ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ ಶೇಕಡ 55ರಷ್ಟು ಹೆಚ್ಚಾಗಿದ್ದು ₹ 6,504 ಕೋಟಿಗಳಿಗೆ ತಲುಪಿದೆ. ಸುಸ್ತಿ ಸಾಲದಲ್ಲಿ ಇಳಿಕೆ ಆಗಿರುವುದೇ ಇದಕ್ಕೆ ಕಾರಣ ಎಂದು ಬ್ಯಾಂಕ್ ತಿಳಿಸಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ನ ನಿವ್ವಳ ಲಾಭವು ₹4,189 ಕೋಟಿಗಳಷ್ಟಿತ್ತು.
ಬ್ಯಾಂಕ್‌ನ ಒಟ್ಟಾರೆ ವರಮಾನವು ₹74,457 ಕೋಟಿಗಳಿಂದ ₹ 77,347 ಕೋಟಿಗಳಿಗೆ ಏರಿಕೆ ಆಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.
ಒಟ್ಟಾರೆ ಮುಂಗಡದಲ್ಲಿ ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು 5.44 ರಿಂದ 5.32ಕ್ಕೆ ಇಳಿಕೆ ಆಗಿದೆ. ಅದೇ ರೀತಿ ನಿವ್ವಳ ಎನ್‌ಪಿಎ ಶೇ 1.8 ರಿಂದ ಶೇ 1.7ಕ್ಕೆ ಇಳಿಕೆ ಕಂಡಿದೆ. ಹೀಗಾಗಿ, ಸುಸ್ತಿ ಸಾಲದ ಮೊತ್ತವು ₹9,420 ಕೋಟಿಗಳಿಂದ ₹5,029 ಕೋಟಿಗಳಿಗೆ ಇಳಿಕೆ ಆಗಿದೆ ಎಂದು ಬ್ಯಾಂಕ್ ಹೇಳಿದೆ.
ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟವನ್ನು ಭರಿಸಲು ತೆಗೆದಿರಿಸುವ ಮೊತ್ತದ ಪ್ರಮಾಣವು ಶೇ 86.32 ರಿಂದ ಶೇ 85.93ಕ್ಕೆ ಇಳಿಕೆ ಆಗಿದೆ ಎಂದು ಅದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.