ADVERTISEMENT

ಆರ್ಥಿಕ ಮುನ್ನೋಟ ಸ್ಥಿರ

ದೀರ್ಘಾವಧಿಗೆ ಜಿಡಿಪಿಯಲ್ಲಿ ಚೇತರಿಕೆ: ಎಸ್‌ಆ್ಯಂಡ್‌ಪಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 17:07 IST
Last Updated 13 ಫೆಬ್ರುವರಿ 2020, 17:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿತ್ತೀಯ ಶಿಸ್ತು ಕಾಯ್ದುಕೊಳ್ಳುವಲ್ಲಿ ಭಾರತಕ್ಕೆ ನೀಡಿರುವ ‘ಬಿಬಿಬಿ ಮೈನಸ್‌’ ರೇಟಿಂಗ್ಸ್‌ ಬದಲಿಸಲು ಜಾಗತಿಕ ಮಾನದಂಡ ಸಂಸ್ಥೆ ಎಸ್‌ಆ್ಯಡ್‌ಪಿ ನಿರಾಕರಿಸಿದೆ.

ಭಾರತದ ಆರ್ಥಿಕ ಮುನ್ನೋಟ ಸ್ಥಿರವಾಗಿರಲಿದೆ ಎಂದು ತಿಳಿಸಿದೆ.

ವಿತ್ತೀಯ ಶಿಸ್ತು ಕಾಯ್ದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ದೇಶದ ವಿತ್ತೀಯ ಸ್ಥಿತಿಯು ಅಸ್ಥಿರವಾಗಿದೆ. ದೀರ್ಘಾವಧಿಯಲ್ಲಿ ಆರ್ಥಿಕ ವೃದ್ಧಿ ದರವು (ಜಿಡಿಪಿ) ಚೇತರಿಕೆ ಹಾದಿಗೆ ಮರಳಲಿದೆ ಎಂದೂ ಹೇಳಿದೆ.

ADVERTISEMENT

ಇತ್ತೀಚಿನ ತ್ರೈಮಾಸಿಕಗಳಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆಯು ಇಳಿಮುಖವಾಗಿದೆ. ಹೀಗಿದ್ದರೂ ಆರ್ಥಿಕ ತಳಹದಿ ಬಲಿಷ್ಠವಾಗಿದೆ. ಸಾಂಸ್ಥಿಕ ಬದಲಾವಣೆಗೆ ಒಳಪಡದೆ, ಸಹಜವಾದಬೆಳವಣಿಗೆಗೆ ಒಳಪಟ್ಟಿದೆ. ಹೀಗಾಗಿ ದೀರ್ಘಾವಧಿಯಲ್ಲಿ ನೈಜ ಜಿಡಿಪಿ ಚೇತರಿಕೆ ಕಂಡುಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದೆ.

2020–21ರಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 6ರಷ್ಟಾಗಲಿದೆ. 2021–22ರಲ್ಲಿ ಶೇ 7ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜು ಮಾಡಿದೆ.

ಜಿಡಿಪಿ ಬೆಳವಣಿಗೆಯು ಅಂದಾಜಿಗಿಂತಲೂ ಕೆಳ ಮಟ್ಟಕ್ಕೆ ಇಳಿಕೆ ಕಂಡರೆ, ರೇಟಿಂಗ್ಸ್‌ನಲ್ಲಿ ಬದಲಾವಣೆ ಮಾಡಲಾಗುವುದು. ವಿತ್ತೀಯ ಕೊರತೆಯಲ್ಲಿ ಏರಿಕೆ ಮತ್ತು ರಾಜಕೀಯ ವಿದ್ಯಮಾನಗಳು ಆರ್ಥಿಕ ಸುಧಾರಣಾ ಕ್ರಮಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ನಗದು ಬಿಕ್ಕಟ್ಟು ಸ್ಥಿತಿಯು ಮುಂದುವರಿದಿದ್ದು, ಸಾರ್ವಜನಿಕ ವಲಯದಲ್ಲಿ ಸಾಲ ನೀಡಿಕೆಗೆ ಸಮಸ್ಯೆ ಎದುರಾಗಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಎದುರಾಗಿರುವ ನಗದು ಬಿಕ್ಕಟ್ಟು ಖಾಸಗಿ ಉಪಭೋಗದ ಮೇಲೆ ಇನ್ನಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ. ಸ್ಪರ್ಧಾತ್ಮಕವಾದ ಕಾರ್ಮಿಕ ವೆಚ್ಚ, ಅನುಕೂಲಕರ ಕಾರ್ಪೊರೇಟ್‌ ತೆರಿಗೆ ವ್ಯವಸ್ಥೆಯು ಸರಕುಗಳ ತಯಾರಿಕಾ ಸಂಸ್ಥೆಗಳಿಗೆ ಪೂರಕವಾಗಿದೆ. ಹೀಗಾಗಿ ಚೇತರಿಕೆ ಕಂಡು ಬರಲಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.