ADVERTISEMENT

‘ಇಎಂಐ’ ಮುಂದೂಡಿಕೆ ಎಸ್‌ಬಿಐ ನಿಯಮ ಸರಳ

​ಪ್ರಜಾವಾಣಿ ವಾರ್ತೆ
Published 28 ಮೇ 2020, 19:45 IST
Last Updated 28 ಮೇ 2020, 19:45 IST
-
-   

ಮುಂಬೈ: ಅವಧಿ ಸಾಲಗಳ ಮಾಸಿಕ ಸಮಾನ ಕಂತು (ಇಎಂಐ) ಮರುಪಾವತಿಯನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಇನ್ನೂ ಮೂರು ತಿಂಗಳವರೆಗೆ (ಆಗಸ್ಟ್‌ 31) ಮುಂದೂಡಿದೆ.

‘ಇಎಂಐ’ ಮುಂದೂಡಿಕೆ ಸೌಲಭ್ಯ ಬಳಸಿಕೊಳ್ಳಲು ಇಷ್ಟಪಡುವ ಅರ್ಹ ಸಾಲಗಾರರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವ ಪ್ರಕ್ರಿಯೆಗೆ ಬ್ಯಾಂಕ್‌ ಚಾಲನೆ ನೀಡಿದೆ.

‘ಇಎಂಐ’ ಪಾವತಿಗೆ ಸಾಲಗಾರರು ಬ್ಯಾಂಕ್‌ ಶಾಖೆಗಳಿಗೆ ನೀಡಿರುವ ಅನುಮತಿಯನ್ನು ಮೂರು ತಿಂಗಳವರೆಗೆ ಸ್ಥಗಿತಗೊಳಿಸುವುದನ್ನು ಗ್ರಾಹಕರ ಗಮನಕ್ಕೆ ತರಲಿದೆ.

ADVERTISEMENT

ಎಸ್‌ಎಂಎಸ್‌ ಮಾಹಿತಿ: ‘ಇಎಂಐ’ ಮುಂದೂಡಿಕೆ ಪ್ರಕ್ರಿಯೆಯನ್ನು ಬ್ಯಾಂಕ್‌ ಸರಳಗೊಳಿಸಿದೆ. ಸಾಲ ಮರುಪಾವತಿ ಮುಂದೂಡಿಕೆಗೆ ಸಮ್ಮತಿ ನೀಡುವ ಸಂಬಂಧ 85 ಲಕ್ಷ ಅರ್ಹ ಸಾಲಗಾರರಿಗೆ ಎಸ್‌ಎಂಎಸ್‌ ರವಾನಿಸಿದೆ. ಎಸ್‌ಎಂಎಸ್‌ನಲ್ಲಿ ನಮೂದಿಸಿರುವ ಸಂಖ್ಯೆಗೆ ಗ್ರಾಹಕರು ಸಂದೇಶ ಸ್ವೀಕರಿಸಿದ 5 ದಿನಗಳಲ್ಲಿ ಸಾಲ ಮುಂದೂಡಿಕೆಗೆ ತಮ್ಮ ಸಮ್ಮತಿ ಇರುವುದನ್ನು 'Yes' ಎಂದು ಟೈಪಿಸಿ ಪ್ರತ್ಯುತ್ತರ ನೀಡಲು ಸೂಚಿಸಿದೆ.

ಅವಧಿ ಸಾಲಗಳನ್ನು ಆಗಸ್ಟ್‌ ಅಂತ್ಯದವರೆಗೆ ಮುಂದೂಡಲು ಆರ್‌ಬಿಐ ಕಳೆದ ವಾರ ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ. ಇದಕ್ಕೂ ಮೊದಲು ಮಾರ್ಚ್‌, ಏಪ್ರಿಲ್‌ ಮತ್ತು ಮೇ (3 ತಿಂಗಳ) ‘ಇಎಂಐ’ ಮುಂದೂಡಲು ಅವಕಾಶ ಕಲ್ಪಿಸಿತ್ತು. ಈಗ ಜೂನ್‌, ಜುಲೈ ಮತ್ತು ಆಗಸ್ಟ್‌ ತಿಂಗಳಿಗೂ ಈ ಸೌಲಭ್ಯ ವಿಸ್ತರಿಸಿದೆ. ಒಟ್ಟಾರೆ 6 ತಿಂಗಳವರೆಗೆ ಸಾಲ ಮುಂದೂಡಲು ಸಾಲಗಾರರಿಗೆ ಅವಕಾಶ ದೊರೆಯಲಿದೆ.

‘ಇಎಂಐ’ ಮುಂದೂಡಿಕೆಯ ಮೊದಲ ಹಂತದಲ್ಲಿ ಬ್ಯಾಂಕ್‌ನ ಶೇ 20ರಷ್ಟು ಸಾಲಗಾರರು ಈ ಸೌಲಭ್ಯದ ಪ್ರಯೋಜನ ಪಡೆದುಕೊಂಡಿದ್ದಾರೆ’ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್‌ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.