
ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮುಂದಿನ ಐದು ತಿಂಗಳೊಳಗೆ ಸುಮಾರು 3,500 ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಯೋಜಿಸಿದೆ.
ಜೂನ್ ತಿಂಗಳಿನಲ್ಲಿ 505 ಪ್ರೊಬೇಷನರಿ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿತ್ತು. ಈಗ ಇಷ್ಟೇ ಸಂಖ್ಯೆಯ ಹುದ್ದೆಗಳಿಗೆ ಮತ್ತೆ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ದೇಶದಾದ್ಯಂತ ಬ್ಯಾಂಕ್‌ನ ಕಾರ್ಯಾಚರಣೆಯನ್ನು ಹೆಚ್ಚಿಸಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಬ್ಯಾಂಕ್‌ನ ಉಪ ವ್ಯವಸ್ಥಾಪಕ ನಿರ್ದೇಶಕ (ಮಾನವ ಸಂಪನ್ಮೂಲ ವಿಭಾಗ) ಮತ್ತು ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ಕಿಶೋರ್ ಕುಮಾರ್ ಪೋಲುದಾಸು ಹೇಳಿದ್ದಾರೆ.
ಈಗಾಗಲೇ 541 ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಸ್ವೀಕರಿಸಲಾಗಿದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಇದೀಗ ಹೆಚ್ಚುವರಿಯಾಗಿ ವಲಯ ಆಧಾರಿತ ಅಧಿಕಾರಿಗಳ ಅಂದಾಜು 3 ಸಾವಿರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದ್ದು, ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
ಎಸ್‌ಬಿಐ ಅಧ್ಯಕ್ಷ ಸಿ.ಎಸ್.ಸೆಟ್ಟಿ ಅವರು ಬ್ಯಾಂಕ್ 18 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಿದೆ ಎಂದು ಈ ವರ್ಷದ ಆರಂಭದಲ್ಲಿ ಹೇಳಿದ್ದರು. ಬಳಿಕ 13,500 ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಇದೀಗ ಪ್ರೊಬೇಷನರಿ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.