನಿರ್ಬಂಧಗಳ ಕಾರಣದಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಪಿಸಿಎಲ್–ಮಿತ್ತಲ್ ಎನರ್ಜಿ ಲಿಮಿಟೆಡ್, ಎಂಆರ್‌ಪಿಎಲ್ ಕಂಪನಿಗಳು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿವೆ.
ಅಮೆರಿಕವು ಘೋಷಣೆ ಮಾಡಿರುವ ನಿರ್ಬಂಧಗಳು ರಷ್ಯಾದ ನಿರ್ದಿಷ್ಟ ಕಂಪನಿಗಳನ್ನು ಗುರಿಯಾಗಿಸಿಕೊಂಡಿವೆ, ರಷ್ಯಾದ ಕಚ್ಚಾ ತೈಲ ಖರೀದಿಯನ್ನು ಇಡಿಯಾಗಿ ಅದು ಗುರಿಮಾಡಿಕೊಂಡಿಲ್ಲ. ಅಂದರೆ, ನಿರ್ಬಂಧಕ್ಕೆ ಗುರಿಯಾಗದ ರಷ್ಯಾದ ಕಂಪನಿಗಳಿಂದ ಅಥವಾ ನಿರ್ಬಂಧಕ್ಕೆ ಗುರಿಯಾಗದ ಮಧ್ಯವರ್ತಿಗಳನ್ನು ಬಳಕೆ ಮಾಡಿಕೊಳ್ಳುವ ಸ್ವತಂತ್ರ ವರ್ತಕರಿಂದ ಕಚ್ಚಾ ತೈಲವನ್ನು ಭಾರತದ ಕಂಪನಿಗಳು ಈಗಲೂ ಖರೀದಿಸಬಹುದು. ನಿರ್ಬಂಧಕ್ಕೆ ಗುರಿಯಾದ ಕಂಪನಿ, ಹಡಗು, ಬ್ಯಾಂಕ್ ಅಥವಾ ಸೇವಾದಾತ ಖರೀದಿ ಪ್ರಕ್ರಿಯೆಯಲ್ಲಿ ಭಾಗಿಯಾಗಿರಬಾರದು.
ರಷ್ಯಾದಿಂದ ಕಚ್ಚಾ ತೈಲವನ್ನು ರಿಯಾಯಿತಿ ಬೆಲೆಗೆ ತರಿಸಿಕೊಳ್ಳುತ್ತಿರುವುದರಿಂದಾಗಿ ಭಾರತದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದುಸ್ತಾನ್ ಪೆಟ್ರೋಲಿಯಂ, ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಗಳಿಗೆ ಕಳೆದ ಎರಡು ವರ್ಷಗಳಲ್ಲಿ ಭಾರಿ ಲಾಭ ಕಾಣಲು ಸಾಧ್ಯವಾಗಿದೆ. ಹಾಗೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸ್ಥಿರತೆ ಇದೆ.
‘ಅಲ್ಪಾವಧಿಯಲ್ಲಿ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದು ಕಡಿಮೆ ಆಗಲಿದ್ದರೂ, ಅಲ್ಲಿಂದ ತೈಲ ಖರೀದಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ಸಾಧ್ಯತೆ ಇಲ್ಲ. ರಿಯಾಯಿತಿ ದರಕ್ಕೆ ಸಿಗುವ ರಷ್ಯಾದ ತೈಲವು ಭಾರತದ ಕಂಪನಿಗಳ ಪಾಲಿಗೆ ಆಕರ್ಷಕವಾಗಿ ಇರಲಿದೆ. ಎರಡನೆಯ ಹಂತದ ನಿರ್ಬಂಧಗಳು ಭಾರತದ ಕಂಪನಿಗಳನ್ನು ಗುರಿಯಾಗಿಸಿಕೊಳ್ಳದೆ ಇದ್ದರೆ, ಕೇಂದ್ರ ಸರ್ಕಾರವು ತಾನೇ ನಿರ್ಬಂಧ ವಿಧಿಸದೆ ಇದ್ದರೆ ರಷ್ಯಾದಿಂದ ಕಚ್ಚಾ ತೈಲ ಆಮದು ಬೇರೆ ಬೇರೆ ಮಾರ್ಗಗಳ ಮೂಲಕ ಮುಂದುವರಿಯಲಿದೆ’ ಎಂದು ರಿತೋಲಿಯಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.