ADVERTISEMENT

ಭಾರತದ ಮೇಲೆ ಸುಂಕ: ಅಮೆರಿಕಕ್ಕೆ ಹೆಚ್ಚು ನಷ್ಟ; ಎಸ್‌ಬಿಐ ರಿಸರ್ಚ್‌

ಪಿಟಿಐ
Published 1 ಆಗಸ್ಟ್ 2025, 15:45 IST
Last Updated 1 ಆಗಸ್ಟ್ 2025, 15:45 IST
ಎಸ್‌ಬಿಐ
ಎಸ್‌ಬಿಐ   

ನವದೆಹಲಿ: ಭಾರತದ ಮೇಲೆ ಅಮೆರಿಕ ವಿಧಿಸಿರುವ ಹೆಚ್ಚಿನ ಸುಂಕವು, ಭಾರತಕ್ಕಿಂತ ಅಮೆರಿಕದ ಜಿಡಿಪಿ ಮತ್ತು ಹಣದುಬ್ಬರದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಎಸ್‌ಬಿಐ ರಿಸರ್ಚ್‌ ತಿಳಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದಿಂದ ಆಮದು ಮಾಡಿಕೊಳ್ಳಲಾಗುವ ಎಲ್ಲ ಸರಕುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸುವುದಾಗಿ ಹೇಳಿದ್ದಾರೆ. ಈ ಸುಂಕ ಹೇರಿಕೆಯು ಅಮೆರಿಕದ ‘ಕೆಟ್ಟ ವ್ಯಾಪಾರ ನಿರ್ಧಾರವಾಗಿದೆ’ ಎಂದು ಹೇಳಿದೆ.

ಭಾರತಕ್ಕೆ ಅಧಿಕ ಸುಂಕ ವಿಧಿಸಿರುವುದು, ಭಾರತಕ್ಕಿಂತ ಅಮೆರಿಕದ ಮೇಲೆಯೇ ಹೆಚ್ಚು ನಕಾರಾತ್ಮಕ ಪರಿಣಾಮ ಬೀರಲಿದೆ. ಅಮೆರಿಕದ ಆರ್ಥಿಕತೆ ಕುಂಠಿತಗೊಳ್ಳುವ, ಡಾಲರ್‌ ಮೌಲ್ಯವೂ ಕುಸಿಯುವ  ಸಾಧ್ಯತೆ ಇದೆ. 2026ರ ವೇಳೆಗೆ ಅಮೆರಿಕದ ಹಣದುಬ್ಬರ ಶೇ 2ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಎಸ್‌ಬಿಐ ರಿಸರ್ಚ್‌ ಶುಕ್ರವಾರ ಹೇಳಿದೆ.

ADVERTISEMENT

ಸುಂಕ ಹೆಚ್ಚಳದಿಂದ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಇದರಿಂದ ಅಲ್ಪಾವಧಿಯಲ್ಲಿ ಅಮೆರಿಕದ ಕುಟುಂಬವೊಂದಕ್ಕೆ ಸರಾಸರಿ ₹2.10 ಲಕ್ಷ ನಷ್ಟ ಉಂಟಾಗುವ ಅಂದಾಜಿದೆ. ಕಡಿಮೆ ಆದಾಯ ಹೊಂದಿರುವ ಕುಟುಂಬಗಳು ₹1.13 ಲಕ್ಷ ನಷ್ಟ ಅನುಭವಿಸಿದರೆ, ಹೆಚ್ಚಿನ ಆದಾಯ ಹೊಂದಿರುವ ಕುಟುಂಬಗಳು ₹4.37 ಲಕ್ಷ ನಷ್ಟ ಕಾಣುವ ನಿರೀಕ್ಷೆಯಿದೆ ಎಂದು ಎಸ್‌ಬಿಐ ಗ್ರೂಪ್‌ನ ಮುಖ್ಯ ಆರ್ಥಿಕ ಸಲಹೆಗಾರರಾದ ಸೌಮ್ಯಕಾಂತಿ ಘೋಷ್ ಅಭಿಪ್ರಾಯಪಟ್ಟಿದ್ದಾರೆ.

ಈ ಮೊದಲು ಕೆಲವು ಸರಕುಗಳಿಗೆ ಅಮೆರಿಕವು ಕಡಿಮೆ ಸುಂಕ ವಿಧಿಸುತ್ತಿತ್ತು. ವಜ್ರ, ಸ್ಮಾರ್ಟ್‌ಫೋನ್‌ಗಳು, ಔಷಧ ಉತ್ಪನ್ನ ಹಾಗೂ ಇತರೆ ವಸ್ತುಗಳಿಗೆ ಗರಿಷ್ಠ ಸುಂಕ ಶೇ 10.8ರಷ್ಟಿತ್ತು. ಇದೀಗ ಈ ಎಲ್ಲ ಸರಕುಗಳ ಮೇಲೆ ಶೇ 25ರಷ್ಟು ಸುಂಕ ತೆರಬೇಕಿದೆ ಎಂದು ತಿಳಿಸಿದೆ.

ಅಮೆರಿಕದ ಒಟ್ಟು ಔಷಧಗಳ ಬೇಡಿಕೆಯ ಪೈಕಿ, ಭಾರತ ಪೂರೈಸುವ ಔಷಧಗಳ ಪ್ರಮಾಣ ಶೇ 47ರಷ್ಟು. ಒಂದು ವೇಳೆ ಅಮೆರಿಕ, ಔಷಧಗಳ ತಯಾರಿಕೆಯನ್ನು ಬೇರೆ ದೇಶಗಳಿಗೆ ಅಥವಾ ದೇಶದಲ್ಲಿನ ಉತ್ಪಾದನಾ ಘಟಕಗಳಿಗೆ ವಹಿಸಿದಲ್ಲಿ, ‌ಪೂರ್ಣ ಪ್ರಮಾಣದಲ್ಲಿ ಉತ್ಪಾದನಾ ಚಟುವಟಿಕೆಗಳು ಆರಂಭಗೊಳ್ಳುವುದಕ್ಕೆ ಕನಿಷ್ಠ 3ರಿಂದ 5 ವರ್ಷ ಬೇಕಾಗುತ್ತದೆ. ಇದು ಔಷಧಿ ಕೊರತೆಯನ್ನು ಹೆಚ್ಚಿಸುವುದಲ್ಲದೆ, ಅಮೆರಿಕದ ನಾಗರಿಕರು ಹೆಚ್ಚಿನ ದರ ನೀಡಿ ಔಷಧ ಖರೀದಿಸಬೇಕಾಗಬಹುದು. ಅಲ್ಲದೆ ಇದು ಔಷಧ ಕಂಪನಿಗಳ ಗಳಿಕೆಯ ಮೇಲೂ ಪರಿಣಾಮ ಬೀರಲಿದೆ ಎಂದೂ ಎಸ್‌ಬಿಐ ರಿಸರ್ಚ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.